ಅಧಿವೇಶನದಲ್ಲಿ ಸರ್ಕಾರದ ವೈಫಲ್ಯಗಳ ಪ್ರಸ್ತಾಪ: ಡಿಕೆಶಿ


ಬೆಳಗಾವಿ,ಡಿ6: ಪ್ರಸಕ್ತ ಬೆಳಗಾವಿಯಲ್ಲಿ ನಡೆಯಲಿರುವ ವಿಧಾನ ಮಂಡಲದ ಅಧಿವೇಶನದಲ್ಲಿ ರಾಜ್ಯ ಸರ್ಕಾರದ ವೈಫಲ್ಯಗಳನ್ನು ಪ್ರಮುಖವಾಗಿ ಪ್ರಸ್ತಾಪಿಸಲಾಗುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಹೇಳಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೆರೆ ಪರಿಹಾರ ನೀಡುವಲ್ಲಿ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ, ಅಧಿವೇಶನದಲ್ಲಿ ಜನರ ಪರ ಧ್ವನಿ ಎತ್ತಲಿಲ್ಲವೆಂದರೆ ನಮ್ಮ ಕರ್ತವ್ಯಕ್ಕೆ ನಾವೇ ಮೋಸ ಮಾಡಿದ ಹಾಗಲ್ಲವೇ? ಎಂದು ಪ್ರಶ್ನಿಸಿದರು.
ಅಧಿವೇಶನವನ್ನು ಬೆಳಗಾವಿಯಲ್ಲೇ ನಡೆಸುವುದಕ್ಕೆ ಕೆಲವರು ವಿರೋಧ ವ್ಯಕ್ತಪಡಿಸಿದ್ದರೂ ಬೆಳಗಾವಿಯಲ್ಲೇ ನಡೆಸುವುಂತೆ ತಾವು ಒತ್ತಡ ಹಾಕಿದ್ದಾಗಿ ಅವರು ಹೇಳಿದರು.
ಅಧಿವೇಶನವನ್ನು ಮುಂದೂಡದಂತೆ ಸ್ಪೀಕರ್ ಅವರಿಗೆ ಈಗಾಗಲೇ ಹೇಳಿದ್ದು ಮುಂದೂಡುವ ಕಾರ್ಯ ನಡೆದರೆ ಸಾಮೂಹಿಕವಾಗಿ ಬೃಹತ್ ಪ್ರತಿಭಟನೆಯನ್ನು ನಡೆಸಲಾಗುತ್ತದೆ ಎಂದು ಅವರು ತಿಳಿಸಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಮಹದಾಯಿ ವಿಚಾರದಲ್ಲಿ ಏನಾದರೂ ಮಾಡುತ್ತಾರೆ ಎಂದುಕೊಂಡಿದ್ದೆವು. ಆದರೆ ಹಾಗಾಗಿಲ್ಲ, ಮಹದಾಯಿ ತೀರ್ಪು ಬಂದರೂ ಕೆಲಸವಿನ್ನೂ ಆರಂಭವಾಗಿಲ್ಲ ಎಂದು ಅವರು ದೂರಿದರು.
ಬೊಮ್ಮಾಯಿಯವರೂ ಕೂಡ ರಾಜಕೀಯವಾಗಿ ವೀಕ್ ಆಗಿದ್ದಾರೆ. ಅವರದೇ ಸಂಪುಟದ ಸಚಿವ ನಿರಾಣಿ ಮುಖ್ಯಮಂತ್ರಿಯಾಗುತ್ತಾರೆಂದು ಹೇಳಿದರೂ ಅವರನ್ನು ಇನ್ನೂ ಏಕೆ ಮಂತ್ರಿ ಮಂಡಲದಲ್ಲಿ ಇಟ್ಟುಕೊಳ್ಳಲಾಗಿದೆಯೋ ಗೊತ್ತಿಲ್ಲ ಎಂದು ಛೇಡಿಸಿದ ಡಿಕೆಶಿ, ಸರ್ಕಾರದಲ್ಲಿ ಸ್ಥಿರತೆ ಎಲ್ಲಿದೆ? ಎಂದು ಪ್ರಶ್ನಿಸಿದರು.
ನಮ್ಮ ವಿರುದ್ಧ 10% ಲಂಚದ ಆರೋಪ ಮಾಡಿದವರು ಆಗಲೇ ತನಿಖೆ ಮಾಡಿಸಬೇಕಿತ್ತು, ಈಗ 40% ಲಂಚ ಕೊಡುತ್ತಿರುವ ಕುರಿತಂತೆ ಗುತ್ತಿಗೆದಾರರೇ ಶಾಸಕರಿಗಿಷ್ಟು, ಸಚಿವರಿಗಿಷ್ಟು ಎಂದು ದೊಡ್ಡ ಪಟ್ಟಿಯನ್ನೇ ಕೊಟ್ಟಿದ್ದಾರೆ. ಅದರ ತನಿಖೆ ನಡೆಸಲಿ ಎಂದು ಅವರು ಗುಡುಗಿದರು.
ಇಡೀ ದೇಶದಲ್ಲಿಯೇ ಅತ್ಯಂತ ಭ್ರಷ್ಟ ಸರ್ಕಾರ ಈ ರಾಜ್ಯದಲ್ಲಿದೆ ಎಂದವರು ಟೀಕಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ಉಸಿರು ನಿಲ್ಲಿಸುತ್ತೇವೆ ಎಂಬ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಹೇಳಿಕೆಗೆ ಪ್ರತಿಕ್ರಿಯಿಸುತ್ತ, ಪಾಪ ಯಡಿಯೂರಪ್ಪನವರಿಗೆ ತಮ್ಮ ಆಂತರಿಕ ನೋವನ್ನು ಹೊರಹಾಕುವ ವಿಧಾನ ಇದಾಗಿದೆಯೇ ಹೊರತು ಬೇರೇನೂ ಅಲ್ಲ ಎಂದು ಡಿಕೆಶಿ ನುಡಿದರು.
ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಒಮ್ಮತದಿಂದ ಕೆಲಸ ಮಾಡುತ್ತಿದೆ ಎಂದ ಅವರು, ಚುನಾವಣೆ ಆದ ಬಳಿಕವೂ ಎಲ್ಲ ಒಗ್ಗಟ್ಟಿನಿಂದಲೇ ಕೆಲಸ ಮಾಡುತ್ತಾರೆ ಇದೇ ನಮ್ಮ ಗೆಲುವಿನ ಭರವಸೆ ಎಂದು ಹೇಳಿದರು.
ಬೆಳಗಾವಿಯಲ್ಲಿ ನಮಗೆ ಯಾರೂ ಎದುರಾಳಿ ಇಲ್ಲ ಎಂದ ಅವರು, ನಮ್ಮಲ್ಲಿ ಯಾರೂ ಬಂಡಾಯದವರಿಲ್ಲ, ಅಷ್ಟೇ ಅಲ್ಲದೇ ಪಕ್ಷಕ್ಕೆ ಮೋಸ ಮಾಡಿದವರೂ ಇಲ್ಲ ಎಂದು ಪರೋಕ್ಷವಾಗಿ ರಮೇಶ ಜಾರಕಿಹೊಳಿಯವರಿಗೆ ಟಾಂಗ್ ಕೊಟ್ಟರು.