ಅಧಿಕ ಮಾಸದಲ್ಲಿ  ದಾನ ಸೇವಾದಿ  ಕಾರ್ಯಗಳು ಮಾಡಿದರೆ ಸಂಪತ್ತು ಅಧಿಕಗೊಳ್ಳುತ್ತದೆ

ಸಂಜೆವಾಣಿ ವಾರ್ತೆ

ರಾಯಬಾಗ.ಜು.೨೪; : ಅಧಿಕ ಎಂದರೆ ಹೆಚ್ಚು.ಅಧಿಕ ಮಾಸವು ಅತ್ಯಂತ ಶ್ರೇಷ್ಠವಾದುದು.ಈ ಅಧಿಕ ಮಾಸದಲ್ಲಿ ಶ್ರದ್ಧೆಯಿಂದ ಶ್ರೀದೇವಿ ಮಹಾತ್ಮೆ ಪುರಾಣ ಪ್ರವಚನ ಶ್ರವಣ ಮಾಡಿದರೆ ಸಕಲರಿಗೂ ನೆಮ್ಮದಿ ಪ್ರಾಪ್ತಿಯಾಗುತ್ತದೆ. ಮಾತ್ರವಲ್ಲ ತನು ಮನ ಭಾವದಿಂದ ಮಾಡುವ ಗುರು ಸೇವೆ ಸತ್ಕಾರ್ಯಗಳನ್ನು ಮಾಡಿದರೆ ನಮ್ಮ ಇಷ್ಟಾರ್ಥಗಳು ಅಧಿಕಗೊಳ್ಳುತ್ತವೆ ಎಂದು ಪರಮಾನಂದವಾಡಿಯ ಶ್ರೀ ಗುರುದೇವ ಬ್ರಹ್ಮಾನಂದ ಆಶ್ರಮದ ಪೀಠಾಧಿಪತಿಗಳಾದ ಡಾ.  ಅಭಿನವ ಬ್ರಹ್ಮಾನಂದ ಮಹಾಸ್ವಾಮಿಗಳು  ನುಡಿದರು. ಅವರು ತಾಲ್ಲೂಕಿನ ಸುಕ್ಷೇತ್ರ ಪರಮಾನಂದವಾಡಿಯ ಶ್ರೀ ಗುರುದೇವ ಬ್ರಹ್ಮಾನಂದ ಆಶ್ರಮದಲ್ಲಿ ಅಧಿಕ ಮಾಸದ ಪ್ರಯುಕ್ತ ಹಮ್ಮಿಕೊಂಡ ಶ್ರೀದೇವಿ ಮಹಾತ್ಮೆ ಪುರಾಣ  ಪ್ರವಚನಕ್ಕೆ ಚಾಲನೆ ನೀಡಿ  ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ನಮ್ಮ ಅಂತರಂಗದ ಅಸುರ ಗುಣಗಳನ್ನು ಹೋಗಲಾಡಿಸಿ ಸದ್ಗುಣಗಳನ್ನು ಮೈಗೂಡಿಕೊಂಡು ಸತ್ಕಾರ್ಯ ಹಾಗೂ ಸನ್ಮಾರ್ಗದಲ್ಲಿ ನಡೆಯಬೇಕು. ಹಲವು ವರುಷಗಳ ಪರ್ಯಂತ ಲಿಂಗೈಕ್ಯ ಪರಮಪೂಜ್ಯ ಸದ್ಗುರು ಶ್ರೀ ಸಿದ್ದೇಶ್ವರ ಮಹಾ ಶಿವಯೋಗಿಗಳು ಈ ಅಧಿಕ ಮಾಸದಲ್ಲಿ  ಶ್ರೀ ದೇವಿ ಮಹಾತ್ಮೆ ಪುರಾಣ ಪ್ರವಚನ  ನಡೆಸಿಕೊಂಡು ಬರುತ್ತಿದ್ದರು. ಶ್ರೀ ಸಿದ್ದೇಶ್ವರ ಅಪ್ಪಾಜಿ ಅವರು ಈ  ಸುಕ್ಷೇತ್ರದಲ್ಲಿ  ತಮ್ಮೆಲ್ಲರನ್ನೂ  ಶ್ರವಣಯೋಗಿಗಳನ್ನಾಗಿ ಮಾಡಿದ್ದರು.ತಾವೆಲ್ಲರೂ ತನು ಮನ ಧನ ಭಾವಗಳಿಂದ ಗುರುಸೇವೆ ಮಾಡಿ ಸದ್ಗುರುಗಳ ದಿವ್ಯ ಅನುಗ್ರಹಕ್ಕೆ ಪಾತ್ರರಾಗಿ ಈ ಮಾನವ ಜನ್ಮವನ್ನು ಸಾರ್ಥಕ ಪಡಿಸಿಕೊಳ್ಳಬೇಕೆಂದು ನುಡಿದರು. ನಂದಗಾಂವದ  ಭೂಕೈಲಾಸ ಮಂದಿರದ ಪರಮಪೂಜ್ಯ ಶ್ರೀ ಮಹಾದೇವ ಮಹಾರಾಜರು ದಯಮಾಡಿಸಿ ಸ್ವಾರಸ್ಯಕರವಾಗಿ ಪುರಾಣ ಪ್ರವಚನ ನೀಡಿ ಈ ಅಧಿಕ ಮಾಸದಲ್ಲಿ ತಾವೆಲ್ಲರೂ ಪಾಲ್ಗೊಂಡು ಮನಸನ್ನು ಗುರುವಿಗೆ ಸಮರ್ಪಿಸಿ ದೇವಿಯ ಪಾರಾಯಣ ಮಾಡಿ ಪುಣ್ಯವನ್ನು ಸಂಪಾದಿಸಿಕೊಳ್ಳಬೇಕು ಎಂದು ನುಡಿದರು. ಶಿವನಗೌಡ ಶೂರ್ಪಾಲಿ ಅವರ ಹಾರ್ಮೋನಿಯಂ ಸಾಥ್ ಹಾಗೂ  ರಾಮಯ್ಯ ಶಿವನೂರ ಅವರ ತಬಲಾ ಸಾಥ್  ಪುರಾಣದ ಮೆರುಗು ಇಮ್ಮಡಿಗೊಳಿಸುತ್ತಿದೆ. ಹಿರಿಯ ಚಿಂತಕರಾದ ಡಿ.ಎಸ್.ನಾಯಿಕ ವೇದಿಕೆ ಮೇಲೆ ಉಪಸ್ಥಿತರಿದ್ದರು. ನೂರಾರು ಸದ್ಭಕ್ತರು ಪಾಲ್ಗೊಂಡಿದ್ದರು.ಜುಲೈ 27 ರ ವರೆಗೆ ಪ್ರಸ್ತುತ ಈ ಪುರಾಣ ಪ್ರವಚನ ನಡೆಯುತ್ತದೆ.