
ಕಲಬುರಗಿ:ಮೇ.18: ಅನಾರೋಗ್ಯಕರ ಜೀವನಶೈಲಿಯಿಂದ ಬೊಜ್ಜು, ಸ್ಥೂಲಕಾಯದ ಪ್ರಮಾಣ ಹೆಚ್ಚಾಗಿದೆ. ಒತ್ತಡದ ಜೀವನ ಸೇರಿದಂತೆ ಮುಂತಾದ ಕಾರಣದಿಂದ ಅಧಿಕ ರಕ್ತದೊತ್ತಡವಿರುವವರ ಸಂಖ್ಯೆ ಹೆಚ್ಚಾಗುತ್ತಾ ಸಾಗಿದೆ. ಇದು ಉಸಿರಾಟ ಸಂಬಂಧಿತ ಸಮಸ್ಯೆಗಳೊಂದಿಗೆ ಹೃದಯಘಾತಕ್ಕೆ ಕಾರಣವಾಗುವ ಮೂಲಕ ಜೀವಕ್ಕೆ ಅಪಾಯಕಾರಿಯಾಗಿದೆ ಎಂದು ಬಸವೇಶ್ವರ ಆಸ್ಪತ್ರೆಯ ತಜ್ಞ ವೈದ್ಯ ಡಾ.ವಿಶ್ವರಾಜ ಬಿ.ತಡಕಲ್ ಹೇಳಿದರು.
ನಗರದ ಆಳಂದ ರಸ್ತೆಯ ಶೆಟ್ಟಿ ಕಾಂಪೆಕ್ಸ್ ಎದುರುಗಡೆಯಿರುವ 'ತಡಕಲ್ ಸ್ಪೇಷಾಲಿಟಿ ಆಷ್ಪತ್ರೆ'ಯಲ್ಲಿ 'ಬಸವೇಶ್ವರ ಸಮಾಜ ಸೇವಾ ಬಳಗ'ದ ವತಿಯಿಂದ ಬುಧವಾರ ಜರುಗಿದ 'ವಿಶ್ವ ಅಧಿಕ ರಕ್ತದೊತ್ತಡ ದಿನಾಚರಣೆ'ಯ ಕಾರ್ಯಕ್ರಮವನ್ನು ಉಚಿತವಾಗಿ ಬಿಪಿ ಪರೀಕ್ಷಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಪೌಷ್ಠಿಕಾಂಶಗಳುಳ್ಳ ಆಹಾರ ಸೇವನೆ, ಶುದ್ಧವಾದ ನೀರನ್ನು ಕುಡಿಯುವುದು, ದಿನಕ್ಕೆ 7-8 ಗಂಟೆಗಳ ಕಾಲ ಗಾಡ ನಿದ್ರೆ, ನಿಯಮಿತವಾಗಿ ವ್ಯಾಯಾಮ, ಯೋಗ ಮಾಡುವುದು, ಸಕಾರಾತ್ಮಕ ಚಿಂತನೆ ಮಾಡುವುದು ಸೇರಿದಂತೆ ಮುಂತಾದ ಆರೋಗ್ಯಕರ ಜೀವನಶೈಲಿ ಅಳವಡಿಸಿಕೊಳ್ಳಬೇಕು. ಹೆಚ್ಚು ಹುಳಿ, ಖಾರ, ಉಪ್ಪು, ಎಣ್ಣೆಯಲ್ಲಿ ಕರಿದ ತಿನುಸುಗಳ ಸೇವೆನೆ ಬೇಡ. ಧೂಮಪಾನ, ಮದ್ಯಪಾನ, ತಂಬಾಕು ಸೇವನೆ ಮಾಡಬೇಡಿ. ಅತಿಯಾದ ಮೋಬೈಲ್ ಬಳಕೆ, ಟಿ.ವಿ.ವೀಕ್ಷಣೆ ಬೇಡ. ಆಗಾಗ್ಗೆ ಬಿಪಿ ಪರೀಕ್ಷೆ ಮಾಡಿಕೊಂಡು ವ್ಯತ್ಯಾಸವಾದರೆ ಜೀವನಶೈಲಿ ಬದಲಾವಣೆಯೊಂದಿಗೆ ಅದರ ಸಮತೋಲನ ನಿರ್ವಹಣೆ ಮಾಡಬೇಕು ಎಂದು ಎಂದು ಕೆಲವು ಪ್ರಮುಖ ಸಲಹೆ-ಸೂಚನೆಗಳನ್ನು ನೀಡಿದರು.
ಕಾರ್ಯಕ್ರಮದಲ್ಲಿ ಎಚ್.ಬಿ.ಪಾಟೀಲ್, ನರಸಪ್ಪ ಬಿರಾದಾರ ದೇಗಾಂವ, ಶಿವಯೋಗಪ್ಪ ಬಿರಾದಾರ, ಬಸವರಾಜ ಹುಡಗಿ ಚನ್ನು ಹುಲಿಪಾಟೀಲ, ಶಿಲ್ಪಾ ರಾಠೋಡ ಸೇರಿದಂತೆ ಇನ್ನಿತರರು ಇದ್ದರು.