ಅಧಿಕಾರ ಮುಖ್ಯವಲ್ಲ ಜನಸೇವೆ ಮುಖ್ಯ:ಗುತ್ತೇದಾರ

ಚಿತ್ತಾಪುರ: ಜೂ.24:ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಾಜಕಾರಣಿಗಳಿಗೆ ಅಧಿಕಾರ ಮುಖ್ಯವಲ್ಲ ಜನಸೇವೆ ಮುಖ್ಯ ಎಂದು ನಾಗಾವಿ ಸಾಹಿತ್ಯ ಸಾಂಸ್ಕøತಿಕ ಪರಿಷತ್ ಅಧ್ಯಕ್ಷ ಕಾಶಿನಾಥ ಗುತ್ತೇದಾರ ಹೇಳಿದರು.

ತಾಲೂಕಿನ ಇಂಗಳಗಿ ಗ್ರಾಮದಲ್ಲಿ ಮನರೇಗಾ ಕಾರ್ಮಿಕರಿಂದ ಹಮ್ಮಿಕೊಂಡಿದ್ದ ಗ್ರಾಪಂ ಅಧ್ಯಕ್ಷ ಸುಭಾಶ್ಚಂದ್ರ ಯಾಮರ್ ಬಿಳ್ಕೋಡುವ ಹಾಗೂ ಅಧಿಕಾರಿಗಳಿಗೆ ಕೃತಜ್ಞತಾ ಮತ್ತು ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಅಧಿಕಾರ ಸಿಕ್ಕಾಗ ಸರಕಾರದ ಯೋಜನೆಗಳು ಜನಸಾಮಾನ್ಯರಿಗೆ ತಲುಪಿಸುವುದು ಹಾಗೂ ಅಭಿವೃದ್ದಿ ಕೆಲಸಗಳು ಮಾಡುವುದು ಮುಖ್ಯ ಹೀಗಾಗಿ ಜನಪ್ರತಿನಿಧಿಗಳು ತಮ್ಮ ಜವಾಬ್ದಾರಿ ಅರಿತುಕೊಂಡು ಪ್ರಾಮಾಣಿಕವಾಗಿ ಕೆಲಸ ಮಾಡಿದಾಗ ಜನಮನ್ನಣೆ ಪಡೆಯಲು ಸಾಧ್ಯ ಎಂದರು. ಹೊಸ ಅಧ್ಯಕ್ಷರಾದಾಗ ಎಲ್ಲರೂ ಹಾರಾತುರಾಯಿ ಸನ್ಮಾನ ಮಾಡುತ್ತಾರೆ ಆದರೆ ಅಧಿಕಾರದಿಂದ ನಿರ್ಗಮಿಸುವ ಸಂದರ್ಭದಲ್ಲಿ ಯಾರೂ ಗೌರವಿಸುವುದಿಲ್ಲ ಆದರೆ ಇಂಗಳಗಿ ಗ್ರಾಪಂ ಅಧ್ಯಕ್ಷರಿಗೆ ಗ್ರಾಮಸ್ಥರು, ಕಾರ್ಮಿಕರು ಸೇರಿ ಸನ್ಮಾನಿಸಿ ಬಿಳ್ಕೋಡುತ್ತಿರುವುದು ವಿಶೇಷ ಎಂದು ಹೇಳಿದರು.

ಗ್ರಾಪಂ ಅಧ್ಯಕ್ಷ ಸುಭಾಶ್ಚಂದ್ರ ಯಾಮರ್ ಮಾತನಾಡಿ, ನನಗೆ ಸಿಕ್ಕ ಅಧಿಕಾರವದಿಯಲ್ಲಿ ಸರಕಾರದ ಯೋಜನೆಗಳನ್ನು ಜನಸಾಮಾನ್ಯರಿಗೆ, ಕಾರ್ಮಿಕರಿಗೆ ತಲುಪಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ ನನ್ನ ಆತ್ಮಕ್ಕೂ ತೃಪ್ತಿಯಿದೆ ಇದಕ್ಕೆಲ್ಲ ಗ್ರಾಪಂ ಸದಸ್ಯರ, ಸಿಬ್ಬಂಧಿಗಳ ಹಾಗೂ ಗ್ರಾಮಸ್ಥರ ಸಹಕಾರ ಮುಖ್ಯ ಎಂದು ಹೇಳಿದರು.

ಈ ಸಂದರ್ಭದಲ್ಲಿ ಕಾರ್ಮಿಕ ಮುಖಂಡ ಡಾ.ಸಾಯಬಣ್ಣ ಗುಡುಬಾ ಮಾತನಾಡಿ, ಇಂಗಳಗಿ ಗ್ರಾಮದಲ್ಲಿ ಮನರೇಗಾ ಕಾರ್ಮಿಕರಿಗೆ ಯಾವುದೇ ತೊಂದರೆ ಆಗದಂತೆ ನಿತ್ಯ ಹಾಜರಿ ಹಾಗೂ ವೇತನ ಸರಿಯಾದ ಸಮಯಕ್ಕೆ ಖಾತೆಗೆ ಜಮಾ ಮಾಡುವ ಮೂಲಕ ಗ್ರಾಪಂ ಅಧ್ಯಕ್ಷರು ಕಾರ್ಮಿಕರ ಪರವಾಗಿ ಉತ್ತಮ ಸೇವೆ ಸಲ್ಲಿಸಿದ್ದಾರೆ ಹೀಗಾಗಿ ಕಾರ್ಮಿಕರು ಒಗ್ಗೂಡಿ ಅವರಿಗೆ ಸನ್ಮಾನಿಸಿದ್ದಾರೆ ಎಂದರು.

ಪಿಡಿಓ ರೇಷ್ಮಾ ಕೋತ್ವಾಲ್, ಕಾರ್ಯದರ್ಶಿ ಗಾಯತ್ರಿ, ಗ್ರಾಪಂ ಮಾಜಿ ಅಧ್ಯಕ್ಷ ಬಸವರಾಜ ಸ್ಥಾವರಮಠ, ಗೌಸ್ ದುದನಿ, ಜ್ಯೋತಿ ದಂಡಗುಂಡಲ್ಕರ್, ರವಿ ಅಳ್ಳೋಳ್ಳಿ, ಗಿಡ್ಡಮ್ಮ ಪವಾರ, ಮೋಸಿನಸಾಬ್, ಶೇರ ಅಲಿ ದುದನಿ, ಸಾಬಮ್ಮ ಕಾಳಗಿ ಇತರರು ಇದ್ದರು. ಖದೀರ್ ಸ್ವಾಗತಿಸಿದರು, ಶಾಂತಕುಮಾರ ನಿರೂಪಿಸಿದರು.