ಅಧ್ಯಕ್ಷ ಬದಲಾಯಿಸಿ ಕಮಲಾ ಮನವಿ

ವಾಷಿಂಗ್ಟನ್,ಅ.೩೧- ಈ ಬಾರಿಯ ಅಧ್ಯಕ್ಷೀಯ ಚುನಾವಣೆಯಲ್ಲಿ ಹೆಚ್ಚಿನ ಸಂಖ್ಯೆಂiiಲ್ಲಿ ಜನರು ಮತ ಚಲಾಯಿಸಿ ಶ್ವೇತ ಭವನದಲ್ಲಿ ಬದಲಾವಣೆ ತರಬೇಕೆಂದು ಡೆಮೊಕ್ರಟಿಕ್ ಪಕ್ಷದಿಂದ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಕಮಲಾ ಹ್ಯಾರೀಸ್ ಹೇಳಿದ್ದಾರೆ. ಟೆಕ್ಸಾಸ್‌ನಲ್ಲಿ ನಡೆದ ರ್‍ಯಾಲಿಯಲ್ಲಿ ಮಾತನಾಡಿದ ಅವರು, ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷ ಮತದಾರರಲ್ಲಿ ಗೊಂದಲ ಮೂಡಿಸುತ್ತಿದೆ ಎಂದು ಆರೋಪಿಸಿದ್ದಾರೆ.
ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಕಮಲಾ ಹ್ಯಾರೀಸ್, ರಿಪಬ್ಲಿಕನ್ ಪಕ್ಷದ ಭದ್ರ ಕೋಟೆಯಾಗಿರುವ ಟೆಕ್ಸಾಸ್‌ನಲ್ಲಿ ಅಬ್ಬರದ ಪ್ರಚಾರ ನಡೆಸಿದರು. ನಮ್ಮ ಶಕ್ತಿ ಅವರಿಗೆ ಗೊತ್ತಿದೆ. ನಾವು ಮತದಾನ ಮಾಡುವ ಮೂಲಕ ಗೆಲುವು ಸಾಧಿಸಿ ಬದಲಾವಣೆ ತರಬೇಕಾಗಿದೆ. ಈ ಮೂಲಕ ತಮ್ಮ ಪೂರ್ವಜರಿಗೆ ಮತದಾನದ ಮೂಲಕ ಗೌರವ ಸಮರ್ಪಿಸಬೇಕಾಗಿದೆ.
ಅಮೆರಿಕದಲ್ಲಿ ಮಾರಕ ಕೊರೊನಾ ಸೋಂಕು ನಿಭಾಯಿಸುವಲ್ಲಿ ಡೊನಾಲ್ಡ್ ಟ್ರಂಪ್ ಸಂಪೂರ್ಣವಾಗಿ ವಿಫಲರಾಗಿದ್ದಾರೆ, ಇದರ ಪರಿಣಾಮವೇ ದೇಶದಲ್ಲಿ ಇದುವರೆಗೆ ೨ ಲಕ್ಷ ೨೦ ಸಾವಿರ ಜನರು ಸೋಂಕಿಗೆ ಬಲಿಯಾಗಿದ್ದಾರೆ ಎಂದು ಆರೋಪಿಸಿದರು.
ಕಳೆದ ಕೆಲವು ತಿಂಗಳುಗಳಲ್ಲಿ ಸೋಂಕಿತರ ಪ್ರಮಾಣ ೩೦ ದಶಲಕ್ಷದವರೆಗೂ ಏರಿಕೆಯಾಗಿದೆ. ದೇಶದಲ್ಲಿ ನಿರುದ್ಯೋಗ ಸಮಸ್ಯೆ ತಲೆದೋರಿದೆ ಎಂದು ಅವರು ಆರೋಪಿಸಿದರು.
ಡೆಮೊಕ್ರಟಿಕ್ ಪಕ್ಷದಿಂದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಜೋ ಬಿಡೆನ್ ನಾಯಕತ್ವ ಕೊರೊನಾ ವಿರುದ್ಧ ಹೋರಾಟ ನಡೆಸಲು ಬದ್ಧವಾಗಿದೆ ಎಂದು ಘೋಷಿಸಿದರು.