ಅಧಿಕಾರ ಹಂಚಿಕೆಗೆ ಚೌಕಾಸಿ

ನವದೆಹಲಿ,ಜೂ.೬:ಮೂರನೇ ಬಾರಿಗೆ ದೇಶದ ಪ್ರಧಾನಿಯಾಗಿ ನರೇಂದ್ರಮೋದಿ ಅವರ ಪ್ರಮಾಣವಚನ ಸ್ವೀಕಾರಕ್ಕೆ ಸಿದ್ಧತೆಗಳು ನಡೆದಿರುವಾಗಲೇ ಎನ್‌ಡಿಎನಲ್ಲಿ ಅಧಿಕಾರ ಹಂಚಿಕೆಯ ಚೌಕಾಸಿ ನಡೆದಿದ್ದು, ಮಿತ್ರಪಕ್ಷಗಳ ಸಚಿವ ಸ್ಥಾನ ಬೇಡಿಕೆ ಬಗ್ಗೆ ಬಿಜೆಪಿ ನಾಯಕರುಗಳು ಇಂದು ಸಭೆ ನಡೆಸಿದ್ದಾರೆ.
ಎನ್‌ಡಿಎನಲ್ಲಿರುವ ಬಿಜೆಪಿಯ ಮಿತ್ರ ಪಕ್ಷಗಳು ಲೋಕಸಭೆಯ ಸ್ಪೀಕರ್‌ಸ್ಥಾನ ಸೇರಿದಂತೆ ಪ್ರಮುಖ ಖಾತೆಗಳಿಗೆ ಬೇಡಿಕೆ ಇಟ್ಟಿದ್ದು, ಯಾವ ಪಕ್ಷಗಳಿಗೆ ಎಷ್ಟು ಸಚಿವ ಸ್ಥಾನ ನೀಡಬೇಕು, ಯಾವೆಲ್ಲ ಖಾತೆಯನ್ನು ಮಿತ್ರಪಕ್ಷಗಳಿಗೆ ಬಿಟ್ಟುಕೊಡಬೇಕು ಎಂಬ ಬಗ್ಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ನಿವಾಸದಲ್ಲಿ ಬಿಜೆಪಿಯ ಪ್ರಮುಖ ನಾಯಕರುಗಳು ಸಭೆ ನಡೆಸಿ ಸಮಾಲೋಚನೆ ನಡೆಸಿದ್ದಾರೆ.
ಪ್ರಧಾನಿಯಾಗಿ ನರೇಂದ್ರಮೋದಿ ಅವರ ಪ್ರಮಾಣವಚನ ಸ್ವೀಕರಿಸುವ ಸಮಾರಂಭದಲ್ಲಿ ಬಿಜೆಪಿ ಸೇರಿದಂತೆ ಎನ್‌ಡಿಎನ ಹಲವರು ಸಚಿವ ಸ್ಥಾನದ ಪ್ರಮಾಣವಚನವನ್ನು ಸ್ವೀಕರಿಸಲಿದ್ದು, ಯಾರನ್ನೆಲ್ಲ ಮಂತ್ರಿ ಮಾಡಬೇಕು ಎಂಬ ಬಗ್ಗೆ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರ ನಿವಾಸದಲ್ಲಿ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜ್‌ನಾಥ್‌ಸಿಂಗ್ ಸೇರಿದಂತೆ ಬಿಜೆಪಿ ಪ್ರಮುಖ ಮುಖಂಡರ ಸಭೆ ನಡೆದಿದ್ದು, ಈ ಸಭೆಯಲ್ಲಿ ಎನ್‌ಡಿಎ ಮಿತ್ರಪಕ್ಷಗಳಿಗೆ ಎಷ್ಟು ಸಚಿವ ಸ್ಥಾನ ನೀಡಬೇಕು, ಬಿಜೆಪಿಯಿಂದ ಎಷ್ಟು ಜನ ಸಚಿವರಾಗಬೇಕು ಎಂಬೆಲ್ಲ ವಿಚಾರಗಳ ಬಗ್ಗೆ ಈ ನಾಯಕರುಗಳು ಚರ್ಚೆ ನಡೆಸಿದ್ದಾರೆ.
ಸರ್ಕಾರ ರಚನೆಂiiಲ್ಲಿ ಕಿಂಗ್‌ಮೇಕರ್‌ಗಳಾಗಿ ಗುರುತಿಸಿಕೊಂಡಿರುವ ತೆಲುಗುದೇಶಂ ಮತ್ತು ಜೆಡಿಯು ಪಕ್ಷಗಳು ಲೋಕಸಭೆಯ ಸ್ಪೀಕರ್ ಸ್ಥಾನಕ್ಕೆ ಪಟ್ಟು ಹಿಡಿದಿದ್ದು, ಸ್ಪೀಕರ್ ಸ್ಥಾನವನ್ನು ಮಿತ್ರಪಕ್ಷಗಳಿಗೆ ಬಿಟ್ಟುಕೊಡಬೇಕೇ ಇಲ್ಲವೇ ತನ್ನಲ್ಲೇ ಉಳಿಸಿಕೊಳ್ಳಬೇಕೇ ಎಂಬ ಬಗ್ಗೆ ಬಿಜೆಪಿ ನಾಯಕರ ಸಭೆಯಲ್ಲಿ ಸಮಾಲೋಚನೆಗಳು ನಡೆದಿವೆ ಎಂದು ಹೇಳಲಾಗಿದೆ.
ಲೋಕಸಭೆಯ ಸ್ಪೀಕರ್‌ಸ್ಥಾನದ ಬಗ್ಗೆ ತೆಲುಗುದೇಶಂನ ಮುಖ್ಯಸ್ಥ ಚಂದ್ರಬಾಬುನಾಯ್ಡು, ೪ ಸಂಪುಟ ದರ್ಜೆಯ ಸಚಿವ ಸ್ಥಾನಕ್ಕೆ ಪಟ್ಟು ಹಿಡಿದಿದ್ದು, ಜೆಡಿಯುನ ಮುಖ್ಯಸ್ಥ ಬಿಹಾರದ ಮುಖ್ಯಮಂತ್ರಿ ನಿತೀಶ್‌ಕುಮಾರ್ ರೈಲ್ವೆಯಂತಹ ಮಹತ್ವದ ಖಾತೆ ಸೇರಿದಂತೆ ಮೂರು ಸಂಪುಟ ದರ್ಜೆಯ ಸಚಿವಸ್ಥಾನಕ್ಕೆ ಬೇಡಿಕೆ ಇಟ್ಟಿದ್ದಾರೆ.
ಶಿವಸೇನೆ ೧, ಸಂಪುಟ ದರ್ಜೆ ೨, ರಾಜ್ಯ ಸಚಿವ ಖಾತೆಗಳಿಗೆ ಬೇಡಿಕೆ ಇಟ್ಟಿದ್ದರೆ, ಚಿರಾಗ್‌ಪಾಸ್ವಾನ್ ನೇತೃತ್ವದ ಲೋಕಜನಶಕ್ತಿ ಪಕ್ಷ ೧ ಸಂಪುಟ ದರ್ಜೆ ಹಾಗೂ ೧ ರಾಜ್ಯ ಖಾತೆಗೆ ಪಟ್ಟು ಹಿಡಿದಿದೆ. ಹಾಗೆಯೇ ಜೆಡಿಎಸ್ ಕೃಷಿಯಂತಹ ಮಹತ್ವದ ಖಾತೆ ನೀಡುವಂತೆ ಕೋರಿದೆ. ಜತೆಗೆ ಹೆಚ್‌ಎಂಎಸ್ ಸಂಪುಟ ದರ್ಜೆ ಸಚಿವ ಸ್ಥಾನ ನೀಡಬೇಕು ಎಂದು ಬೇಡಿಕೆ ಇಟ್ಟಿವೆ.
ಮಿತ್ರ ಪಕ್ಷಗಳ ಸಚಿವಸ್ಥಾನ ಬೇಡಿಕೆ ಬಗ್ಗೆ ಜೆ.ಪಿ ನಡ್ಡಾ ಅವರ ನೇತೃತ್ವದಲ್ಲಿ ನಡೆದಿರುವ ಬಿಜೆಪಿ ನಾಯಕರು ಮಹತ್ವದ ಸಭೆಯಲ್ಲಿ ಚರ್ಚೆಗಳು ನಡೆದಿದ್ದು, ಅಂತಿಮವಾಗಿ ಪ್ರಧಾನಿ ನರೇಂದ್ರ ಮೋದಿಯವರ ಜತೆ ಚರ್ಚಿಸಿ ಮಿತ್ರಪಕ್ಷಗಳಿಗೆ ಎಷ್ಟು ಸಚಿವ ಸ್ಥಾನ, ಯಾವ ಇಲಾಖೆಗಳ ಜವಾಬ್ದಾರಿ ನೀಡಬಹುದು ಎಂಬ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಾಗುತ್ತದೆ.

ಸಾಮಾನ್ಯ ಕನಿಷ್ಠ ಕಾರ್ಯಕ್ರಮ
ಎನ್‌ಡಿಎ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಎನ್‌ಡಿಎ ಸಾಮಾನ್ಯ ಕನಿಷ್ಠ ಕಾರ್ಯಕ್ರಮ ಕಾರ್ಯಸೂಚಿಯನ್ನು ರೂಪಿಸಬೇಕು ಎಂಬ ಬಗ್ಗೆಯೂ ಮಿತ್ರ ಪಕ್ಷಗಳು ಹೇಳಿದ್ದು, ಸರ್ಕಾರ ರಚನೆಯಾದ ಮೇಲೆ ಎನ್‌ಡಿಎ ಸಾಮಾನ್ಯ ಕನಿಷ್ಠ ಕಾರ್ಯಕ್ರಮಗಳ ಕಾರ್ಯಸೂಚಿ ತಯಾರಾಗಲಿದೆ.
ಕೇಂದ್ರ ಸರ್ಕಾರದ ಮಟ್ಟದಲ್ಲಿ ಮುಂದೆ ಏನೆಲ್ಲ ಕಾರ್ಯಕ್ರಮಗಳನ್ನು ಜಾರಿ ಮಾಡಬೇಕು. ಯಾವ ಕಲ್ಯಾಣ ಯೋಜನೆಗಳನ್ನು ರೂಪಿಸಬೇಕು ಎಂಬೆಲ್ಲ ಅಂಶಗಳು ಈ ಸಾಮಾನ್ಯ ಕನಿಷ್ಠ ಕಾರ್ಯಕ್ರಮದಲ್ಲಿ ಇರಲಿವೆ.
ಮುಂದೆ ಯಾವುದೇ ಯೋಜನೆಯನ್ನು ಜಾರಿ ಮಾಡುವ ಮೊದಲು ಎನ್‌ಡಿಎ ಸಭೆಯಲ್ಲಿ ಚರ್ಚಿಸಿ ತೀರ್ಮಾನಗಳಾಗಬೇಕು ಎಂಬ ಬೇಡಿಕೆಯನ್ನು ಮಿತ್ರಪಕ್ಷಗಳು ಬಿಜೆಪಿ ಮುಂದೆ ಇಟ್ಟಿವೆ. ಹಾಗಾಗಿ ಪ್ರಧಾನಿ ಮೋದಿ ಅವರು ಈ ಹಿಂದಿನ ಜಾರಿ ಮಾಡಿದ ರೀತಿಯಲ್ಲಿ ಕಾರ್ಯಕ್ರಮವನ್ನು ಏಕಪಕ್ಷೀಯವಾಗಿ ಜಾರಿ ಮಾಡುವುದು ಈಗಿನ ಪರಿಸ್ಥಿತಿಯಲ್ಲಿ ಕಷ್ಟ ಎಂದು ಹೇಳಲಾಗಿದೆ.

ರಾಜ್ಯದಿಂದ ಯಾರಿಗೆಲ್ಲ ಸಚಿವ ಪಟ್ಟ
ಪ್ರಧಾನಿ ನರೇಂದ್ರಮೋದಿ ನೇತೃತ್ವದ ಹೊಸ ಸಚಿವ ಸಂಪುಟದಲ್ಲಿ ರಾಜ್ಯದಿಂದ ಯಾರಿಗೆಲ್ಲ ಸಚಿವ ಸ್ಥಾನ ಸಿಗಲಿದೆ ಎಂಬ ಬಗ್ಗೆ ಚರ್ಚೆಗಳು ನಡೆದಿದ್ದು, ರಾಜ್ಯಕ್ಕೆ ೫-೬ ಸಚಿವಸ್ಥಾನ ಸಿಗುವ ಸಾಧ್ಯತೆ ಇದೆ. ಜೆಡಿಎಸ್‌ನ ಹೆಚ್.ಡಿ ಕುಮಾರಸ್ವಾಮಿ ಅವರಿಗೆ ಕೇಂದ್ರ ಮಂತ್ರಿಗಿರಿ ಸಿಗುವುದು ಪಕ್ಕಾ ಆಗಿದ್ದು, ಬಿಜೆಪಿಯಿಂದ ಯಾರಿಗೆ ಸಚಿವ ಸ್ಥಾನ ಸಿಗಲಿದೆ ಎಂಬುದು ಕುತೂಹಲ ಮೂಡಿಸಿದೆ.
ಬಿಜೆಪಿಯಿಂದ ಮಾಜಿ ಮುಖ್ಯಮಂತ್ರಿಗಳಾ ಜಗದೀಶ್‌ಶೆಟ್ಟರ್, ಬಸವರಾಜ ಬೊಮ್ಮಾಯಿ, ಮಾಜಿ ಸಚಿವ ವಿ ಸೋಮಣ್ಣ ಹಾಲಿ ಕೇಂದ್ರ ಸಚಿವ ಪ್ರಲ್ಹಾದ್‌ಜೋಷಿ, ಶೋಭಾಕರಂದ್ಲಾಜೆ, ೪ ಬಾರಿ ಸಂಸತ್‌ಗೆ ಆಯ್ಕೆಯಾಗಿರುವ ಬಿ.ವೈ. ರಾಘವೇಂದ್ರ ೫ ಬಾರಿ ಸತತವಾಗಿ ಲೋಕಸಭಾ ಚುನಾವಣೆಯಲ್ಲಿ ಗೆದ್ದಿರುವ ಬಾಗಲಕೋಟೆಯ ಪಿ.ಸಿ ಗದ್ದಿಗೌಡರ್, ಬೆಂಗಳೂರು ಕೇಂದ್ರದಿಂದ ಆಯ್ಕೆಯಾಗಿರುವ ಪಿ.ಸಿ ಮೋಹನ್ ಇವರುಗಳು ಸಚಿವರಾಗುವ ರೇಸ್‌ನಲ್ಲಿ ಇದ್ದು, ಅಂತಿಮವಾಗಿ ಯಾರಿಗೆ ಅದೃಷ್ಟ ಒಲಿಯುತ್ತದೋ ಕಾದು ನೋಡಬೇಕು.