ಅಧ್ಯಕ್ಷೀಯ ಚರ್ಚೆ ಹೊರಗುಳಿದ ಟ್ರಂಪ್!

ನ್ಯೂಯಾರ್ಕ್, ಆ.೨೧- ಮುಂಬರುವ ಅಮೆರಿಕಾ ಅಧ್ಯಕ್ಷೀಯ ಚುನಾವಣೆಗೆ ಸಂಬಂಧಿಸಿದಂತೆ ಡೊನಾಲ್ಡ್ ಟ್ರಂಪ್ ಅಚ್ಚರಿಯ ನಿರ್ಧಾರ ತೆಗೆದುಕೊಂಡಿದ್ದಾರೆ. ಚುನಾವಣೆಗೂ ಮುನ್ನ ರಿಪಬ್ಲಿಕನ್ ಪಕ್ಷದೊಳಗೆ ಪ್ರತಿಸ್ಪರ್ಧಿಗಳೊಂದಿಗೆ ನಡೆಯುವ ಚರ್ಚೆಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಟ್ರಂಪ್ ಘೋಷಿಸಿದ್ದಾರೆ. ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಪ್ರಾಥಮಿಕ ಹಂತದ ಚರ್ಚೆಯು ಆಗಸ್ಟ್ ೨೩ ರಂದು ನಡೆಯಲಿದೆ.
ಮೂಲಗಳ ಪ್ರಕಾರ ಇತ್ತೀಚಿಗೆ ನಡೆದ ಸಮೀಕ್ಷೆಯಲ್ಲಿ ರಿಪಬ್ಲಿಕನ್ ಪಕ್ಷದಲ್ಲಿ ಟ್ರಂಪ್ ಎಲ್ಲಾ ಪ್ರತಿಸ್ಪರ್ಧಿಗಳೊಂದಿಗೆ ಹೆಚ್ಚಿನ ಮುನ್ನಡೆ ಹೊಂದಿದ್ದು, ಶೇ.೫೨ ಪ್ರತಿಶತ ಬೆಂಬಲವನ್ನು ಹೊಂದಿದ್ದಾರೆ ಎನ್ನಲಾಗಿದೆ. ಸದ್ಯ ಇದೇ ವಿಚಾರವನ್ನು ಮುಂದಿಟ್ಟುಕೊಂಡು ಟ್ರಂಪ್ ಅವರು ಚರ್ಚೆಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಘೋಷಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಟ್ರಂಪ್, ನಾನು ಯಾರೆಂದು ಜನರಿಗೆ ಗೊತ್ತಿದೆ. ಅದೂ ಅಲ್ಲದೆ ನನ್ನ ಅಧ್ಯಕ್ಷೀಯ ಅವಧಿಯಲ್ಲಿ ಎಷ್ಟೊಂದು ಯಶಸ್ವಿಯಾಗಿದ್ದೆ ಎಂದು ತಿಳಿದಿದೆ ಎಂದು ಟ್ರಂಪ್ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದಾರೆ. ಇನ್ನು ಆಗಸ್ಟ್ ೨೩ರಂದು ರಿಪಬ್ಲಿಕನ್ ಪಕ್ಷದ ಮೊದಲ ಅಧ್ಯಕ್ಷೀಯ ಪ್ರಾಥಮಿಕ ಚರ್ಚೆ ನಡೆಯಲಿದ್ದು, ಬಳಿಕ ಮರುದಿನ ಎರಡನೇ ಚರ್ಚೆ ನಡೆಯಲಿದೆ ಎನ್ನಲಾಗಿದೆ. ಅದೂ ಅಲ್ಲದೆ ಮುಂದಿನ ತಿಂಗಳಲ್ಲಿ ಹಲವು ಚರ್ಚೆಗಳು ನಡೆಯಲಿದೆ ಎಂದು ಹೇಳಲಾಗಿದೆ. ರಿಪಬ್ಲಿಕನ್‌ನ ಪ್ರಾಥಮಿಕ ಚುನಾವಣೆಯ ಮತದಾನವು ಅಯೋವಾ ರಾಜ್ಯದಲ್ಲಿ ಮುಂದಿನ ವರ್ಷ ಜನವರಿ ೧೫ರಂದು ಪ್ರಾರಂಭವಾಗಲಿದೆ. ಆದರೆ ಕ್ಷೇತ್ರವನ್ನು ಗೆಲ್ಲಲು ಸಹಾಯ ಮಾಡಲು ಹೆಚ್ಚಿನ ಚರ್ಚೆಗಳು ನಡೆಯುವ ಸಾಧ್ಯತೆಯಿದೆ. ಇನ್ನು ಹಲವಾರು ಕ್ರಿಮಿನಲ್ ಆರೋಪಗಳನ್ನು ಟ್ರಂಪ್ ಎದುರಿಸುತ್ತಿದ್ದರೂ ಪ್ರಸ್ತುತ ರಿಪಬ್ಲಿಕನ್ ನಾಮನಿರ್ದೇಶನಕ್ಕೆ ಮುಂಚೂಣಿಯಲ್ಲಿದ್ದಾರೆ ಎಂದು ಇತ್ತೀಚಿನ ಸಮೀಕ್ಷೆಗಳು ನಿರಂತರವಾಗಿ ತಿಳಿಸಿದೆ.