ಅಧಿಕಾರ ಅವಧಿಯಲ್ಲಿ ಯಾವುದೇ ಅನುದಾನ ದುರ್ಬಳಕೆ ಮಾಡಿಲ್ಲ

ಲಿಂಗಸುಗೂರು.ಏ.೨೧-೫ ವರ್ಷ ಅಧಿಕಾರ ಅವಧಿಯಲ್ಲಿ ನಾನು ಯಾವುದೇ ಅನುದಾನದಲ್ಲಿ ದುರುಪಯೋಗ ಮಾಡಿಕೊಂಡಿಲ್ಲ, ಮಾಡಿಕೊಳ್ಳುವ ಅವಶ್ಯಕತೆ ನನಗಿಲ್ಲ, ಎಲ್ಲಾ ಸದಸ್ಯರ ವಿಶ್ವಾಸದೊಂದಿಗೆ ತಾಲೂಕಿನ ಪ್ರಗತಿಗೆ ಪ್ರಮಾಣಿಕ ಪ್ರಯತ್ನ ಮಾಡಿದ್ದೇನೆ ಎಂದು ತಾಲೂಕು ಪಂಚಾಯಿತಿ ಅಧ್ಯಕ್ಷೆ ಶ್ವೇತಾ ಪಾಟೀಲ್ ಹೇಳಿದರು.
ಪಟ್ಟಣದ ಪತ್ರಿಕಾಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್,ಜೆಡಿಎಸ್ ಹಾಗೂ ಬಿಜೆಪಿ ಸದಸ್ಯರ ಸಹಕಾರದಿಂದ ಸತತ ಐದು ವರ್ಷ ತಾ.ಪಂ ಅಧ್ಯಕ್ಷೆಯಾಗಿ ಆಡಳಿತ ನಡೆಸಿದ್ದೇನೆ. ಐದು ವರ್ಷದಿಂದ ತಾಲೂಕಿಗೆ ಬಿಡುಗಡೆಯಾಗಿರುವ ಅನುದಾನವನ್ನು ಎಲ್ಲಾ ಸದಸ್ಯರ ಕ್ಷೇತ್ರಗಳಿಗೆ ತಾರತಮ್ಯವಿಲ್ಲದೆ ಎಲ್ಲಾ ಸದಸ್ಯರ ವಿಶ್ವಾಸಕ್ಕೆ ತೆಗೆದುಕೊಂದು ಅಭಿವೃದ್ಧಿಗೆ ಆಧ್ಯತೆ ನೀಡಿದ್ದೇನೆ. ೭೦ ಲಕ್ಷ ರೂಪಾಯಿ ಅನುದಾನ ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ನಮ್ಮ ಮೇಲೆ ಬಂದಿರುವ ಆರೋಪಗಳು ಸತ್ಯಕ್ಕೆ ದೂರವಾಗಿವೆ. ಜಿಲ್ಲೆಯ ವಿವಿಧ ತಾ.ಪಂಗಳಲ್ಲಿ ಅಧ್ಯಕ್ಷರನ್ನು ೨೦ ತಿಂಗಳೊಮ್ಮೆ ಬದಲಾವಣೆ ಮಾಡಿದ ನಿದರ್ಶನಗಳಿವೆ ಆದರೆ ನಮ್ಮ ಸದಸ್ಯರು ಅಂತಹ ಕೆಲಸಕ್ಕೆ ಕೈಹಾಕಿಲ್ಲ, ಬದಲಾಗಿ ನಮ್ಮ ವಿಶ್ವಾಸವಿಟ್ಟು ಅಭಿವೃದ್ಧಿಗೆ ಸಹಕರಿಸಿದ್ದಾರೆ. ಈ ಹಿನ್ನಲೆಯಲ್ಲಿ ನಮ್ಮ ಅಧಿಕಾರ ಅವಧಿ ಮುಕ್ತಾಯವಾಗುತ್ತಿದ್ದರಿಂದ ಯುಗಾದಿ ಹಬ್ಬದದಿನದಂದು ಪಟ್ಟಣದ ನಮ್ಮ ಮನೆಯಲ್ಲಿ ಎಲ್ಲಾ ಮಹಿಳಾ ಸದಸ್ಯರಿಗೆ ಔತಣಕೂಟ ಏರ್ಪಡಿಸಿ ನನ್ನ ಸ್ವಂತ ದುಡ್ಡಿನಿಂದ ಉಡಗೊರೆ ನೀಡಿದ್ದೇನೆ. ಆದರೆ ೭೦ ಲಕ್ಷ ಅನುದಾನ ಗುಳಂ ಮಾಡಿ ಉಡುಗೊರೆ ನೀಡಿದ್ದಾರೆ ಎಂದು ಆರೋಪಗಳು ಬಂದಿರುವುದು ನನಗೆ ನೋವು ತಂದಿದೆ. ೨೦೨೦-೨೧ನೇ ಸಾಲಿನ ತಾಲೂಕು ಪಂಚಾಯಿತಿಯ ಅನಿರ್ಬಂಧಿತದಡಿಯಲ್ಲಿ ಬಿಡುಗಡೆಯಾಗಿದ್ದ ೩೨.೨೫ ಲಕ್ಷಗಳ ಅನುದಾನವನ್ನು ತಾಲೂಕು ಪಂಚಾಯಿತಿ ಎಲ್ಲಾ ಕ್ಷೇತ್ರಗಳಿಗೆ ಸಮಾನವಾಗಿ ಹಂಚಿಕೆ ಮಾಡಿ ಕ್ರೀಯಾಯೋಜನೆ ತಯಾರಿಸಿ ಜಿ.ಪಂ ಸಿಇಒ ಸೇರಿದಂತೆ ನಾನಾ ಇಲಾಖಾ ಅಧಿಕಾರಿಗಳ ಅನುಮೂದನೆ ಪಡೆಯಲಾಗುತ್ತದೆ. ಇಷ್ಟೆಲ್ಲಾ ಕಟ್ಟುನಿಟ್ಟಿನ ನಿಯಮವಿದ್ದರೂ ೭೦ ಲಕ್ಷ ರೂಪಾಯಿ ಅನುದಾನ ದುರುಪಯೋಗ ಆಗಲು ಹೇಗೆ ಸಾಧ್ಯ, ದುರುಪಯೋಗವಾಗಲು ಅಧಿಕಾರಿಗಳು ಹೇಗೆ ಒಪ್ಪುತ್ತಾರೆ ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಸದಸ್ಯ ಶರಣಗೌಡ ಪಾಟೀಲ್ ಮಾತನಾಡಿ, ತಾ.ಪಂ ಅಧ್ಯಕ್ಷರು ಸದಸ್ಯರಿಗೆ ನೀಡಿದ ಉಡುಗೊರೆಗೆ ನಾವು ಬೆಲೆಕಟ್ಟೊಲ್ಲ, ಎಲ್ಲರನ್ನು ವಿಶ್ವಾಸ ತೆಗೆದುಕೊಂಡು ಐದು ವರ್ಷಗಳ ಉತ್ತಮ ಆಡಳಿತ ನೀಡಿದ್ದಾರೆ. ಎಲ್ಲಾ ಕ್ಷೇತ್ರಗಳಿಗೆ ತಾರತಮ್ಯ ಮಾಡದೇ ಅನುದಾನ ಹಂಚಿಕೆ ಮಾಡಿದ್ದಾರೆ ಎಂದರು.
ಮೂರು ಪಕ್ಷದ ತಾ.ಪಂ ಸದಸ್ಯರಾದ ರುದ್ರಗೌಡ ಪಾಟೀಲ್, ತಿಮ್ಮನಗೌಡ, ಶರಣಮ್ಮ, ವಾಹಿದ್ ಖಾದ್ರಿ, ಶಂಕರ್ ಚವ್ಹಾಣ್, ಬಸವರಾಜ ಮರಳಿ, ರಾಜಾ ಸೇತುರಾಮ ನಾಯಕ, ಮುಖಂಡರಾದ ಗೋವಿಂದ್ ನಾಯಕ್, ಭೀಮಣ್ಣ ಹುನಕುಂಟಿ, ಅಮರೇಶ ಹೆಸರೂರು, ತಿಮ್ಮಯ್ಯ ಯರಜಂತಿ, ಶರಣಪ್ಪ ಜಾದವ್, ಪರಮೇಶ ಯಾದವ್, ಗುಂಡಪ್ಪ ಹಟ್ಟಿ ಹಾಗೂ ಇನ್ನಿತರಿದ್ದರು.