ಅಧಿಕಾರಿಗಳ ಸೋಗಿನಲ್ಲಿ ವೈದ್ಯೆಗೆ ೪.೫ ಕೋಟಿ ವಂಚನೆ

ನವದೆಹಲಿ, ಮೇ.೨೦-ದೆಹಲಿಯಲ್ಲಿ ಮಹಾರಾಷ್ಟ್ರ ಮಾದಕವಸ್ತು ವಿಭಾಗದ ಅಧಿಕಾರಿಗಳು ಎಂದು ಹೇಳಿಕೊಂಡ ವಂಚಕರು ವೈದ್ಯೆಯೊಬ್ಬರ ಉಳಿತಾಯದಿಂದ ೪.೪೭ ಕೋಟಿ ರೂಪಾಯಿ ಲಪಟಾಯಿಸಿದ್ದಾರೆ.ಇದು ಅತಿ ದೊಡ್ಡ ಸೈಬರ್ ವಂಚನೆ ಪ್ರಕರಣ ಎಂದು ಹೇಳಲಾಗಿದೆ.
ವೈದ್ಯೆಗೆ ಬಂದಿದ್ದ ಫೆಡ್‌ಎಕ್ಸ್ ಕೊರಿಯರ್ ಪ್ಯಾಕ್‌ನಲ್ಲಿ ಬೃಹತ್ ಪ್ರಮಾಣದ ಮಾದಕ ವಸ್ತು “ಎಂಡಿಎಂಎ” ಪತ್ತೆಯಾಗಿದ್ದು, ಅದನ್ನು ವಶಪಡಿಸಿಕೊಳ್ಳಲಾಗಿದೆ ಎಂದು ೩೪ ವರ್ಷದ ವೈದ್ಯೆಗೆ ಮಾಹಿತಿ ನೀಡಿ ಹಣ ವಸೂಲಿ ಮಾಡಲಾಗಿದೆ.
ಮಾದಕ ವಸ್ತುಗಳ ಮಾರಾಟದಿಂದ ಬಂದ ಹಣವನ್ನು ನೀವು ಸ್ವೀಕರಿಸಿದ್ದೀರಿ ಎಂದು ಆಪಾದಿಸಿದ ವಂಚಕರು ವೈದ್ಯೆಯ ಖಾತೆಯ ಹಣವನ್ನು ತಾತ್ಕಾಲಿಕವಾಗಿ ಹಸ್ತಾಂತರಿಸುವಂತೆ ಬಲವಂತಪಡಿಸಿದರು ಎಂದು ತಿಳಿದು ಬಂದಿದೆ.
ಇನ್ನೂ, ಸ್ಕೈಪ್ ಕರೆಯ ಮೂಲಕ ವೈದ್ಯೆಯನ್ನು ಸಂಪರ್ಕಿಸಿದ ವಂಚಕರು ಸುಳ್ಳುಗಳ ಬಲೆ ಹೆಣೆದು, ಅಂಧೇರಿ ಪೊಲೀಸ್ ಠಾಣೆಯ ಅಧಿಕಾರಿಗಳು, ಆರ್‌ಬಿಐ ಅಧಿಕಾರಿಗಳು, ಮುಂಬೈ ಪೊಲೀಸ್ ಡಿಸಿಪಿ, ಕಸ್ಟಮ್ಸ್ ಅಧಿಕಾರಿಗಳು ಹಾಗೂ ಮಾದಕ ವಸ್ತು ವಿಭಾಗದ ಪೊಲೀಸರು ಎಂದು ನಂಬಿಸಿ ವಂಚನೆ ಜಾಲಕ್ಕೆ ಬೀಳಿಸಿದ್ದಾರೆ.
ಮುಂಬೈನಿಂದ ತೈವಾನ್‌ಗೆ ಈ ಪಾರ್ಸೆಲ್ ಅನ್ನು ೨೦೨೩ರ ಏಪ್ರಿಲ್ ೨೧ರಂದು ಬುಕ್ ಮಾಡಲಾಗಿದ್ದು, ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಮೂಲಕ ೨೫,೦೨೫ ರೂಪಾಯಿ ಶುಲ್ಕ ಹಾಗೂ ಜಿಎಸ್‌ಟಿ ಪಾವತಿಸಲಾಗಿದೆ ಎಂದು ವೈದ್ಯೆಗೆ ಮಾಹಿತಿ ನೀಡಲಾಗಿದೆ.
ಇದನ್ನು ಅವರು ನಿರಾಕರಿಸಿದಾಗ, ಅಂಧೇರಿ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಿಸುವಂತೆ ಸೂಚಿಸಿ, ಅಂಧೇರಿ ಠಾಣೆಯ ಇನ್‌ಸ್ಪೆಕ್ಟರ್ ಸ್ಮಿತಾ ಪಾಟೀಲ್ ಅವರನ್ನು ಸಂಪರ್ಕಿಸಿ ಆನ್‌ಲೈನ್ ಪ್ರಕರಣ ದಾಖಲಿಸುವಂತೆ ಸಲಹೆ ಮಾಡಿದ್ದಾರೆ. ಇದಕ್ಕಾಗಿ ಸ್ಕೈಪ್ ಅಪ್ಲಿಕೇಶನ್ ಡೌನ್‌ಲೋಡ್ ಮಾಡುವಂತೆ ಸೂಚಿಸಿದ್ದಾರೆ.

ಸ್ಮಿತಾ ಪಾಟೀಲ್ ಎಂಬ ಪರಿಚಯಿಸಿಕೊಂಡ ಮಹಿಳೆ ಆ ಬಳಿಕ ಸ್ಕೈಪ್‌ನಲ್ಲಿ ಸಂಪರ್ಕಿಸಿ, ಹೇಳಿಕೆಯನ್ನು ದಾಖಲಿಸುವಂತೆ ಸೂಚಿಸಿದ್ದಾಳೆ. ವೈದ್ಯೆಯ ಆಧಾರ್ ಐಡಿಯನ್ನು ದಾಖಲೆಯಾಗಿ ನೀಡಿ ೨೩ ಬ್ಯಾಂಕ್ ಖಾತೆ ತೆರೆಯಲಾಗಿದೆ ಎಂದು ನಂಬಿಸಿದ್ದಾರೆ. ಜತೆಗೆ ಪ್ರಕರಣದಲ್ಲಿ ನಿಮ್ಮನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತದೆ ಎಂದು ಬೆದರಿಕೆ ಹಾಕಿದ್ದಾರೆ.

ವೈದ್ಯೆಯ ಎಲ್ಲ ಬ್ಯಾಂಕ್ ಖಾತೆಗಳ ಸ್ಕ್ರೀನ್‌ಶಾಟ್ ಪಡೆದು ಹಂತ ಹಂತವಾಗಿ ಖಾತೆಯಿಂದ ಹಣ ತೆಗೆದಿದ್ದಾರೆ. ಸದ್ಯ ಎಫ್‌ಐಆರ್ ದಾಖಲಿಸಿಕೊಂಡಿರುವ ದೆಹಲಿ ಪೊಲೀಸರು ಪ್ರಕರಣದ ತಾಂತ್ರಿಕ ವಿಚಾರಣೆ ಆರಂಭಿಸಿದ್ದಾರೆ.