ಅಧಿಕಾರಿಗಳ ವಿರುದ್ಧ ಹರಿಹಾಯ್ದ ಶಾಸಕ ವೆಂಕಟೇಶ್

ಪಾವಗಡ, ಜೂ. ೧೦- ಸ್ಲಂಬೋರ್ಡ್‌ನಿಂದ ಪಟ್ಟಣದಲ್ಲಿ ವಸತಿ ನಿರ್ಮಾಣದಲ್ಲಿ ಅವ್ಯವಹಾರದ ಬಗ್ಗೆ ಇಂಜಿನಿಯರ್‌ಗಳಿಗೆ ತರಾಟೆ, ಬೆಸ್ಕಾಂ ಇಂಜಿನಿಯರ್‌ಗಳ ಲಂಚಾವತಾರ, ಪಟ್ಟಣದಲ್ಲಿ ರಿಂಗ್ ರಸ್ತೆ ನಿರ್ಮಾಣ, ಅದರ್ಶ ಶಾಲೆ ಸ್ಥಳಾಂತರ, ಪಟ್ಟಣದ ಅಸ್ಪತ್ರೆಯಲ್ಲಿ ರಾಜಕೀಯ, ವೈದ್ಯರಗಳ ರೌಡಿಸಂ ಮತ್ತಿತರ ವಿಷಯಗಳ ಬಗ್ಗೆ ಶಾಸಕ ಎಚ್.ವಿ. ವೆಂಕಟೇಶ್ ತಾಲ್ಲೂಕು ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆಯಿತು.
ಪ್ರೀತಿ-ವಿಶ್ವಾಸವಿಟ್ಟು ಸಾರ್ವಜನಿಕರ ಸೇವೆ ಮಾಡಬೇಕು. ಇದು ಮೊದಲಿನ ಸಭೆಯಾಗಿದ್ದರಿಂದ ನಿಮಗೆ ನೋವು ತರಿಸಬಾರದು ಎಂದು ಸಭೆಯನ್ನು ಮುಗಿಸುತ್ತಿದ್ದೇನೆ ಎಂದು ಶಾಸಕ ಎಚ್.ವಿ. ವೆಂಕಟೇಶ್ ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ತಾಲ್ಲೂಕು ಮಟ್ಟದ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಇಲಾಖಾವಾರು ಮಾಹಿತಿಯನ್ನು ಸಂಬಂಧಪಟ್ಟ ಅಧಿಕಾರಿಗಳಿಂದ ಪಡೆದುಕೊಂಡರು.
ಮೊದಲಿಗೆ ತಾಲ್ಲೂಕು ವೈದ್ಯಾಧಿಕಾರಿ ತಿರುಪತಯ್ಯ ಅವರು ಆರೋಗ್ಯ ಇಲಾಖೆ ಬಗ್ಗೆ ಮಾಹಿತಿ ನೀಡಿದಾಗ, ಪಟ್ಟಣದ ಸರ್ಕಾರಿ ಅಸ್ಪತ್ರೆಯಲ್ಲಿ ವೈದ್ಯರುಗಳು ರಾಜಕೀಯ ಮಾಡುತ್ತಿದ್ದಾರೆ. ೪ ಜನ ವೈದ್ಯರುಗಳು ಅನಧಿಕೃತವಾಗಿ ಗೈರು ಹಾಜರಾಗಿದ್ದು, ಸರ್ಕಾರಿ ಸಂಬಳ ಪಡೆದುಕೊಂಡು ಈ ರೀತಿ ಮಾಡಿದರೆ ಹೇಗೆ, ಖಾಸಗಿ ಅಸ್ಪತ್ರೆಯಲ್ಲಿ ಸಾರ್ವಜನಿಕರಿಂದ ಹಣ ಸುಲಿಗೆ ಮಾಡುತ್ತಿದ್ದಾರೆ. ಕೋಟಿಗಳ ವೆಚ್ಚದಲ್ಲಿ ತಾಯಿ-ಮಗು ಅಸ್ಪತ್ರೆ ನಿರ್ಮಾಣ ಮಾಡಿದ್ದು ವೈದ್ಯರಿಲ್ಲ ಎಂದರೆ ರೋಗಿಗಳ ಗತಿ ಏನು, ಅವರಿಗೆ ನೋಟೀಸ್ ಜಾರಿ ಮಾಡಿ, ಬಡವರ ಸೇವೆ ಮಾಡಿ ಎಂದು ತಿರುಪತಯ್ಯಗೆ ಖಡಕ್ ಸೂಚನೆ ನೀಡಿದರು.
ಅದರ್ಶ ಶಾಲೆಯ ಬಗ್ಗೆ ಮಾಹಿತಿ ಪಡೆದುಕೊಂಡ ಶಾಸಕರು
, ಅರಸೀಕರೆಗೆ ಅದರ್ಶ ಶಾಲೆಯ ವಿವಾದದ ಬಗ್ಗೆ ಬಿ.ಇ.ಓ. ಅಶ್ವತ್ಥ್‌ನಾರಾಯಣ ಮಾತನಾಡಿ, ಅರಸೀಕೆರೆ ಗ್ರಾಮ ೩೦ ಕಿಲೋ ಮೀಟರ್ ದೂರ ಇದ್ದು ಮಕ್ಕಳ ಪಾಲಕರು ಟಿ.ಸಿ.ಕೊಡಿ ಎಂದು ಪಟ್ಟು ಹಿಡಿದಿದ್ದರಿಂದ ಶಾಲೆ ಸ್ಥಳಾಂತರವಾಗಲಿಲ್ಲ. ಒಂದು ವೇಳೆ ಎಲ್ಲ ಮಕ್ಕಳಿಗೆ ವಸತಿನಿಲಯ ಪ್ರಾರಂಭ ಮಾಡಿದರೆ ಮಕ್ಕಳು ಹೋಗುತ್ತಾರೆ ಎಂದು ಬಿಇಒ ಉತ್ತರ ನೀಡುವಂತೆ ಶಾಲಕರು ಸೂಚಿಸಿದರು.
ಪಾವಗಡ ತಾಲ್ಲೂಕಿನಲ್ಲಿ ಬೆಸ್ಕಾಂ ಜೂನಿಯರ್ ಇಂಜನಿಯರ್‌ಗಳ ಲಂಚಾವತಾರದ ಬಗ್ಗೆ ರೈತರಿಂದ ದೂರು ಬಂದಿದ್ದು ಇದೆ ರೀತಿ ಮುಂದುವರೆದರೆ ರೈತರಿಂದಲೆ ಅವರನ್ನು ಕಟ್ಟಿಸಿ ಹಾಕಲಾಗುವುದು. ಐದಾರು ಲಕ್ಷದ ಬೆಳೆಯನ್ನು ಇಟ್ಟಿರುವ ರೈತರ ಪಾಡೇನು ಎಂದು ಬೆಸ್ಕಾಂ ಇಂಜನೀಯರ್ ವಿರುದ್ದ ಕಿಡಿಕಾರಿದಾಗ, ಕೃಷ್ಣ ಮೂರ್ತಿ ರೈತರಿಂದ ದೂರು ಬಂದರೆ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.
ಕೊಳಚೆ ನಿರ್ಮೂಲನಾ ಮಂಡಳಿಯ ಇಂಜನಿಯರ್‌ಗಳ ವಿರುದ್ದ ಶಾಸಕರು ತೀವ್ರ ತರಾಟೆಯನ್ನು ತೆಗೆದುಕೊಂಡರು, ಕಳೆದ ಹ ಲವು ವರ್ಷಗಳ ಹಿಂದೆ ಪಟ್ಟಣದಲ್ಲಿ ಕೊಳಚೆ ನಿರ್ಮೂಲನಾ ಮಂಡಳಿಯಿಂದ ಮೂಂಜೂರಾದ ಮನೆಗಳ ಟೆಂಡರ್ ಪಡೆದ ಗುತ್ತಿಗೆದಾರಿಂದ, ಸಬ್ ಗುತ್ತಿಗೆ ಪಡೆದುಕೊಂಡವರು, ಪ್ರತಿಯೊಬ್ಬ ಫಲಾನುಭವಿಯಿಂದ ೨೦ ಸಾವಿರ ರೂ. ಲಂಚ ಪಡೆದು, ಮನೆಗಳನ್ನು ಅರ್ಧಕ್ಕೆ ನಿಲ್ಲಿಸಿದ್ದು ಅತಿ ಜರೂರಾಗಿ ಮನೆಗಳನ್ನು ಸಂಪೂರ್ಣಗೊಳಿಸಿ ಎಂದು ಇಂಜನಿಯರ್ ಲೋಕೇಶ್‌ಗೆ ತಾಕೀತು ಮಾಡಿದರು.
ಕೆ.ಶಿಪ್‌ನಿಂದ ಕೊರಟಗೆರೆ, ಮಧುಗಿರಿ ಪಟ್ಟಣಗಳಲ್ಲಿ ರಿಂಗ್ ರಸ್ತೆ ನಿರ್ಮಾಣ ಮಾಡಿದ್ದು ಪಾವಗಡ ಪಟ್ಟಣಕ್ಕೆ ಏಕೆ ತಾರತಮ್ಯ ಮಾಡಿದ್ದೀರಾ, ಪಾವಗಡದಲ್ಲಿ ವಾಹನ ದಟ್ಟಣೆ ದಿನೇ ದಿನೇ ಹೆಚ್ಚಾಗುತ್ತಿದ್ದು, ಬಾರಿ ಗಾತ್ರದ ವಾಹನಗಳು ಸಂಚರಿಸುತ್ತಿದ್ದು,ಇದರಿಂದ ಕಿರಿ-ಕಿರಿಯುಂಟಾಗುತ್ತಿದೆ. ಕೂಡಲೆ ರಿಂಗ್ ರಸ್ತೆ ನಿರ್ಮಾಣ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಕೆ.ಶಿಪ್ ಇಂಜನಿಯರ್ ಅರುಣ್‌ಕುಮಾರ್‌ಗೆ ತಾಕೀತು ಮಾಡಿದರು.
ಲೋಕೋಪಯೋಗಿ ಇಲಾಖೆಯ ಇಂಜನಿಯರ್ ಅನಿಲ್‌ಕುಮಾರ್, ಜಿಲ್ಲಾ ಪಂಚಾಯಿತಿ ಮುಖ್ಯ ಇಂಜನಿಯರ್ ಸುರೇಶ್, ಬಸವಲಿಂಗಪ್ಪ, ಗ್ರಾಮೀಣ ಕುಡಿಯುವ ನೀರು ವಿಭಾಗದ ಇಂಜಿನಿಯರ್ ಹನುಮಂತಪ್ಪ, ತೋಟಗಾರಿಕಾ ಸಹಾಯಕ ನಿರ್ದೇಶಕ ಶಂಕರಮೂರ್ತಿ, ಸಹಾಯಕ ಕೃಷಿ ನಿರ್ದೇಶಕ ವಿಜಯಾಮೂರ್ತಿ, ರೇಷ್ಮೆ ಇಲಾಖೆಯ ನಾಗರಾಜ್, ಆಹಾರ ಇಲಾಖೆಯ ಶಿರಸ್ತೇದಾರ ಕೃಷ್ಣಮೂರ್ತಿ, ಅಹಾರ ನೀರೀಕ್ಷಕ ಮಂಜುನಾಥ್, ನಿರ್ಮಿತಿ ಕೇಂದ್ರದ ಸುಬ್ರಮಣ್ಯಂ, ಆಗ್ನಿಶಾಮಕ ಠಾಣಾಧಿಕಾರಿ ಎಸ್.ಆರ್. ಪಾಟೀಲ್, ಸಮಾಜ ಕಲ್ಯಾಣ ಇಲಾಖೆಯ ಮಲ್ಲಿಕಾರ್ಜುನ್, ಬಿಸಿಎಂ ಇಲಾಖೆಯ ಭದ್ರಾ ಮೇಲ್ದಂಡೆ, ಕೈಗಾರಿಕಾ ಇಲಾಖೆ, ಎಸ್.ಟಿ.ಇಲಾಖೆ ಮತ್ತಿತರ ಇಲಾಖೆಗಳ ಅಧಿಕಾರಿಗಳು ಮಾಹಿತಿ ನೀಡಿದರು.
ಸಭೆಯಲ್ಲಿ ತಹಶೀಲ್ದಾರ್ ಕೆ.ಎನ್. ಸುಜಾತ, ಈ.ಓ. ಶಿವರಾಜಯ್ಯ, ತಾ.ಪಂ. ಎ.ಡಿ.ರಂಗನಾಥ್, ಯೋಜನಾಧಿಕಾರಿ ಮಲ್ಲಿಕಾರ್ಜುನ್, ಪಿಎವಲ್‌ಡಿ ಬ್ಯಾಂಕ್ ಅಧ್ಯಕ್ಷ ಮಹಲಿಂಗಪ್ಪ, ಸಹಕಾರ ಬ್ಯಾಂಕ್‌ನ ವೆಂಕಟೇಶ್‌ನಾಯ್ಡು ಮತ್ತಿತರರು ಉಪಸ್ಥಿತರಿದ್ದರು.