ಅಧಿಕಾರಿ ವಿರುದ್ಧ ಅಧ್ಯಕ್ಷ-ಸದಸ್ಯರ ಆಕ್ರೋಶ

ಲಿಂಗಸುಗೂರು: ಸಿಬ್ಬಂದಿಗಳಿಂದಲೇ ಕರ ವಸೂಲಿ
ದುರುಗಪ್ಪ ಹೊಸಮನಿ
ಲಿಂಗಸುಗೂರು : ಪಟ್ಟಣದ ವಾರದ ಸಂತೆ ಕರ ವಸೂಲಿಗಾಗಿ ಪ್ರತಿ ವರ್ಷ ಕರೆಯುತ್ತಿದ್ದ ಟೆಂಡರ್ ವಿಳಂಭದಿಂದಾಗಿ ಪುರಸಭೆ ಸಿಬ್ಬಂದಿಗಳಿಂದಲೇ ಕರ ವಸೂಲಿ ಮಾಡುತ್ತಿರುವುದು ಎಲ್ಲಡೆ ಆಕ್ರೋಶಕ್ಕೆ ಕಾರಣವಾಗಿದೆ.
ಪ್ರತಿ ವರ್ಷ ಮಾರ್ಚನಲ್ಲಿ ಸಂತೆ ಕರ ವಸೂಲಿಗಾಗಿ ಟೆಂಡರ್ ಕರೆಯಲಾಗುತ್ತಿತ್ತು. ಆದರೆ ಕಳೆದ ವರ್ಷ ಲಾಕ್‌ಡೌನ್ ನೆಪದಲ್ಲಿ ಟೆಂಡರ್ ಕರೆಯಲಿಲ್ಲ, ಅಲ್ಲಿಂದ ಇಲ್ಲಿವರಿಗೂ ಈ ಹಿಂದಿನ ಗುತ್ತಿಗೆದಾರರೇ ರಸೀದಿ ನೀಡದೇ ಆಕ್ರಮವಾಗಿ ಸಂತೆ ಕರ ವಸೂಲಿ ಮಾಡುತ್ತಿದ್ದರು ಎನ್ನಲಾಗಿದೆ. ಆಕ್ರಮವಾಗಿ ವಸೂಲಿ ಮಾಡುತ್ತಿರುವುದು ಪುರಸಭೆ ಮುಖ್ಯಾಧಿಕಾರಿಗಳ ಗಮನಕ್ಕೆ ಇದ್ದರೂ ಕ್ರಮವಹಿಸದೇ ಪರೋಕ್ಷವಾಗಿ ಗುತ್ತಿಗೆದಾರರಿಗೆ ಬೆಂಬಲ ನೀಡುತ್ತಿದ್ದಾರೆಂಬ ಅನುಮಾನಕ್ಕೆ ಎಡೆ ಮಾಡಿದೆ. ಗುತ್ತಿಗೆದಾರರು ಆಕ್ರಮವಾಗಿ ವಸೂಲಿ ಮಾಡುತ್ತಿರುವುದು ಸಾರ್ವಜನಿಕ ವಲಯಕ್ಕೆ ಗೊತ್ತಾಗಿ ಆಕ್ರೋಶ ವ್ಯಕ್ತಪಡಿಸುತ್ತಿದ್ದರಿಂದ ಇದನ್ನ ಅರಿತ ಪುರಸಭೆ ಮುಖ್ಯಾಧಿಕಾರಿ ಗುತ್ತಿಗೆದಾರರನ್ನು ಬಿಡಿಸಿ ಕರ ವಸೂಲಿಗೆ ಪುರಸಭೆ ಸಿಬ್ಬಂದಿಗಳನ್ನು ನಿಯೋಜನೆ ಮಾಡಿದ್ದಾರೆ.
ಕಳೆದ ವಾರದಿಂದ ಪುರಸಭೆ ಸಿಬ್ಬಂದಿಗಳು ವಾರದ ಸಂತೆಯಲ್ಲಿ ಕರ ವಸೂಲಿ ಮಾಡುತ್ತಿದ್ದಾರೆ. ಕಳೆದ ವಾರದ ೭೮೮೦ ರೂ ಮಾತ್ರ ವಸೂಲಿ ಮಾಡಿದ್ದಾರೆ. ಆದರೆ ಗುತ್ತಿಗೆದಾರರು ಇದ್ದಾಗ ಪ್ರತಿ ವಾರ ೨೫ ಸಾವಿರಕ್ಕೂ ಅಧಿಕ ಕರ ವಸೂಲಿಯಾಗುತ್ತಿತ್ತು. ಆದರೆ ಸಿಬ್ಬಂದಿಗಳ ನಿರಾಸಕ್ತಿಯಿಂದ ಕರ ವಸೂಲಿ ಮಾಡುತ್ತಿದ್ದರಿಂದ ಪುರಸಭೆ ಆದಾಯಕ್ಕೆ ಕತ್ತರಿ ಬಿದ್ದಿದೆ.
ಪುರಸಭೆ ಅಧ್ಯಕ್ಷ,ಉಪಾಧ್ಯಕ್ಷ ಹಾಗೂ ಸ್ಥಾಯಿ ಸಮಿತಿ ಅಧ್ಯಕ್ಷರು ಒಗ್ಗೂಡಿ ಈ ಹಿಂದೆ ಟೆಂಡರ್‌ದಾರರಿಗೆ ಕರ ವಸೂಲಿ ಮಾಡಲು ಮೂರು ತಿಂಗಳವರಿಗೆ ಮುಂದುವರಿಸಲು ೧.೭೭ ಲಕ್ಷ ರೂಪಾಯಿಗೆ ಗುತ್ತಿಗೆದಾರರೊಂದಿಗೆ ಅಗ್ರಿಮೆಂಟ್ ಮಾಡಿಕೊಳ್ಳಲಾಗಿತ್ತು. ೧.೭೭ ಲಕ್ಷ ರೂಪಾಯಿಗಳನ್ನು ಪುರಸಭೆ ಸಂದಾಯ ಮಾಡಲಾಗಿದೆ. ಆದರೆ ಪುರಸಭೆ ಮುಖ್ಯಾಧಿಕಾರಿಗಳು ಮಾತ್ರ ಈ ಅಗ್ರೀಮೆಂಟ್‌ಗೆ ಬೆಲೆ ಕೊಡದೇ ಚುನಾವಣಾ ನೀತಿ ಸಂಹಿತೆ ನೆಪವೊಡ್ಡಿ ಅಗ್ರೀಮೆಂಟ್ ರದ್ದುಪಡಿಸಿ ಪುರಸಭೆ ಸಿಬ್ಬಂದಿಗಳನ್ನು ಕರ ವಸೂಲಿಗೆ ಹಚ್ಚಿರುವುದು ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಸ್ಥಾಯಿ ಸಮಿತಿ ಅಧ್ಯಕ್ಷರ ಆಕ್ರೋಶಕ್ಕೆ ಕಾರಣವಾಗಿದೆ. ಪುರಸಭೆ ವ್ಯಾಪ್ತಿಯಲ್ಲಿ ಸಾಕಷ್ಟು ಕೆಲಸಗಳು ಬಾಕಿ ಇದೆ ಅದನ್ನು ನಿರ್ವಹಣೆ ಮಾಡಲು ಪುರಸಭೆ ಸಿಬ್ಬಂದಿಗಳು ಹರಸಾಹಸ ಪಡುತ್ತಿದ್ದಾರೆ ಇದರಿಂದ ಸಾರ್ವಜನಿಕರ ಕೆಲಸಗಳು ವಿಳಂಭವಾಗುತ್ತಿವೆ ಇಂತಹ ಸಮಯದಲ್ಲಿ ಸಂತೆ ಕರವಸೂಲಿಗೆ ಹಚ್ಚಿರುವುದು ಪುರಸಭೆ ಮುಖ್ಯಾಧಿಕಾರಿಗಳ ವಿರುದ್ಧ ಸಾರ್ವಜನಿಕರು ಕಿಡಿಕಾರಿದ್ದಾರೆ.
ಕೊರೊನಾ ಎರಡನೇ ಅಲೆ ದಿನದಿಂದ ದಿನಕ್ಕೆ ವ್ಯಾಪಕವಾಗಿ ಹರಡುತ್ತಿದೆ. ವಾರದ ಸಂತೆಯಲ್ಲಿ ವ್ಯಾಪಾರಿಗಳಿಗೆ ಹಾಗೂ ಸಾರ್ವಜನಿಕರು ಮಾಸ್ಕ ಹಾಗೂ ಅಂತರ ಕಾಯ್ದುಕೊಳ್ಳದೇ ವಹಿವಾಟು ಮಾಡುತ್ತಿದ್ದಾರೆ ಇದರಿಂದ ಕೊರೊನಾ ಸೊಂಕು ಹೆಚ್ಚಳಕ್ಕೆ ಕಾರಣವಾಗಿದೆ ಈ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಪುರಸಭೆ ಅಧಿಕಾರಿಗಳು ವಿಫಲರಾಗಿದ್ದಾರೆ.