ಅಧಿಕಾರ ಕಳೆದುಕೊಂಡರೂ ಮಣಿಕಂಠ್ ರಾಠೋಡ್ ಪರ ಹೋರಾಟ: ಬಿಜೆಪಿ ವಿರುದ್ಧ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ

ಕಲಬುರಗಿ:ಆ.29: ಬಿಜೆಪಿ ಮುಖಂಡ ಮಣಿಕಂಠ್ ರಾಠೊಡ್ ಅವರ ವಿರುದ್ಧ ಕಾಂಗ್ರೆಸ್ ಸರ್ಕಾರದಲ್ಲಿ ಪ್ರಕರಣ ದಾಖಲಾದರೆ ಬಿಜೆಪಿಯವರು ಚಿತ್ತಾಪುರದಲ್ಲಿ ಪ್ರತಿಭಟನೆ ಮಾಡುತ್ತಾರೆ. ಅದೇ ಹಿಂದೆ ಅವರದೇ ಆದ ಸರ್ಕಾರದಲ್ಲಿ ರಾಠೋಡ್ ಅವರ ವಿರುದ್ಧ ಪ್ರಕರಣಗಳು ದಾಖಲಾದರೂ ಸಹ ಬಿಜೆಪಿಯವರು ಪ್ರತಿಭಟನೆ ಮಾಡಲಿಲ್ಲ. ಅಧಿಕಾರದಲ್ಲಿ ಇದ್ದಾಗ ಒಂದು ನೀತಿ, ಅಧಿಕಾರದಲ್ಲಿ ಇಲ್ಲದೇ ಇರುವಾಗ ಇನ್ನೊಂದು ನೀತಿ ಎಂದು ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಿತಿರಾಜ್ ಹಾಗೂ ಐಟಿಬಿಟಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಆರೋಪಿಸಿದರು.
ನಗರದಲ್ಲಿ ತಮ್ಮ ಕಚೇರಿಯಲ್ಲಿ ಮಂಗಳವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಣಿಕಂಠ್ ರಾಠೋಡ್ ಅವರ ವಿರುದ್ಧ ಬಿಜೆಪಿ ಸರ್ಕಾರದಲ್ಲಿಯೇ ಅನೇಕ ಪ್ರಕರಣಗಳು ದಾಖಲಾಗಿವೆ. ಗಡಿಪಾರು ಆದೇಶ ಸಹ ಅವರದೇ ಸರ್ಕಾರದಲ್ಲಿ ಆಗಿತ್ತು. ಅಕ್ಕಿ ಕಳ್ಳ ಸಾಗಾಣಿಕೆಗೆ ಸಂಬಂಧಿಸಿದಂತೆಯೂ ದೂರು ದಾಖಲಾಗಿತ್ತು. ಆದಾಗ್ಯೂ, ಆಗ ಬಿಜೆಪಿಯವರು ಪ್ರತಿಭಟನೆ ಮಾಡಲಿಲ್ಲ ಏಕೆ? ಎಂದು ಖಾರವಾಗಿ ಪ್ರಶ್ನಿಸಿದರು.
ದ್ವೇಷದ ರಾಜಕಾರಣ ಮಾಡುತ್ತಿದ್ದೇನೆ ಎಂಬ ಬಿಜೆಪಿಯವರ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ದ್ವೇಷದ ರಾಜಕಾರಣವನ್ನು ಬಿಜೆಪಿಯವರೇ ಮಾಡುತ್ತಿದ್ದಾರೆ. ನನ್ನ ವಿರುದ್ಧ ಮುಖ್ಯಮಂತ್ರಿ ಬಳಿಗೆ ಆಂದೋಲಾ ಸ್ವಾಮೀಜಿ ನಿಯೋಗ ತೆಗೆದುಕೊಂಡು ಹೋಗಿದ್ದರು. ಆ ಸಂದರ್ಭದಲ್ಲಿ ಜಿಲ್ಲೆಯನ್ನು ಪಾಕಿಸ್ತಾನ್ ಮಾಡುತ್ತಿದ್ದಾರೆ ಎಂದು ನನ್ನ ವಿರುದ್ಧ ನಿರಾಧಾರ ಆರೋಪ ಮಾಡಿದ್ದರು. ಅದಕ್ಕಾಗಿಯೇ ನಾನು ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿರುವೆ. ನ್ಯಾಯಾಲಯದಲ್ಲಿ ಅದು ಇನ್ನೂ ವಿಚಾರಣೆಯಲ್ಲಿದೆ. ಇಂತಹ ಆರೋಪಗಳನ್ನು ಸಹಿಸಿಕೊಳ್ಳಬೇಕೆ? ಎಂದು ಅವರು ಖಾರವಾಗಿ ಕೇಳಿದರು.
ಆಂದೋಲಾ ಸ್ವಾಮೀಜಿ ವಿರುದ್ಧ ಮತ್ತೆ ಹರಿಹಾಯ್ದ ಪ್ರಿಯಾಂಕ್ ಖರ್ಗೆಯವರು, ಅವರು ಯಾವ ಮಠದ ಸ್ವಾಮೀಜಿ. ಸ್ವಯಂ ಘೋಷಿತ ಸ್ವಾಮೀಜಿ ಎಂದು ಲೇವಡಿ ಮಾಡಿ, ಅವರೇನು ಶ್ರೀರಾಮ್ ಸೇನೆಯ ಜಿಲ್ಲಾಧ್ಯಕ್ಷರೇ, ರಾಜ್ಯಾಧ್ಯಕ್ಷರೇ, ರಾಜ್ಯ ಗೌರವಾಧ್ಯಕ್ಷರೇ? ಎಂದು ಗೇಲಿ ಮಾಡಿದರು.
ಅಕ್ಕಿ ಕಳ್ಳರಿಗೆ, ಅಂಗನವಾಡಿ ಮಕ್ಕಳ ಹಾಲಿನ ಪೌಡರ್ ಕಳ್ಳತನ ಮಾಡುವವರ ರಕ್ಷಣೆ ಮಾಡಿ ಎಂದು ಸ್ವಾಮೀಜಿಗೆ ತತ್ವ ಹೇಳುತ್ತಾ. ಇದೆಂತಹ ತತ್ವ ನಿಮ್ಮದು? ಎಂದು ಆಂದೋಲಾ ಸ್ವಾಮೀಜಿ ವಿರುದ್ಧ ಪ್ರಿಯಾಂಕ್ ಖರ್ಗೆಯವರು ಹರಿಹಾಯ್ದರು.
ರಾಜ್ಯ ವಿಧಾನ ಪರಿಷತ್ ಸದಸ್ಯ ಹಾಗೂ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ್ ಅವರನ್ನು ತರಾಟೆಗೆ ತೆಗೆದುಕೊಂಡ ಪ್ರಿಯಾಂಕ್ ಖರ್ಗೆಯವರು, ಜೇವರ್ಗಿಯಲ್ಲಿ ತಮ್ಮ ಪಕ್ಷದ ಟಿಕೆಟ್ ಮಾರಿಕೊಂಡಿದ್ದಾರೆ ಎಂದು ಸ್ವತ: ಅವರ ಪಕ್ಷದವರೇ ಹೇಳುತ್ತಿದ್ದರು. ಅದಾದ ಮೇಲೆ ಅವರು ಕಲಬುರ್ಗಿಗೆ ಬಂದೇ ಇಲ್ಲ. ಆದಾಗ್ಯೂ, ನಿನ್ನೆ ಚಿತ್ತಾಪುರಕ್ಕೆ ಬಂದು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ. ಅವರ ಶಿಷ್ಯನಿಗೆ ಗಡಿಪಾರು ಶಿಕ್ಷೆ ವಿಧಿಸಿದಾಗ ರವಿಕುಮಾರ್ ಯಾಕೆ ಪ್ರತಿಭಟನೆ ಮಾಡಲಿಲ್ಲ? ಇದು ಬಿಜೆಪಿ ಸರ್ಕಾರದ ಕಲಬುರ್ಗಿ ಅಲ್ಲ. ಕಾಂಗ್ರೆಸ್ ಸರ್ಕಾರದ ಕಲಬುರ್ಗಿ. ನಿಮ್ಮ ಶಿಷ್ಯ ಅಷ್ಟೇ ಅಲ್ಲ, ನೀವು ತಪ್ಪು ಮಾಡಿದರೂ ಕೂಡ ನಿಮ್ಮ ಮೇಲೂ ಸಹ ಕಾನೂನು ಕ್ರಮ ಆಗುತ್ತದೆ ಎಂದು ಎಚ್ಚರಿಸಿದರು.
ಬಿಜೆಪಿ ಸರ್ಕಾರ ಇದ್ದಾಗ ಅಕ್ಕಿ ಹಾಗೂ ಹಾಲಿನಪುಡಿ ಕಳ್ಳತನ ಮಾಡಿರುವ ಆರೋಪ ಹೊತ್ತಿರುವವರಿಗೆ ಟಿಕೆಟ್ ನೀಡಲಾಗಿತ್ತು. ಆದಾಗ್ಯೂ, ನಮ್ಮ ಸರ್ಕಾರ ಬಂದ ಮೇಲೆ ಅಂಥವರನ್ನು ಜೈಲಿಗೆ ಕಳಿಸಲಾಗಿದೆ ಅಥವಾ ಅಂಥವರು ಜಾಮೀನಿನ ಮೇಲೆ ಹೊರಗಡೆ ಇದ್ದಾರೆ ಎಂದು ಬಿಜೆಪಿ ಮುಖಂಡ ಮಣಿಕಂಠ್ ರಾಠೋಡ್ ಅವರ ವಿರುದ್ಧ ಸಚಿವರು ಪರೋಕ್ಷವಾಗಿ ಕಿಡಿಕಾರಿದರು.
ಲೋಕಸಭಾ ಚುನಾವಣೆಯ ವೇಳೆಗೆ ಕಾಂಗ್ರೆಸ್ ಸರ್ಕಾರ ಇರುವುದಿಲ್ಲ ಎಂಬ ಬಿಜೆಪಿಯವರ ಹೇಳಿಕೆಯನ್ನು ಆಕ್ಷೇಪಿಸಿದ ಪ್ರಿಯಾಂಕ್ ಖರ್ಗೆಯವರು, ಲೋಕಸಭಾ ಚುನಾವಣೆಯ ವೇಳೆಗೆ ಬಿಜೆಪಿಯೇ ಇರುವುದಿಲ್ಲ ಎಂದರು.
ವಿರೋಧ ಪಕ್ಷದ ನಾಯಕ ಯಾರು ಎಂಬುದು ಬಿಜೆಪಿಯವರಿಗೆ ಗೊತ್ತಿಲ್ಲ. ಆ ಪಕ್ಷದವರಿಗೆ ಬಹುಶ: ಏನು ಮಾಡಬೇಕು ಎಂಬುದು ಅವರಿಗೆ ಅರ್ಥವಾಗುತ್ತಿಲ್ಲ. ಅಧಿಕಾರ ಕಳೆದುಕೊಂಡು ನೂರು ದಿನಗಳಾಗಿವೆ. ಆದಾಗ್ಯೂ, ನಾವು ಜನರಿಗೆ ನೀಡಿದ ಭರವಸೆಗಳನ್ನು ಈಡೇರಿಸುತ್ತಿದ್ದೇವೆ ಎಂದು ಅವರು ಹೇಳಿದರು.
ಚಂದ್ರಯಾನ ಚಂದ್ರನಿಗೆ ಮುಟ್ಟಿದೆ. ಆದಾಗ್ಯೂ, ವಿರೋಧ ಪಕ್ಷದ ನಾಯಕ ಯಾರು ಎಂಬುದು ಬಿಜೆಪಿಗರಿಗೆ ಗೊತ್ತಾಗುತ್ತಿಲ್ಲ ಅವರ ಪಕ್ಷದಲ್ಲಿ ಏನಾಗುತ್ತಿದೆ ಎಂಬುದು ಅವರಿಗೆ ತಿಳಿಯುತ್ತಿಲ್ಲ ಎಂದು ಗೇಲಿ ಮಾಡಿದ ಅವರು, ಒಳ್ಳೆಯ ಆಡಳಿತ ಕೊಡಬೇಕು ಎನ್ನುವ ಉದ್ದೇಶದಿಂದ ಪ್ರಾಮಾಣಿಕತೆಯಿಂದ ಕೆಲಸ ಮಾಡುತ್ತಿದ್ದೇವೆ. ನಮ್ಮ ಸರ್ಕಾರವನ್ನು ಟೀಕಿಸುವ ನೈತಿಕತೆ ಬಿಜೆಪಿ ನಾಯಕರಿಗೆ ಇಲ್ಲ ಎಂದು ತಿಳಿಸಿದ ಅವರು, ಬಿಜೆಪಿಯವರು ಹತಾಶರಾಗಿದ್ದಾರೆ. ಅಧಿಕಾರ ಇಲ್ಲದೇ ಇರುವುದಕ್ಕೆ ನೀರಿನಿಂದ ಹೊರಬಿದ್ದ ಮೀನಿನಂತೆ ಬಿಜೆಪಿಯವರು ಚಡಪಡಿಸುತ್ತಿದ್ದಾರೆ. ಮೊನ್ನೆ ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರಿಗೆ ಬಂದಾಗ ಬಿಜೆಪಿ ನಾಯಕರು ಬ್ಯಾರಿಕೇಡ್ ಹಿಂದೆ ಬಂಧಿ ಆಗಿ ಕನ್ನಡಿಗರ ಮರ್ಯಾದೆ ಬೀದಿಗೆ ತಂದರು ಎಂದು ಕಟುವಾಗಿ ಟೀಕಿಸಿದರು.
ಮಾಜಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಮುಖ್ಯಮಂತ್ರಿಗಳಾಗಿದ್ದಾಗ ಏನೇ ಹೇಳಿದರೂ ದಾಖಲೆ ಕೊಡಿ ಎನ್ನುತ್ತಿದ್ದರು. ಈಗ ಬೊಮ್ಮಾಯಿ ಅವರು ಮಾಡುತ್ತಿರುವ ಆರೋಪಕ್ಕೆ ಯಾವ ದಾಖಲೆಗಳಿವೆ? ಅವರು ಹತಾಶರಾಗಿ ಆರೋಪ ಮಾಡುತ್ತಿದ್ದಾರೆ. ಹಾಗೆ ಆರೋಪ ಮಾಡುವುದರಿಂದ ಅವರನ್ನು ವಿರೋಧ ಪಕ್ಷದ ನಾಯಕರನ್ನಾಗಿ ಮಾಡಬಹುದು ಎಂದು ಭಾವಿಸಿದಂತಿದೆ ಎಂದು ಖರ್ಗೆ ಅವರು ಕುಟುಕಿದರು.
ಗುತ್ತಿಗೆದಾರರ ಸಂಘದ ಅಧ್ಯಕ್ಷರು ನಮ್ಮ ಸರ್ಕಾರದ ಮೇಲೆ ಭ್ರಷ್ಟಾಚಾರದ ಆರೋಪ ಮಾಡಿಲ್ಲ. ಬಿಲ್ ಪಾವತಿಗೆ ವಿಳಂಬವಾಗುತ್ತಿದೆ ಎಂದಿದ್ದಾರೆ. ಮೂರನೇ ತಂಡದ ಪರಿಶೀಲನೆ ಮಾಡಿ ನಂತರ ಬಾಕಿ ಇರುವ ಬಿಲ್‍ಗಳನ್ನು ಪಾವತಿ ಮಾಡುತ್ತೇವೆ ಎಂದು ತಿಳಿಸಿದ್ದೇವೆ ಎಂದು ಅವರು ಹೇಳಿದರು. ಈ ಸಂದರ್ಭದಲ್ಲಿ ಮಾಜಿ ಸಚಿವ ರೇವು ನಾಯಕ್ ಬೆಳಮಗಿ ಅವರು ಉಪಸ್ಥಿತರಿದ್ದರು.