ಅಧ್ಯಕ್ಷ ಗಾದಿಗೆ ಮಹಾದೇವಿ ನಂಜುಂಡ – ನಟರಾಜು ನಡುವೆ ಬಿರುಸಿನ ಪೈಪೊಟಿ

ಕೆ.ಆರ್.ಪೇಟೆ, ಅ.27: ಪಟ್ಟಣದ ಪುರಸಭಾ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ಕೇವಲ ಮೂರು ದಿನಗಳು ಬಾಕಿ ಇದ್ದು ಬಿಜೆಪಿ ಪಾಳಯದಲ್ಲಿ ಅವಕಾಶಗಳು ಗರಿಗೆದರಿದ್ದು ಅಧ್ಯಕ್ಷ ಗಾದಿಗೆ ಮಹಾದೇವಿ ನಂಜುಂಡ ಮತ್ತು ನಟರಾಜು ನಡುವೆ ಬಿರುಸಿನ ಪೈಪೊಟಿ ಎದುರಾಗಿದೆ. ಕಾಂಗ್ರೆಸ್‍ಗೆ ಅಧ್ಯಕ್ಷ ಗಾದಿಯು ಕನಸಿನ ಮಾತಾಗಿದ್ದು ಈ ನಡುವೆ ಉಪಾದ್ಯಕ್ಷ ಹುದ್ದೆಗಾಗಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ತೀವ್ರವಾದ ಸ್ಪರ್ಧೆ ಏರ್ಪಡುವ ಲಕ್ಷಣಗಳು ಗೋಚರಿಸುತ್ತಿವೆ.
ಜೆಡಿಎಸ್‍ನಿಂದ ಗೆದ್ದು ನಾರಾಯಣಗೌಡರ ಪರ ಗುರುತಿಸಿಕೊಂಡಿದ್ದ 20 ನೇ ವಾರ್ಡಿನ ಗಾಯಿತ್ರಿ, ಹಾಗೂ 10 ನೇ ವಾರ್ಡಿನ ಇಂದ್ರಾಣಿವಿಶ್ವನಾಥ್, 2 ನೇವಾರ್ಡಿನ ಗಿರೀಶ್ ಈ ಮೂವರೂ ಬಿಜೆಪಿ ಪಾಳಯಕ್ಕೆ ಕೈಕೊಟ್ಟು ಕಾಂಗ್ರೆಸ್ ಸಂಪರ್ಕದಲ್ಲಿದ್ದು ಅಜ್ಞಾತ ಸ್ಥಳದಲ್ಲಿ ಇರುವುದು ಬಿಜೆಪಿಗರ ಕಣ್ಣು ಕೆಂಪಗಾಗುವಂತೆ ಮಾಡಿತ್ತು. ಹರಸಾಹಸ ಮಾಡಿದ ಬಿಜೆಪಿ 2 ನೇ ವಾರ್ಡಿನ ಗಿರೀಶ್ ರವರನ್ನು ಕರೆತರುವಲ್ಲಿ ಯಶಸ್ವಿಯಾಗಿದ್ದಾರೆ. ಉಳಿದ ಇಬ್ಬರು ಸದಸ್ಯರು ಕಳೆದ ಮೂರು ದಿನಗಳಿಂದ ಕಾಣೆಯಾಗಿದ್ದಾರೆ, ಈ ಸದಸ್ಯರು ಕಾಂಗ್ರೆಸ್ ಸಂಪರ್ಕದಲ್ಲಿ ಇದ್ದಾರೆಂದು ತಿಳಿದುಬಂದಿದೆ, ಸಂಪರ್ಕಕ್ಕೆ ಸಿಗದ ಇವರನ್ನು ಕರೆತರುವ ಎಲ್ಲಾ ಪ್ರಯತ್ನಗಳನ್ನು ಬಿಜೆಪಿ ಮಾಡುತ್ತಿದೆ. ಬಲ್ಲ ಮೂಲಗಳ ಪ್ರಕಾರ ಇವರುಗಳನ್ನು ಕಾಂಗ್ರೆಸ್ ನವರು ಅಪಹರಿಸಿರಬಹುದು ಎಂಬ ಶಂಕೆ ಸಾರ್ವಜನಿಕ ವಲಯದಿಂದ ವ್ಯಕ್ತವಾಗಿದೆ. ಈ ಮದ್ಯೆ ಕಾಂಗ್ರೆಸ್ ಹೇಗಾದರೂ ಮಾಡಿ ಉಪಾದ್ಯಕ್ಷ ಪಟ್ಟ ಹಾಗೂ ಸ್ಥಾಯಿ ಸಮಿತಿಗಳ ಹುದ್ದೆಗಳನ್ನಾದರೂ ಪಡೆಯಬೇಕೆಂದು ಪಣತೊಟ್ಟು ಅಖಾಡದಲ್ಲಿ ಬಿರುಸಿನ ರಾಜಕೀಯ ಸ್ಪರ್ದೆ ಒಡ್ಡುವ ಲಕ್ಷಣಗಳನ್ನು ತೋರಿಸುತ್ತಿದೆ. ಕಾಂಗ್ರೆಸ್ ಪಕ್ಷದ ಈ ಆಸೆ ಈಡೇರುವುದೇ ಅಥವಾ ನಾಟಕೀಯ ಬೆಳವಣಿಗೆಗಳು ನಡೆಯುತ್ತವೆಯೇ ಎಂಬುದನ್ನು ಕಾದು ನೋಡಬೇಕಿದೆ.