ಅಧಿಕಾರ ಸಮಾಜದ ಬೆಳವಣಿಗೆಗೆ ಸದುಪಯೋಗವಾಗುವುದು ಅಗತ್ಯ

ಕಲಬುರಗಿ,ಸೆ.13: ವ್ಯಕ್ತಿಗೆ ದೊರಕುವ ಹುದ್ದೆ, ಗೌರವಗಳು ಅಧಿಕಾರ ಚಲಾಯಿಸಕ್ಕಲ್ಲ. ಬದಲಿಗೆ ಹುದ್ದೆಯ ಫಲಾನುಭವಿಗಳಿಗೆ ನ್ಯಾಯಯುತವಾಗಿ ಬಳಕೆಯಾಗಬೇಕು. ಆಗ ಮಾತ್ರ ಹುದ್ದೆ, ವ್ಯಕ್ತಿಗೆ ನಿಜವಾದ ಗೌರವ ದೊರೆತಂದಾಗುತ್ತದೆ. ಸಮಾಜ ಒಳಿತಿಗಾಗಿ ಅಧಿಕಾರ ಸದುಪಯೋಗವಾಗುವುದು ಇಂದಿನ ಅಗತ್ಯತೆಯಾಗಿದೆ ಎಂದು ಜೇವರ್ಗಿ ಸರ್ಕಾರಿ ಪಿಯು ಕಾಲೇಜಿನ ಪ್ರಾಚಾರ್ಯ ಮಹಮ್ಮದ್ ಅಲ್ಲಾಉದ್ದಿನ್ ಸಾಗರ ಅಭಿಮತಪಟ್ಟರು.
ಯಡ್ರಾಮಿ ಮತ್ತು ಮಳ್ಳಿ ಸರ್ಕಾರಿ ಪಿಯು ಕಾಲೇಜುಗಳ ಪ್ರಾಚಾರ್ಯರಾಗಿ ಬುಧವಾರ ಹೆಚ್ಚುವರಿ ಪ್ರಭಾರ ವಹಿಸಿಕೊಂಡ ತಮಗೆ ಇಲ್ಲಿನ ಸರ್ಕಾರಿ ಪಿಯು ಕಾಲೇಜಿನಲ್ಲಿ ಬುಧವಾರ ಸ್ವಾಗತ ಹಾಗೂ ವರ್ಗಾವಣೆಗೊಂಡ ಉಭಯ ಕಾಲೇಜುಗಳ ಪ್ರಭಾರಿ ಪ್ರಾಚಾರ್ಯ ಎನ್.ಆರ್ ಕುಲಕರ್ಣಿ ಅವರಿಗೆ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಸತ್ಕಾರ ಸ್ವೀಕರಿಸಿ ಮಾತನಾಡುತ್ತಿದ್ದರು.
ವಿದ್ಯಾರ್ಥಿಗಳು ನಿಮ್ಮ ಜೀವನದಲ್ಲಿ ಉನ್ನತವಾದ ಗುರಿಯನ್ನು ನಿಗದಿಪಡಿಸಿಕೊಂಡು, ಅದನ್ನು ತಲುಪಲು ಸಮಯದ ಸದುಪಯೋಗ, ದೃಢ ಸಂಕಲ್ಪ, ಉತ್ಸಾಹ, ಉತ್ತಮ ನಡವಳಿಕೆ, ಸರಳತೆ, ತಾಳ್ಮೆ, ಶಿಸ್ತು, ಪ್ರಾಮಾಣಿಕತೆ, ಮಾನವೀಯ ಮೌಲ್ಯಗಳ ಅಳವಡಿಕೆಯೊಂದಿಗೆ ನಿರಂತರವಾಗಿ ಶ್ರಮಸಿದರೆ ಉನ್ನತ ಸಾಧನೆ ಮಾಡಲು ಸಾಧ್ಯವಿದೆ. ಗುರು-ಹಿರಿಯರನ್ನು ಗೌರವಿಸುವ, ಪರಸ್ಪರ ಪ್ರೀತಿ,ಸ್ನೇಹ,ಸಹಬಾಳ್ವೆಯಿಂದ ಜೀವನ ಸಾಗಿಸುವ, ಸಕಾರಾತ್ಮಕವಾದ ಚಿಂತನೆ, ಸಮಾಜ ಸೇವೆಯಂತಹ ಮುಂತಾದ ಗುಣಗಳನ್ನು ಬೆಳೆಸಿಕೊಳ್ಳಬೇಕು. ಯಡ್ರಾಮಿ, ಮಳ್ಳಿ ಕಾಲೇಜಿಗಳ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಂದರು.
ವರ್ಗಾವಣೆಗೊಂಡ ಪ್ರಭಾರಿ ಪ್ರಾಚಾರ್ಯ ಎನ್.ಆರ್ ಕುಲಕರ್ಣಿ ಮಾತನಾಡಿ, ಇಲ್ಲಿನ ವಿದ್ಯಾರ್ಥಿಗಳು, ಸಾರ್ವಜನಿಕರ ಸಹಕಾರದಿಂದ ಎರಡು ಕಾಲೇಜುಗಳ ಪ್ರಭಾರತ್ವದೊಂದಿಗೆ ಪ್ರಾಮಾಣಿಕ ಸೇವೆಯನ್ನು ಸಲ್ಲಿಸಿದ್ದೇನೆ. ನನ್ನ ಸೇವೆಯು ತೃಪ್ತಿ ನೀಡಿದೆ. ವಿದ್ಯಾರ್ಥಿಗಳು ಉತ್ತಮವಾಗಿ ಅಧ್ಯಯನ ಮಾಡುವ ಮೂಲಕ ಶ್ರೇಷ್ಟ ಫಲಿತಾಂಶವನ್ನು ಪಡೆದು ತಾಲೂಕಿಗೆ ಕೀರ್ತಿಯನ್ನು ತರಬೇಕು ಎಂದು ಹಾರೈಸಿದರು.
ಕಾರ್ಯಕ್ರಮದಲ್ಲಿ ಜೇವರ್ಗಿ ಸರ್ಕಾರಿ ಪಿಯು ಕಾಲೇಜಿನ ಉಪನ್ಯಾಸಕ ಎಚ್.ಬಿ.ಪಾಟೀಲ, ಕಾಲೇಜಿನ ಉಪನ್ಯಾಸಕರಾದ ಇಮಾಮ್ ಪಟೇಲ್ ರೇವನೂರ್, ಅಮರೇಶ್ ಗಂಗಾಕರ್, ಪ್ರ.ದ.ಸ ಲಲಿತಾ ಸುಭೇದಾರ, ಸ್ಥಳೀಯ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಮಲಕಪ್ಪ ಭಜಂತ್ರಿ, ಸಹ ಶಿಕ್ಷಕರಾದ ಅಶೋಕ ಸಜ್ಜನ್, ಸುರೇಶಭಟ್ ಜೋಶಿ, ಸೋಮಲಿಂಗಪ್ಪ ಬಿರಾದಾರ, ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಬಸವರಾಜ ಪಾಟೀಲ್, ಸಹ ಶಿಕ್ಷಕ ಭೀಮಾಶಂಕರ, ಕದಂಬ ಪಿಯು ಕಾಲೇಜಿನ ಉಪನ್ಯಾಸಕ ಶರಣು ಬಿಲ್ಲಾರ್, ಪ್ರಮುಖರಾದ ಮೌಲಾ ಮುಲ್ಲಾ, ಚನ್ನಪ್ಪಗೌಡ್ ಬಂಡೆಪ್ಪಗೋಳ್ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.