ಅಧಿಕಾರಿಗಳ ವಿರುದ್ಧ ರೈತರ ಅಹೋರಾತ್ರಿ ಧರಣಿ

ಮುಳಬಾಗಿಲು,ಜು.೧೮- ಚೆನ್ನೈ ಕಾರಿಡಾರ್ ರಸ್ತೆ ಅಭಿವೃದ್ಧಿಗೆ ಭೂಮಿ ಕಳೆದುಕೊಂಡಿರುವ ರೈತರ ಮರಗಿಡಗಳ ಪರಿಹಾರ ನೀಡುವಂತೆ ಗಡಿಭಾಗದ ಏತರನಹಳ್ಳಿ ಕಾಮಗಾರಿ ಸ್ಥಳದಲ್ಲಿ ನೊಂದ ರೈತರಿಂದ ವಿಷದ ಬಾಟಲಿಗಳ ಸಮೇತ ಅಹೋರಾತ್ರಿ ಧರಣಿಯನ್ನು ಆರಂಭಿಸಲಾಯಿತು.
೮ ವರ್ಷಗಳ ಹಿಂದೆ ಚೆನ್ನೈ ಕಾರಿಡಾರ್ ರಸ್ತೆ ಅಭಿವೃದ್ಧಿಗೆ ವಿಶೇಷಭೂಸ್ವಾಧೀನಾಧಿಕಾರಿಗಳು ಗಡಿಭಾಗದ ಏತರನಹಳ್ಳಿ, ಚುಕ್ಕನಹಳ್ಳಿ ೧೧ ಜನ ರೈತರ ಕೃಷಿ ಭೂಮಿಯನ್ನು ಭೂಸ್ವಾಧೀನ ಮಾಡಿಕೊಂಡು ಅತಿ ಕಡಿಮೆ ಭೂಮಿ ಪರಿಹಾರ ನೀಡುವ ಮುಖಾಂತರ ಅಧಿಕಾರಿಗಳು ರೈತ ವಿರೋಧಿ ಧೋರಣೆ ಅನುಸರಿಸಿದ್ದಾರೆ ಎಂದು ನೊಂದ ರೈತ ಮಹಿಳೆ ಮಂಗಮ್ಮ ಅವ್ಯವಸ್ಥೆ ವಿರುದ್ಧ ಕಣ್ಣೀರು ಹಾಕಿದರು.
ಕೃಷಿಭೂಮಿಯಲ್ಲಿದ್ದ ಮರಗಿಡಗಳನ್ನು ಮಾರಾಟ ಮಾಡಲು ಅವಕಾಶಕೊಡದೆ ನೀವು ರಸ್ತೆ ಅಭಿವೃದ್ಧಿಗೆ ಅಡ್ಡಪಡಿಸಿದರೆ ನಿಮ್ಮನ್ನು ಜೈಲಿಗೆ ಹಾಕಿ ರಸ್ತೆ ಮುಗಿಯುವವರೆಗೂ ಬೇಲ್ ಸಿಗುವುದಿಲ್ಲ ಎಂದು ಬೆದರಿಸಿ ಗುತ್ತಿಗೆದಾರರು ಹಾಗೂ ಅಧಿಕಾರಿಗಳು ನಮ್ಮನ್ನು ವಂಚನೆ ಮಾಡಿ ಪ್ರತಿದಿನ ಕಚೇರಿಗೆ ಅಲೆಸಿಕೊಂಡು ಪರಿಹಾರವೂ ನೀಡದೆ ಪಿ ನಂಬರ್ ನೆಪದಲ್ಲಿ ವಂಚನೆ ಮಾಡುತ್ತಿದ್ದಾರೆ ಎಂದು ಆರೋಪ ಮಾಡಿದರು.
ನೊಂದ ರೈತ ಜನಾರ್ಧನ್, ವೆಂಕಟೇಶಪ್ಪ, ರಾಜಣ್ಣ ಮಾತನಾಡಿ, ಗಡಿಭಾಗದ ಎಲ್ಲಾ ರೈತರ ಜಮೀನು ಪಿ ನಂಬರ್‌ನಲ್ಲಿದೆ. ಆದರೆ, ಕಂದಾಯ ಸರ್ವೇ ಸಂಬಂಧಪಟ್ಟ ಅಧಿಕಾರಿಗಳು ಪಿ ನಂಬರ್ ದುರಸ್ಥಿಯಾದರೆ ಮರಗಿಡಗಳಿಗೆ ಪರಿಹಾರ ನೀಡಬಾರದೆಂದು ಜಿಲ್ಲಾಧಿಕಾರಿಗಳು ಆದೇಶ ಮಾಡಿದ್ದಾರೆಂದು ೮ ವರ್ಷಗಳಿಂದ ಸಂಸದರು, ಶಾಸಕರು, ಜಿಲ್ಲಾಡಳಿತ, ತಾಲೂಕು ಆಡಳಿತ ಎಲ್ಲಾ ಅಧಿಕಾರಿಗಳನ್ನು ಕೈಮುಗಿದು, ಕಾಲು ಹಿಡಿದು ಬೇಡಿಕೊಂಡರೂ ನಮ್ಮ ಸಮಸ್ಯೆಗೆ ಸ್ಪಂದಿಸುತ್ತಿಲ್ಲವೆಂದು ಅಧಿಕಾರಿಗಳ ಮುಂದೆ ತಮ್ಮ ನೋವನ್ನು ಹಂಚಿಕೊಂಡರು.
ನೂತನ ಜಿಲ್ಲಾಧಿಕಾರಿಗಳು ಗಡಿಭಾಗದ ೧೧ ಜನರ ಮರಗಿಡಗಳ ಪರಿಹಾರವನ್ನು ಕೂಡಲೇ ವಿತರಣೆ ಮಾಡಲು ಆದೇಶ ಮಾಡಬೇಕು. ಇಲ್ಲವಾದರೆ ನೊಂದ ರೈತರು ತೆಗೆದುಕೊಳ್ಳುವ ಕಠಿಣ ನಿರ್ಧಾರಕ್ಕೆ ಸಂಬಂಧಪಟ್ಟ ಅಧಿಕಾರಿಗಳೇ ನೇರಹೊಣೆ ಎಂದು ಎಚ್ಚರಿಕೆ ಸಂದೇಶ ನೀಡಿದರು.