ಅಧ್ಯಕ್ಷ, ಆಯುಕ್ತರನ್ನು ಕೇಳಲು ನಾಗರಿಕರಿಗೆ ಬೆದರಿಕೆ

ಐಡಿಎಸ್‌ಎಂಟಿ ಬಡಾವಣೆ : ಬೀದಿ ದೀಪ ಕದಿಯುವ ಹಾವಳಿ
ರಾಯಚೂರು.ಜು.೨೩- ನಗರ ಬೀದಿ ದೀಪ ನಿರ್ವಹಣೆಯ ಸಮಸ್ಯೆಯಿಂದ ಅನೇಕ ಕಡೆ ಕತ್ತಲಲ್ಲಿ ಜನ ಓಡಾಡುವಂತಹ ಪರಿಸ್ಥಿತಿ ಇದ್ದರೆ, ಇನ್ನೂ ಕೆಲವೆಡೆ ಇರುವ ಬೀದಿ ದೀಪಗಳಲ್ಲು ರಾಜಾರೋಷವಾಗಿ ಕದ್ದು ಹಣ ಕೊಟ್ಟಲ್ಲಿ ಹಾಕುವಂತಹ ಪರಿಸ್ಥಿತಿ ನಗರಸಭೆಯಲ್ಲಿದೆ.
ಐಡಿಎಸ್‌ಎಂಟಿ ಲೇಔಟ್‌ನ ಮಾವಿನ ಕೆರೆ ದಡದ ಮೇಲೆ ಇರುವ ನಿವಾಸಿಗಳು ಬೀದಿ ದೀಪ ಕದಿಯುವ ಕಿರುಕುಳದಿಂದ ಪ್ರತಿನಿತ್ಯ ಒಂದಿಲ್ಲೊಂದು ಸಮಸ್ಯೆಗೆ ಗುರಿಯಾಗುತ್ತಿದ್ದಾರೆ. ರಾತ್ರಿ ವೇಳೆಯಲ್ಲಿ ಕೆರೆಯ ದಡದ ಮೇಲೆ ಕುಳಿತ ಕೆಲ ಕಿಡಿಗೇಡಿಗಳು ಯುವತಿಯರಿಗೆ ಮತ್ತು ಮಹಿಳೆಯರಿಗೆ ಕಿರುಕುಳ ನೀಡಿ, ಮದ್ಯಪಾನ ಮತ್ತು ದಾಂಧಲೆಯ ಕಿಡಿಗೇಡಿ ಕೃತ್ಯ ನಡೆಸುವುದಕ್ಕೆ ಬೀದಿ ದೀಪಗಳು ಇಲ್ಲದಿರುವುದು ನೆರವಾಗಿದೆ. ಸ್ಥಳೀಯ ನಿವಾಸಿಗಳು ಪರವಾಗಿ ಹುಲಿರಾಜ ಅವರು ಈ ಬಗ್ಗೆ ಸದಾರ್ ಬಜಾರ್ ಠಾಣೆಗೆ ದೂರು ನೀಡಿ ಪರಿಸ್ಥಿತಿ ವಿವರಿಸಿದ್ದಾರೆ.
ವಾರ್ಡ್ ೧೨ ಕ್ಕೆ ಬರುವ ಈ ಬಡಾವಣೆಯಲ್ಲಿ ಎರಡು ಕಂಬಗಳಿಗೆ ಇದ್ದ ಬೀದಿ ದೀಪಗಳನ್ನು ನಗರಸಭೆ ಸಿಬ್ಬಂದಿ ಎಂದು ಹೇಳಿಕೊಳ್ಳುವ ವ್ಯಕ್ತಿಗಳು ರಾಜಾರೋಷವಾಗಿ ಕಳುವು ಮಾಡಿ, ಬೇರೆಡೆ ಹಾಕಿದಂತಹ ಘಟನೆಗಳ ಬಗ್ಗೆ ಹುಲಿರಾಜ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಮನೆಯ ಮುಂದೆ ವಿದ್ಯುತ್ ದೀಪ ಅಳವಡಿಕೆಗೆ ಹಣ ವಸೂಲಿ ಮಾಡುವಂತಹ ದುಸ್ಥಿತಿ ಇಲ್ಲಿದೆ. ಈ ಹಿಂದೆ ಇದ್ದ ವಿದ್ಯುತ್ ದೀಪವನ್ನು ತೆಗೆದುಕೊಂಡು ಹೋಗಿದ್ದರಿಂದ ಕಂಬಕ್ಕೆ ಕೇವಲ ಕಬ್ಬಿಣದ ರಾಡ್ ಮಾತ್ರ ಉಳಿಯುವಂತಾಗಿದೆ.
ಇರುವ ವಿದ್ಯುತ್ ದೀಪಗಳನ್ನು ಏಕೆ ತೆಗೆದುಕೊಂಡು ಹೋಗಲಾಗುತ್ತಿದೆ ಎಂದು ಕೇಳಿದರೆ, ಈ ಬಗ್ಗೆ ಅಧ್ಯಕ್ಷ ಅಥವಾ ಆಯುಕ್ತರನ್ನು ಕೇಳಿ ಎಂದು ಸಾರ್ವಜನಿಕರನ್ನೆ ದಬಾಯಿಸಲಾಗುತ್ತಿದೆ. ನಗರಸಭೆ ಬೀದಿ ದೀಪ ನಿರ್ವಹಣೆಯ ನಿರ್ಲಕ್ಷ್ಯೆಯಿಂದ ಕತ್ತಲಾಗುತ್ತಿದ್ದಂತೆ ಬಡಾವಣೆ ಜನ ಹೊರ ರಸ್ತೆಗಲ್ಲಿ ಓಡಾಡುವುದೆ ಸಮಸ್ಯೆಯಾಗಿದೆ. ಕೆಲ ಪುಂಡ ಪೋಕರು ಮದ್ಯಪಾನ ಸೇವಿಸಿ, ಇಲ್ಲಿ ಓಡಾಡುವುದು ಮಹಿಳೆಯರು ಮತ್ತು ಯುವತಿಯರನ್ನು ಕಾಡಿಸುವುದು. ಇದನ್ನು ಪ್ರಶ್ನಿಸಿದರೆ, ಹಲ್ಲೆ ಮಾಡುವ ಮಟ್ಟಕ್ಕೆ ಬೆದರಿಸುತ್ತಾರೆ. ಇದರಿಂದ ಬಡಾವಣೆಯ ಜನ ಆತಂಕಕ್ಕೆ ಗುರಿಯಾಗುವಂತಾಗಿದೆ.
ರಾತ್ರಿಯಾಗುತ್ತಿದ್ದಂತೆ ಬಡಾವಣೆಯಿಂದ ಅತ್ಯಂತ ಸಮೀಪ ದಾರಿಯೆಂದೆ ಗುರುತಿಸಿಕೊಂಡ ಮಾವಿನ ಕೆರೆ ದಡದಿಂದ ಶಶಿಮಹಲ್ ವೃತ್ತಕ್ಕೆ ಹೋಗಲು ಸಾಧ್ಯವಿಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕಾರ್ಗತ್ತಲು ಮತ್ತು ಪುಡಾಡಿಗಳ ಹಾವಳಿಯಿಂದ ಜನ ಬೇರೆ ರಸ್ತೆಗಳನ್ನು ಸಂಚಾರಕ್ಕೆ ಆಯ್ಕೆ ಮಾಡಿಕೊಳ್ಳಬೇಕಾಗಿದೆ. ನಗರದ ಬೀದಿ ದೀಪ ನಿರ್ವಹಣೆ ಬಗ್ಗೆ ಸುಳ್ಳು ಹೇಳದೆ, ಸಾರ್ವಜನಿಕರ ಸಂಕಷ್ಟ ಅರಿತು ತಕ್ಷಣವೆ ಈ ಬಡಾವಣೆಯಲ್ಲಿ ಬೀದಿ ದೀಪ ಅಳವಡಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.