ಅಧ್ಯಕ್ಷ ಗದ್ದುಗೆ ಅಡ್ಡದಾರಿ ಹಿಡಿಯಲು ಬಿಡೆನ್ ಯತ್ನ: ಟ್ರಂಪ್

ವಾಷಿಂಗ್ಟನ್, ನ.೭- ಅಮೆರಿಕದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದೇನೆ ಎಂದು ಹೇಳಿಕೊಳ್ಳುವ ಅಡ್ಡದಾರಿಯನ್ನು ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜೋ ಬೀಡೆನ್ ಅವರು ಬಿಡಬೇಕು ಎಂದು ಅಮೆರಿಕದಲ್ಲಿ ಅಧ್ಯಕ್ಷ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ಮತಎಣಿಕೆಯಲ್ಲಿ ಅಕ್ರಮ ನಡೆದಿದೆ ಈ ಸಂಬಂಧ ಈಗಷ್ಟೇ ಕಾನೂನು ಪ್ರಕ್ರಿಯೆಗಳು ಆರಂಭವಾಗಿವೆ ಇದು ಮುಂದುವರಿಯಲಿದೆ ಎಂದು ಅವರು ತಿಳಿಸಿದ್ದಾರೆ.

ಹಲವು ರಾಜ್ಯಗಳಲ್ಲಿ ಮತ ಎಣಿಕೆ ಬಾಕಿಇದೆ ಹೀಗಿರುವಾಗ ತಾವು ಗೆಲುವು ಸಾಧಿಸಿದ್ದೇವೆ ಎಂದು ಬೀಡೆನ್ ಹೇಳಿಕೊಳ್ಳುವುದು ಸರಿಯಲ್ಲ. ಈ ಸಂಬಂದ ಕಾನೂನು ಹೋರಾಟ ನಡೆಸಲಾಗುವುದು ಎಂದು ಅವರು ಟ್ವೀಟ್ ಮಾಡಿದ್ದಾರೆ.

ರಿಪಬ್ಲಿಕನ್ ಪಕ್ಷದ ಹಿಡಿತದಲ್ಲಿರುವ ಅನೇಕ ರಾಜ್ಯಗಳಲ್ಲಿ ಆರಂಭದಿಂದಲೂ ತಾವೇ ಮುನ್ನಡೆ ಕಾಯ್ದುಕೊಂಡಿದ್ದು ರಾತ್ರೋರಾತ್ರಿ ಚುನಾವಣಾ ಅಕ್ರಮ ನಡೆಸಲಾಗಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ತಾವು ಮುನ್ನಡೆ ಕಾಯ್ದುಕೊಂಡಿರುವ ರಾಜ್ಯಗಳಲ್ಲಿ ಫಲಿತಾಂಶ ಏರುಪೇರಾಗಿದೆ ಇದು ಅಕ್ರಮಕ್ಕೆ ಅವಕಾಶ ಮಾಡಿಕೊಟ್ಟಿದೆ ಈ ಸಂಬಂಧ ಕಾನೂನು ಹೋರಾಟ ಮುಂದುವರಿಯಲಿದೆ ಎಂದು ಹೇಳಿದ್ದಾರೆ.

ಚುನಾವಣೆಯಲ್ಲಿ ಗೆಲ್ಲುವ ಸಲುವಾಗಿ ಅಕ್ರಮ ಮತ ಚಲಾವಣೆಯಾಗಿದೆ ಜೊತೆಗೆ ಅಕ್ರಮ ಮತಪತ್ರಗಳನ್ನು ಮತಎಣಿಕೆಯಲ್ಲಿ ಸೇರಿಸಲಾಗಿದೆ ಎಂದು ಅವರು ದೂರಿದ್ದಾರೆ.

ಯಾವುದೇ ಕಾರಣಕ್ಕೂ ಅಕ್ರಮ ಮತಗಳನ್ನು ಮತಎಣಿಕೆಯಲ್ಲಿ ಸೇರಿಸಬಾರದು ಎಂದು ನ್ಯಾಯಾಲಯದ ಮೆಟ್ಟಿಲೇರಲಾಗಿದೆ ಅಮೆರಿಕದ ಜನತೆ ತಮಗೆ ಮತ ಚಲಾಯಿಸಿದ್ದಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಚುನಾವಣೆಗೂ ಮುನ್ನ ಚಲಾವಣೆ ಯಾಗಿರುವ ಮತಗಳು ಸೇರಿದಂತೆ ಚುನಾವಣೆ ದಿನ ಚಲಾವಣೆ ಯಾಗಿರುವ ಮತಗಳನ್ನು ಮತ್ತೊಮ್ಮೆ ಮಾಡಬೇಕು ಆಗ ಮಾತ್ರ ಅಕ್ರಮ ಆಗಿರುವುದನ್ನು ಪತ್ತೆಹಚ್ಚಲು ಮತ್ತು ಅದನ್ನು ತಡೆಯಲು ಸಹಕಾರಿಯಾಗಲಿದೆ ಎಂದು ಅವರು ತಿಳಿಸಿದ್ದಾರೆ

ರಿಪಬ್ಲಿಕನ್ ಪಕ್ಷದ ಹಿಡಿತದಲ್ಲಿರುವ ರಾಜ್ಯಗಳಲ್ಲಿ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಗೆಲುವು ಸಾಧಿಸಿರುವುದು ಡೋನಾಲ್ಡ್ ಟ್ರಂಪ್ ಅವರ ಪಿತ್ತ ನೆತ್ತಿಗೇರುವಂತೆ ಮಾಡಿದೆ.

ಅಮೆರಿಕ ಅಧ್ಯಕ್ಷ ಚುನಾವಣೆಯ ಮತಎಣಿಕೆ ಇನ್ನೂ ಮುಂದುವರೆದಿದ್ದು ಕೆಲವು ರಾಜ್ಯಗಳಲ್ಲಿ ಗೊಂದಲದ ಗೂಡಾಗಿ ಪರಿಣಮಿಸಿದೆ ಸದ್ಯದ ಪರಿಸ್ಥಿತಿಯನ್ನು ಗಮನಿಸಿದರೆ ಫಲಿತಾಂಶ ಪ್ರಕಟಣೆ ಇನ್ನೂ ಹಲವು ದಿನಗಳು ಆಗುವ ಸಾಧ್ಯತೆಗಳು ಹೆಚ್ಚಿವೆ.