ಅಧಿಕಾರಿಗಳ ವಿರುದ್ಧ ಸಿಎಂ ಗರಂ

‘ಭಯೋತ್ಪಾದನಾ ವಿರೋಧಿ ದಿನ’ ಆಚರಣೆ ಪ್ರಯುಕ್ತ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯರವರು ಭಯೋತ್ಪಾದನಾ ವಿರೋಧಿ ‘ದಿನದ ಪ್ರತಿಜ್ಞಾ ವಚನ’ವನ್ನು ಬೋಧಿಸಿದರು. ಸರ್ಕಾರದ ಮುಖ್ಯ ಕಾರ್ಯದರ್ಶಿ ರಜನೀಸ್ ಗೋಯಲ್, ಶಾಸಕ ನಂಜೇಗೌಡ ಹಾಗೂ ಸಿಬ್ಬಂದಿ ವರ್ಗದವರು ಇದ್ದಾರೆ.

ಬೆಂಗಳೂರು,ಮೇ.೨೧- ಭಯೋತ್ಪಾದನಾ ವಿರೋಧಿ ದಿನದ ಪ್ರತಿಜ್ಞಾ ವಚನ ಬೋಧನೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಗರಂ ಆದ ಘಟನೆ ನಡೆಯಿತು.
ಭಯೋತ್ಪಾದನಾ ವಿರೋಧಿ ದಿನ ಹಿನ್ನೆಲೆ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಪ್ರತಿಜ್ಞಾ ವಚನ ಬೋಧನೆ ಕಾರ್ಯಕ್ರಮ ಇತ್ತು. ಬೆಳಗ್ಗೆ ೧೧ ಗಂಟೆಗೆ ಕಾರ್ಯಕ್ರಮ ನಿಗದಿಯಾಗಿತ್ತು.
ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆಹ್ವಾನ ಇತ್ತು. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಗದಿತ ಸಮಯಕ್ಕೆ ಬಂದು ಸಭಾಂಗಣದಲ್ಲಿ ಕುಳಿತರೆ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಆಗಮಿಸಲಿರಲಿಲ್ಲ.
ಡಿ.ಕೆ. ಶಿವಕುಮಾರ್ ಬರ್ತಾರೆ ಎಂದ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್ ವಿರುದ್ಧ ಮುಖ್ಯಮಂತ್ರಿ ಮೊದಲು ಗರಂ ಆದರು. ಬರಲಿ ಬಿಡಿ, ನೀವು ಶುರು ಮಾಡಿ ಎಂದರು.
ಆದಾದ ಬಳಿಕ ಮತ್ತೆ ಆಪ್ತ ಕಾರ್ಯದರ್ಶಿ ವೆಂಕಟೇಶಯ್ಯ ಅವರಿಂದಲೂ ಉಪಮುಖ್ಯಮಂತ್ರಿ ಬರ್ತಿದ್ದಾರಂತೆ ಎಂದಾಗ ಮುಖ್ಯಮಂತ್ರಿ ಮತ್ತೆ ಗರಂ ಆದರು. ಅಯ್ಯೋ ಕತೆ ಆಯ್ತಲ್ರೀ.. ಬಂದ್ರೆ ಬರ್ತಾರೆ, ಕಮ್ ಅಂಡ್ ಜಾಯ್ನ್ ಎಂದು ಕಾರ್ಯಕ್ರಮ ಶುರು ಮಾಡಿಸಿದರು.
ಬಳಿಕ ವಿಧಾನಸೌಧದ ಅಧಿಕಾರಿ ವರ್ಗ, ಸಿಬ್ಬಂದಿ ವರ್ಗಕ್ಕೆ ಭಯೋತ್ಪಾದನಾ ವಿರೋಧಿ ದಿನದ ಪ್ರತಿಜ್ಞಾ ವಚನ ಬೋಧಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಂಗಳೂರು ಪ್ರವಾಸಕ್ಕೆ ಹೋಗಬೇಕು ಅಂತಾ ತರಾತುರಿಯಲ್ಲಿ ವಿಧಾನಸೌಧದಿಂದ ಹೆಚ್‌ಎಎಲ್‌ಗೆ ತೆರಳಿದರು.