ಅಧಿವೇಶನದಲ್ಲಿ ಕಾರ್ಖಾನೆ ದಾಖಲೆ ಬಿಡುಗಡೆ: ಶಾಸಕ

ಸಂಜೆವಾಣಿ ವಾರ್ತೆ
ಕಂಪ್ಲಿ ಸೆ 20 : ಮೊನ್ನೆಯ ವಿಧಾನಸಭೆ ಅಧಿವೇಶನದಲ್ಲಿ ನಿಗದಿತ ಸಮಯದ ಕಾರಣ ಕಂಪ್ಲಿ ಸಕ್ಕರೆ ಕಾರ್ಖಾನೆ ಜಾಗದ ಬಗ್ಗೆ ಸವಿವರವಾಗಿ ಮಾಹಿತಿ ಪ್ರಸ್ತುತಪಡಿಸಲಾಗಿಲ್ಲ. ಆದರೆ ಸೆ.20ರ ಅಧಿವೇಶನದಲ್ಲಿ ಚರ್ಚೆಗೆ ಅರ್ಧ ಗಂಟೆ ಸಮಯಾವಕಾಶ ಲಭಿಸಲಿದ್ದು ಕಾರ್ಖಾನೆ ಜಾಗದ ಬಗ್ಗೆ ಸಂಪೂರ್ಣ ದಾಖಲೆ ಬಿಡುಗಡೆಗೊಳಿಸುತ್ತೇನೆ ಎಂದು ಶಾಸಕ ಜೆ ಎನ್ ಗಣೇಶ್ ತಿಳಿಸಿದರು.
ಅವರು ಪಟ್ಟಣದ ಅತಿಥಿ ಗೃಹ ಆವರಣದಲ್ಲಿ ಭಾನುವಾರದಂದು ಜರುಗಿದ 2021-22ನೇ ಸಾಲಿನ ಪಿಡಬ್ಲ್ಯುಡಿ ಇಲಾಖೆಯ ಅಪೆಂಡಿಕ್ಸ್-ಇ ಯೋಜನೆಯಡಿ 2 ಕೋಟಿ ರೂ. ವೆಚ್ಚದಲ್ಲಿ  ವಿವಿಐಪಿ ಪ್ರವಾಸಿ ಮಂದಿರ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ಸದ್ಯ 2 ಕೋಟಿ ರೂ. ವೆಚ್ಚದಲ್ಲಿ ವಿವಿಐಪಿ ಪ್ರವಾಸಿ ಮಂದಿರ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಗಿದ್ದು, ಇದೇ ಕಾಮಗಾರಿಗೆ ಹೆಚ್ಚುವರಿ 2 ಕೋಟಿ ರೂ. ಅನುದಾನ ಬಿಡುಗಡೆಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇನ್ನು ಕಂಪ್ಲಿ ಪಟ್ಟಣದ ವಿವಿಧ ವಾರ್ಡ್ ಗಳಲ್ಲಿ ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿಗಳಿಗಾಗಿ ಡಿಎಂಎಫ್ ಅನುದಾನದಡಿಯಲ್ಲಿ 3 ಕೋಟಿ ರೂ. ಬಿಡುಗಡೆಯಾಗಿದೆ. ಆದರೆ ದುರಾದೃಷ್ಟಕರ ಸಂಗತಿ ಎಂದರೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು 2 ವರ್ಷ ಕಳೆದರೂ ಕಾಂಗ್ರೆಸ್ ನ ಓರ್ವ ಶಾಸಕರಿಗೂ ಕೂಡ 1 ರೂ. ಅನುದಾನ ಕೊಟ್ಟಿಲ್ಲ. ಯಾವುದೇ ಅನುದಾನ ಪಡೆದುಕೊಳ್ಳಬೇಕಾದರೆ 10% ಕಮಿಷನ್ ನೀಡಿ ಪಡೆದುಕೊಳ್ಳಬೇಕಾದ ದೌರ್ಭಾಗ್ಯ ನಮಗೆ ಎದುರಾಗಿದೆ‌. ರಾಜ್ಯದಲ್ಲಿ ಬಿಜೆಪಿ ಗೂಟ ಹೊಡೆದುಕೊಂಡು ಅಧಿಕಾರದಲ್ಲಿ ಇರಲ್ಲ‌. ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಜಿಪಂ ಸದಸ್ಯ ಕೆ.ಶ್ರೀನಿವಾಸರಾವ್, ಪಿಡಬ್ಲ್ಯುಡಿ ಎಇಇ ಕಿಶೋರ್ ಕುಮಾರ್, ಜೆಇ ಪ್ರಾಣೇಶ್, ಕಂಪ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಇಟಗಿ ಬಸವರಾಜಗೌಡ, ಯೂತ್ ಕಾಂಗ್ರೆಸ್ ಕಂಪ್ಲಿ ಬ್ಲಾಕ್ ಅಧ್ಯಕ್ಷ ಆರ್ ಪಿ ಶಶಿಕುಮಾರ್, ಪುರಸಭೆ ಮಾಜಿ ಅಧ್ಯಕ್ಷ ಎಂ ಸುಧೀರ್,ಪುರಸಭೆ ಸದಸ್ಯರಾದ ಭಟ್ಟ ಪ್ರಸಾದ್, ವೀರಾಂಜನೇಯಲು,ಲಡ್ಡು ಹೊನ್ನೂರ್ ವಲಿ, ಮುಖಂಡರಾದ ಬಿ ನಾರಾಯಣಪ್ಪ, ಎಲ್ ರಾಮಾನಾಯ್ಡು, ರಮೇಶ್ ಕೊಟ್ಟೂರು, ಅಯ್ಯೋಧಿ ವೆಂಕಟೇಶ್, ಮುರಾರಿ, ಬಳೆ ಮಲ್ಲಿಕಾರ್ಜುನ, ಜಾಫರ್, ನಾಗರಾಜ, ಕಂಬಳಿ ರಾಮಕೃಷ್ಣ ಸೇರಿದಂತೆ ಅನೇಕರಿದ್ದರು.