ಅಧಿಕಾರ ಸ್ವೀಕಾರ ಸಮಾರಂಭ


ಬ್ಯಾಡಗಿ,ಫೆ.27: ಪಟ್ಟಣದ ಹಿಂದುಳಿದ ವರ್ಗಗಳ 40 ಉಪಜಾತಿಗಳಿಗೆ ಮೀಸಲಾಗಿರುವ ಏಕೈಕ ಮುಕ್ತಿಧಾಮವು ಹೆಚ್ಚಿನ ಸ್ಥಳಾವಕಾಶದ ಕೊರತೆಯಿಂದ ಬಳಲುತ್ತಿದ್ದು, ನೂತನ ಸಮಿತಿಯ ಮನವಿಯ ಮೇರೆಗೆ ಮುಕ್ತಿಧಾಮದ ವಿಸ್ತರಣೆಗೆ ಸರ್ಕಾರದಿಂದ 10ಎಕರೆ ಜಮೀನು ಹಾಗೂ ಅದರ ಸಮಗ್ರ ಅಭಿವೃದ್ಧಿಗಾಗಿ 50 ಲಕ್ಷ ರೂಗಳ ಅನುದಾನವನ್ನು ಒದಗಿಸುವ ನಿಟ್ಟಿನಲ್ಲಿ ತಾವು ಪ್ರಾಮಾಣಿಕವಾಗಿ ಪ್ರಯತ್ನಿಸುವುದಾಗಿ ರಾಜ್ಯ ಅರಣ್ಯ ಅಭಿವೃಧ್ದಿ ನಿಗಮದ ಅಧ್ಯಕ್ಷರಾದ ಶಾಸಕ ಬಸವರಾಜ ಶಿವಣ್ಣನವರ ಹೇಳಿದರು.
ಪಟ್ಟಣದ ವಾಲ್ಮೀಕಿ ಭವನದಲ್ಲಿ ನಡೆದ ಹಿಂದುಳಿದ ಹಾಗೂ ದಲಿತ ವರ್ಗಗಳ ಮುಕ್ತಿಧಾಮ ಅಭಿವೃದ್ಧಿ ಸಮಿತಿಯ ಉದ್ಘಾಟನೆ ಮತ್ತು ನೂತನ ಪದಾಧಿಕಾರಿಗಳ ಅಧಿಕಾರ ಸ್ವೀಕಾರ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಹಿಂದುಳಿದ ವರ್ಗಗಳ ಮುಕ್ತುಧಾಮ ಬಹುವರ್ಷಗಳ ಹಿಂದೆಯೇ ಸ್ಥಾಪಿತಗೊಂಡು ಅಭಿವೃದ್ಧಿಗೆ ಮುಂದಾಗಬೇಕಿತ್ತು. ಈವರೆಗೂ ಈ ಮುಕ್ತಿಧಾಮದ ಅಭಿವೃದ್ಧಿಗೆ ಯಾವುದೇ ನೆರವನ್ನು ಪಡೆಯದೇ ಸಾರ್ವಜನಿಕವಾಗಿ ಅಭಿವೃದ್ಧಿಗೊಳಿಸಲು ಮುಂದಾಗಿರುವುದು ಶ್ಲಾಘನೀಯ. ನೂತನ ಸಮಿತಿಯ ಮನವಿಯಂತೆ ಇದರ ವಿಸ್ತರಣೆಗೆ ಸರ್ಕಾರದಿಂದ 10ಎಕರೆ ಜಮೀನು ಹಾಗೂ ಅದರ ಸಮಗ್ರ ಅಭಿವೃದ್ಧಿಗಾಗಿ 50 ಲಕ್ಷ ರೂಗಳ ಅನುದಾನದ ಮಂಜೂರಾತಿ ಮಾಡಿಸಲು ತಾವು ಪ್ರಾಮಾಣಿಕವಾಗಿ ಶ್ರಮಿಸುವುದಾಗಿ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕರುಗಳಾದ ಸುರೇಶಗೌಡ ಪಾಟೀಲ ಹಾಗೂ ವಿರುಪಾಕ್ಷಪ್ಪ ಬಳ್ಳಾರಿ ಮಾತನಾಡಿದರು. ಇದೇ ಸಂದರ್ಭದಲ್ಲಿ ರಾಜ್ಯದಲ್ಲಿ ಅನಾಥ ಮತ್ತು ಬಡ ಕುಟುಂಬದ ಸುಮಾರು 5ಸಾವಿರಕ್ಕೂ ಹೆಚ್ಚು ಶವಗಳಿಗೆ ಅಂತ್ಯ ಸಂಸ್ಕಾರವನ್ನು ನಿಸ್ವಾರ್ಥ ಮನೋಭಾವನೆಯಿಂದ ನೆರವೇರಿಸಿದ ಮುಕ್ತಿಧಾಮದ ಮಹಾಮಾತೇ ಎನ್ನಿಸಿಕೊಂಡಿರುವ ಆಂಬುಲೆನ್ಸ್ ಡ್ರೈವರ್ ರಾಮನಗರದ ಆಶಾ ವೆಂಕಟಸ್ವಾಮಿ ಅವರನ್ನು ಸಮಿತಿಯ ವತಿಯಿಂದ ಸನ್ಮಾನಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಖಂಡ ಚಿಕ್ಕಪ್ಪ ಹಾದಿಮನಿ ವಹಿಸಿದ್ದರು. ಪುರಸಭೆಯ ಸದಸ್ಯರುಗಳಾದ ರಾಮಣ್ಣ ಕೋಡಿಹಳ್ಳಿ, ಫಕ್ಕೀರಮ್ಮ ಚಲುವಾದಿ, ಸುಭಾಸ ಮಾಳಗಿ, ತಹಶೀಲ್ದಾರ ರವಿ ಕೊರವರ, ಮುಖ್ಯಾಧಿಕಾರಿ ವಿನಯಕುಮಾರ ಹೊಳಿಯಪ್ಪಗೋಳ, ಎಸ್.ಎನ್.ಯಮುನಕ್ಕನವರ, ಸುರೇಶ ಆಸಾದಿ, ಹೊನ್ನೂರಪ್ಪ ಕಾಡಸಾಲಿ, ದುರ್ಗೇಶ ಗೋಣೆಮ್ಮನವರ, ರಾಜು ಹುಲ್ಲತ್ತಿ ಸೇರಿದಂತೆ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.