ಅಧ್ಯಕ್ಷೀಯ ಚುನಾವಣೆಗೆ ಟ್ರಂಪ್ ತಯಾರಿ

ನ್ಯೂಯಾರ್ಕ್, ಮಾ.೧೫- ಮುಂದಿನ ವರ್ಷ ನಡೆಯಲಿರುವ ಪ್ರತಿಷ್ಟಿತ ಅಮೆರಿಕಾ ಅಧ್ಯಕ್ಷೀಯ ಚುನಾವಣೆಗೆ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈಗಿನಿಂದಲೇ ತಯಾರಿ ಆರಂಭಿಸಿದ್ದು, ಹಲವೆಡೆ ಪ್ರಚಾರ ಆಂದೋಲನ ಕೂಡ ನಡೆಸಿದ್ದಾರೆ. ಮೂರನೇ ಜಾಗತಿಕ ಯುದ್ದ ತಡೆಯಬಲ್ಲ ಏಕೈಕ ವ್ಯಕ್ತಿ ನಾನೇ ಎಂದು ಟ್ರಂಪ್ ತಿಳಿಸಿದ್ದಾರೆ.
ಲೋವಾದ ಡೆವೆನ್‌ಪೋರ್ಟ್‌ನಲ್ಲಿ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದ ಟ್ರಂಪ್, ನಾನು ವಿಶ್ವ ಹಾಗೂ ಅಮೆರಿಕಾವನ್ನು ಮೂರನೇ ಜಾಗತಿಕ ಯುದ್ದದಿಂದ ಕಾಪಾಡಬಲ್ಲ ಏಕೈಕ ವ್ಯಕ್ತಿಯಾಗಿದ್ದೇನೆ. ನಾನು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಜೊತೆ ಉತ್ತಮ ಸಂಬಂಧ ಹೊಂದಿದ್ದು, ಅವರು ನನ್ನ ಮಾತನ್ನು ಕೇಳುತ್ತಾರೆ. ಹಾಗಾಗಿ ನಮ್ಮ ಜೊತೆಗಿನ ಮಾತುಕತೆ ಒಂದು ದಿನಕ್ಕಿಂತ ಹೆಚ್ಚಿನ ಕಾಲ ತೆಗೆದುಕೊಳ್ಳಲು ಸಾಧ್ಯವಿಲ್ಲ. ಯುದ್ದ ಅಂತ್ಯವಾಗಲಿದೆ. ಅಧ್ಯಕ್ಷ ಜೋ ಬೈಡೆನ್ ಅವರು ರಷ್ಯಾವನ್ನು ನೇರವಾಗಿ ಚೀನಾದ ಕಡೆಗೆ ತಳ್ಳಿಹಾಕಿದ್ದಾರೆ ಎಂದು ಟ್ರಂಪ್ ತಿಳಿಸಿದ್ದಾರೆ. ಉಕ್ರೇನ್ ಮೇಲಿನ ಆಕ್ರಮಣದ ಹಿನ್ನೆಲೆಯಲ್ಲಿ ಅಮೆರಿಕಾ ಸೇರಿದಂತೆ ಹಲವಾರು ಪಾಶ್ಚಿಮಾತ್ಯ ದೇಶಗಳು ರಷ್ಯಾ ಮೇಲೆ ಹಲವು ರೀತಿಯ ನಿರ್ಬಂಧಗಳನ್ನು ಹೇರಿದೆ. ಹೀಗಾಗಿ ರಷ್ಯಾ ಅನಿವಾರ್ಯವಾಗಿ ತನ್ನ ವ್ಯಾಪಾರ ವಹಿವಾಟಿಗಾಗಿ ಚೀನಾವನ್ನೇ ನೆಚ್ಚಿಕೊಂಡಿದೆ. ಒಟ್ಟಿನಲ್ಲಿ ೨೦೨೪ರಲ್ಲಿ ನಡೆಯುವ ಅಮೆರಿಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್ ಮೇಲುಗೈ ಹೊಂದಿದ್ದಾರೆ ಎಂದು ಕೆಲವೊಂದು ಮೂಲಗಳು ತಿಳಿಸಿದ್ದು, ಆದರೆ ಇದು ಎಷ್ಟರ ಮಟ್ಟಿಗೆ ಮತಗಳಾಗಿ ಪರಿವರ್ತನೆಯಾಗುತ್ತದೆ ಎಂದು ಕಾದು ನೋಡಬೇಕಿದೆ.