ಅಧ್ಯಕ್ಷ ಗಾಧೆಗೆ ಏರಲು ರಾಜಕೀಯ ಜಿದ್ದಾಜಿದ್ದಿನ ಪೈಪೋಟಿ..!

ಕಾಂಗ್ರೆಸ್, ಬಿಜೆಪಿ, ಜೆಡಿಎಸ್, ಚದುರಂಗದಾಟದಲ್ಲಿ ಗ್ರಾಂ.ಪಂ ಯಾರ ಕೈವಶ
ದುರಗಪ್ಪ ಹೊಸಮನಿ
ಲಿಂಗಸುಗೂರು.ಜ.೧೧- ಕೆಲ ಗ್ರಾಪಂ.ಗಳಲ್ಲಿ ರಾಜಕೀಯ ಪಕ್ಷದ ಮುಖಂಡರು ಚುನಾವಣೆಯಲ್ಲಿ ಸಾಕಷ್ಟು ಖರ್ಚು ಮಾಡಿ ತಮ್ಮ ಪೆನಲ್ (ಗುಂಪು) ನ್ನು ಜಯಶಾಲಿಯನ್ನಾಗಿಸಿಕೊಂಡಿದ್ದು, ಮೀಸಲಾತಿಯನ್ವಯ ಅಧ್ಯಕ್ಷ ಗಾಧೆಗೆ ಏರಲು ಎಲ್ಲ ಸದಸ್ಯರನ್ನು ತಮ್ಮ ಹಿಡಿತದಲ್ಲಿಟ್ಟುಕೊಂಡು ಸಮಾಧಾನಪಡಿಸಿ ಮನವೊಲಿಸುವ ಪ್ರಯತ್ನಗಳೂ ನಡೆದಿವೆ. ಒಟ್ಟಾರೆ ಗ್ರಾಪಂ.ವಾರು ಮೀಸಲಾತಿ ಪ್ರಕಟಗೊಂಡರೆ ರಾಜಕೀಯ ಜಿದ್ದಾಜಿದ್ದಿನ ಪೈಪೋಟಿ ಏರ್ಪಡುವುದು ನಿಚ್ಚಳವಾಗಿದೆ.
ಈ ಬಾರಿ ಬಹುತೇಕ ಗ್ರಾಪಂ.ಗಳಲ್ಲಿ ಯುವಕರೇ ಹೆಚ್ಚಾಗಿ ಗೆಲುವು ಸಾಧಿಸಿದ್ದು, ಗ್ರಾಪಂ.ಗಳ ಗದ್ದುಗೆ ಏರಲು ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳ ಮಧ್ಯೆ ನೇರ ಪೈಪೋಟಿ ಏರ್ಪಟ್ಟಿದ್ದು, ಮೀಸಲಾತಿ ಪ್ರಕಟಗೊಂಡರೆ ತಮ್ಮ ಬೆಂಬಲಿಗರನ್ನು ಅಧ್ಯಕ್ಷ-ಉಪಾಧ್ಯಕ್ಷ ಗಾಧೆಗೇರಿಸಿ ಗ್ರಾಪಂ.ಗಳಲ್ಲಿ ಹಿಡಿತ ಸಾಧಿಸಲು ಎಲ್ಲಿಲ್ಲದ ಪ್ರಯತ್ನಗಳು ನಡೆದಿವೆ. ಯಾವುದೇ ಪಕ್ಷ ಬೆಂಬಲ ರಹಿತವಾಗಿ ತಮ್ಮ ಸ್ವಯಂ ಬಲದಿಂದ ಗೆಲುವು ಸಾಧಿಸಿದ ಸದಸ್ಯರನ್ನು ಬುಟ್ಟಿಗೆ ಹಾಕಿಕೊಳ್ಳುವ ಯತ್ನಗಳು ನಡೆದಿದ್ದು, ಇದರಿಂದ ಇಂತಹ ಸದಸ್ಯರಿಗೆ ಡಿಮಾಂಡ್ ಕೂಡ ಹೆಚ್ಚಾಗಿದೆ.
ಇದೀಗ ಗ್ರಾಮ ಪಂಚಾಯಿತಿ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಗೆ ಪ್ರಕ್ರೀಯೆ ಆರಂಭಗೊಳ್ಳಲಿದ್ದು, ಗ್ರಾಮ ಪಂಚಾಯಿತಿ ಮೀಸಲಾತಿ ಪ್ರಕಟಿಸುವ ಮುನ್ನವೇ, ಕೂಸು ಹುಟ್ಟೋ ಮುಂಚೆ ಕುಲಾಯಿ ತಯಾರಿಕೆ ಮುಂದಾದ ರಾಜಕೀಯ ಪಕ್ಷಗಳು, ಮತದಾರರು ಯೋಚನೆಯಲ್ಲಿ ಪ್ರತಿನಿಧಿಗಳು ಮೋಜಿನಲ್ಲಿ ಇರುವುದು ತಾಲೂಕಿನಲ್ಲಿ ಎದ್ದು ಕಾಣುತ್ತಿದೆ. ಇದೀಗ ಜಿಲ್ಲಾ ಚುನಾವಣಾ ಆಯೋಗ ಗ್ರಾಪಂ.ವಾರು ಮೀಸಲಾತಿ ಪ್ರಕಟಿಸಬೇಕಿದೆ. ಆದರೆ ಗ್ರಾಪಂ.ವಾರು ಅಧ್ಯಕ್ಷ-ಉಪಾಧ್ಯಕ್ಷ ಕೆಲ ಗ್ರಾಪಂ.ಗಳ ಸದಸ್ಯರು ಪ್ರವಾಸಕ್ಕೆ ತೆರಳಿದ್ದಾರೆ.
ತಾಲೂಕಿನ ಒಟ್ಟು ೨೯ ಗ್ರಾಮ ಪಂಚಾಯಿತಿಗಳ, ೫೩೧ ಸ್ಥಾನಗಳ ಪೈಕಿ ೪೫೬ ಸ್ಥಾನಗಳಿಗೆ ಚುನಾವಣೆ ನಡೆದಿದ್ದು, ೭೫ ಸ್ಥಾನಗಳು ಅವಿರೋಧವಾಗಿ ಆಯ್ಕೆಗೊಂಡಿವೆ. ರಾಜ್ಯ ಚುನಾವಣಾ ಆಯೋಗ ಜಿಲ್ಲೆಯ ೭ ತಾಲೂಕವಾರು ಮೀಸಲಾತಿ ಪ್ರಕಟಿಸಿದ್ದು, ತಾಲೂಕಿನ ಒಟ್ಟು ೩೦(೧೫) ಗ್ರಾಪಂ.ಗಳ ಪೈಕಿ ಪರಿಶಿಷ್ಟ ಜಾತಿ ೮(೪), ಪರಿಶಿಷ್ಟ ಪಂಗಡ ೭(೪), ಸಾಮಾನ್ಯ ೧೫(೭) ರಂತೆ ಮೀಸಲಾತಿ ಪ್ರಕಟಿಸಿದೆ. ಹಿಂದುಳಿದ ಅ ಮತ್ತು ಬ ವರ್ಗಕ್ಕೆ ಸಿಂಧನೂರು ಹೊರತುಪಡಿಸಿ ಉಳಿದ ತಾಲೂಕುಗಳಿಗೆ ಮೀಸಲಾತಿ ನೀಡದಿರುವುದು ಕೆಲ ಗ್ರಾಪಂ.ಗಳಲ್ಲಿ ಗದ್ದುಗೆ ಏರಬೇಕೆನ್ನುವ ಸದಸ್ಯರಿಗೆ ನಿರಾಶೆ ಮೂಡಿಸಿದೆ.
ಹಿಂದಿನ ಅವಧಿಯಲ್ಲಿ ಒಂದು ಸಲ ಅಧ್ಯಕ್ಷರಾದವರು ಐದು ವರ್ಷ ಅಧಿಕಾರ ನಡೆಸುತ್ತಿದ್ದರು. ಆದರೆ ಪ್ರಶಸ್ತ ವರ್ಷ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ತಲಾ ೩೦ ತಿಂಗಳ ಅವಧಿಗೆ ನಿಗಧಿ ಮಾಡಲಾಗಿದ್ದು. ಐದು ವರ್ಷ ಅವಧಿಯಲ್ಲಿ ಇಬ್ಬರಿಗೆ ಅಧ್ಯಕ್ಷ ಇಬ್ಬರಿಗೆ ಉಪಾಧ್ಯಕ್ಷ ಸ್ಥಾನ ದೊರೆಯಲಿದೆ. ಕಾಂಗ್ರಸ್ ಬಿಜೆಪಿ ಜೆಡಿಎಸ್ ಪಕ್ಷದ ಮುಖಂಡರು ತಮ್ಮದೇ ಆದಂತಹ ರಾಜಕೀಯ ತಂತ್ರಗಾರಿಗೆ ಬಳಸಿ ಪಂಚಾಯಿತಿ ಆಡಳಿತ ತಮ್ಮ ಕೈವಶ ಮಾಡಿಕೋಳ್ಳವರು ಇಲ್ಲವೋ ಕಾದುನೋಡಬೇಕಾಗಿದೆ.
ತಾಲೂಕಿನ ಚಿತ್ತಾಪುರ, ನರಕಲದಿನ್ನಿ, ನಾಗರಹಾಳ, ಹಲ್ಕಾವಟಗಿ, ಖೈರವಾಡಗಿ, ಗೌಡೂರು, ಮಾವಿನಬಾವಿ, ಗೊರೇಬಾಳ ಗ್ರಾಪಂ.ಗಳಲ್ಲಿ ಬಹುತೇಕ ಸದಸ್ಯರು ಪ್ರವಾಸಕ್ಕೆ ತೆರಳಿದ್ದು, ಇನ್ನೂ ಕೆಲ ಪಂಚಾಯಿತಿ ಸದಸ್ಯರು ಪ್ರವಾಸಕ್ಕೆ ತೆರಳಲಿದ್ದಾರೆಂದು ಹೇಳಲಾಗುತ್ತಿದೆ. ಗ್ರಾಪಂ.ವಾರು ಮೀಸಲಾತಿ ಪ್ರಕಟಗೊಂಡರೆ ಇನ್ನು ಕೆಲ ಗ್ರಾಪಂ.ಗಳ ಸದಸ್ಯರು ಪ್ರವಾಸಕ್ಕೆ ತೆರಳುವ ಸಾಧ್ಯತೆಯಿದೆ.