ಅಧಿಕಾರಿ ವಿರುದ್ಧ ಆಶ್ರಯ ಮನೆಗಳ ಫಲಾನುಭವಿಗಳ ಆಕ್ರೋಶ

ಕೊಲ್ಹಾರ:ಫೆ.7:ಆಶ್ರಯ ಮನೆಗಳ ಫಲಾನುಭವಿಗಳ ಜಿಪಿಎಸ್, ಜೀಯೋಟ್ಯಾಗ್ ಸಹಿತ ವಿವಿಧ ಕಾರ್ಯಗಳನ್ನು ಮಾಡುವಲ್ಲಿ ಪಟ್ಟಣ ಪಂಚಾಯತ್ ಅಧಿಕಾರಿ ತಾಜುದ್ದೀನ್ ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ ಹಾಗೂ ವಿಕಲಚೇತನರೊಂದಿಗೆ ಉದ್ಧಟತನದಿಂದ ವರ್ತಿಸುತ್ತಿದ್ದಾರೆ ಎಂದು ವಿಕಲಚೇತನ ಸಂಘದ ಪದಾಧಿಕಾರಿಗಳು ಪ ಪಂ ಕಾರ್ಯಾಲಯದ ಮುಂಭಾಗ ಪ್ರತಿಭಟನೆ ನಡೆಸಿದರು.
ಮಂಗಳವಾರ ಪಟ್ಟಣ ಪಂಚಾಯತ್ ಕಾರ್ಯಾಲಯದ ಮುಂಭಾಗ ಜಮಾಯಿಸಿದ ಪ್ರತಿಭಟನಾಕಾರರು ತಾಜುದ್ದೀನ್ ಹನುಮಸಾಗರ ಎಂಬ ಅಧಿಕಾರಿ ವಿಕಲಚೇತನರೊಂದಿಗೆ ಉದ್ಧಟತನದಿಂದ ವರ್ತಿಸುತ್ತಿದ್ದಾರೆ. ಆಶ್ರಯ ಮನೆ ಫಲಾನುಭವಿಗಳಿಗೆ ಕೇಂದ್ರ ಸರ್ಕಾರದ ದುಡ್ಡು ಜಮೆ ಮಾಡುವಲ್ಲಿ ಜಿಯೋಟ್ಯಾಗಿಂಗ್ ಸಹಿತ ಛಾಯಾಚಿತ್ರಗಳನ್ನು ತೆಗೆಯಲು ಸತಾಯಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಪದೇ ಪದೇ ಕೇಳಲಾಗಿ ವಿಕಲಚೇತನರಿಗೆ ಬೆಂಗಳೂರಿನ ನಿಗಮಕ್ಕೆ ಹೋಗಿ ವಿಚಾರಿಸಿ ಎಂದು ಹಾರಿಕೆಯ ಉತ್ತರ ನೀಡುತ್ತಿದ್ದಾರೆ. ವಿಕಲಚೇತನ ಸಂಘದ ಪದಾಧಿಕಾರಿಗಳು ಬೆಂಗಳೂರಿನ ನಿಗಮಕ್ಕೆ ತೆರಳಿ ವಿಚಾರಿಸಲಾಗಿ ಪಟ್ಟಣ ಪಂಚಾಯತ್ ಕಾರ್ಯಾಲಯದಿಂದ ಪಟ್ಟಿ ಕಳುಹಿಸಿಲ್ಲ ಎಂದು ಹೇಳುತ್ತಿದ್ದಾರೆ. ಅಧಿಕಾರಿ ತಾಜುದ್ದೀನ್ ಬೇಕೆಂತಲೇ ವಿಕಲಚೇತನರನ್ನು ಹಾಗೂ ಪಟ್ಟಣದ ಸಾರ್ವಜನಿಕರನ್ನು ಸತಾಯಿಸುತ್ತಿದ್ದಾರೆ ಎಂದು ಕಣ್ಣೀರು ಹಾಕಿದರು.
ಪ ಪಂ ಮುಖ್ಯಾಧಿಕಾರಿ ಉಮೇಶ್ ಛಲವಾದಿ ಹಾಗೂ ಪ್ರತಿಭಟನಾಕಾರರು ಅಧಿಕಾರಿ ತಾಜುದ್ದೀನ್ ಅವರಿಗೆ ಕರೆ ಮಾಡಲಾಗಿ ಅಧಿಕಾರಿಯ ಮೊಬೈಲ್ ಸ್ವಿಚ್ ಆಫ್ ಇರುವುದು ಕಂಡುಬಂದಿತು.

ಪ್ರತಿಭಟನೆಯಲ್ಲಿ ಗಣಪತಿ ಪವಾರ, ಸುಲೇಮಾನ್ ದಿಂದಾರ, ಬಾಷಾ ಉಪ್ಪಲದಿನ್ನಿ, ಮೌಲಾಸಾಬ ಬೀಳಗಿ, ಗುಲಾಬ ಶಿರೂರ, ದಾದಾ ಖಾಟಿಕ್, ಮೈಬೂಬ ನದಾಫ ಹಾಗೂ ಇತರರು ಇದ್ದರು.

ಅಧಿಕಾರಿ ತಾಜುದ್ದೀನ್ ವಿಕಲಚೇತನರಿಗೆ ಬೇಕೆಂತಲೇ ಕಿರುಕುಳ ನೀಡುತ್ತಿದ್ದಾರೆ. ಪಟ್ಟಣದ ಸಾರ್ವಜನಿಕರೊಂದಿಗೆ ಸ್ಪಂದನೆ ನೀಡುತ್ತಿಲ್ಲ. ಮೇಲಾಧಿಕಾರಿಗಳು ಅವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಹಾಗೂ ನಮ್ಮ ಸಮಸ್ಯೆ ಶೀಘ್ರದಲ್ಲೇ ಇತ್ಯರ್ಥ ಪಡಿಸಬೇಕು.
ನಿಯಾಜ ಮಕಾನದಾರ.
ತಾಲೂಕ ಅಧ್ಯಕ್ಷರು ವಿಕಲಚೇತನರ ಸಂಘ ಕೊಲ್ಹಾರ.