ಅಧಿಕಾರಿಗಳ ವಿರುದ್ದ ದೂರು ಬಂದರೆ ನಿರ್ಧಾಕ್ಷಿಣ್ಯ ಕ್ರಮ: ಸುನಿಲ್ ಕುಮಾರ್

ಕೆ.ಆರ್.ಪೇಟೆ.ಮೇ.26: ಅಧಿಕಾರ ದುರ್ಭಳಕೆ, ಹಣ ದುರುಪಯೋಗ, ಲಂಚಕ್ಕಾಗಿ ಬೇಡಿಕೆ ಮುಂತಾದ ಕಾನೂನು ಬಾಹಿರ ಕಾರ್ಯ ಚಟುವಟಿಕೆಗಳಿಂದ ಸರ್ಕಾರಿ ನೌಕರರು ಮತ್ತು ಅಧಿಕಾರಿಗಳು ದೂರವಿರಬೇಕು. ಇಲ್ಲದಿದ್ದರೆ ನಿಮ್ಮ ವಿರುದ್ದ ದೂರುಗಳು ಬಂದರೆ ಲೋಕಾಯುಕ್ತ ನಿರ್ಧಾಕ್ಷಿಣ್ಯ ಕ್ರಮ ಜರುಗಿಸುತ್ತದೆಂದು ಲೋಕಾಯುಕ್ತ ಡಿವೈಎಸ್ಪಿ ಹೆಚ್.ಟಿ.ಸುನಿಲ್ ಕುಮಾರ್ ಎಚ್ಚರಿಸಿದರು.
ಪಟ್ಟಣದ ತಾಲೂಕು ಆಡಳಿತ ಸೌಧದ ಸಭಾಂಗಣದಲ್ಲಿ ಜಿಲ್ಲಾ ಲೋಕಾಯುಕ್ತ ಘಟಕದ ವತಿಯಿಂದ ಆಯೋಜಿಸಲಾಗಿದ್ದ ಸಾರ್ವಜನಿಕರ ಕುಂದುಕೊರತೆ, ದೂರುಗಳ ಸ್ವೀಕಾರ ಮತ್ತು ತಾಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆ ನಡೆಸಿ ಅವರು ಮಾತನಾಡಿದರು.
ಸರ್ಕಾರದ ಸವಲತ್ತುಗಳನ್ನು ಸಾರ್ವಜನಿಕರಿಗೆ ಸಕಾಲದಲ್ಲಿ ತಲುಪಿಸಬೇಕಾದ ಜವಾಬ್ದಾರಿ ವಿವಿಧ ಇಲಾಖೆಗಳ ಅಧಿಕಾರಿಗಳ ಮೇಲಿದೆ. ಆದರೆ ಕಂದಾಯ ಇಲಾಖೆ, ಗ್ರಾಮ ಪಂಚಾಯತಿ, ತಾಲೂಕು ಪಂಚಾಯತಿ, ಸರ್ವೆ ಇಲಾಖೆಗಳ ಮೇಲೆ ಸಾರ್ವಜನಿಕರ ಅರ್ಜಿಗಳನ್ನು ಸಕಾಲದಲ್ಲಿ ಸ್ವೀಕರಿಸಿ ವಿಲೇ ಮಾಡದ ಬಗ್ಗೆ ವ್ಯಾಪಕ ದೂರುಗಳಿವೆ. ಅಧಿಕಾರಿಗಳು ಸಾರ್ವಜನಿಕರ ಅರ್ಜಿಗಳನ್ನು ಕಡ್ಡಾಯವಾಗಿ ಸ್ವೀಕರಿಸಿ ಸಕಾಲದಲ್ಲಿ ಅವುಗಳನ್ನು ವಿಲೇ ಮಾಡಬೇಕು. ಅರ್ಜಿ ಸ್ವೀಕರಿಸಿದ ಬಗ್ಗೆ ಅರ್ಜಿದಾರರಿಗೆ ಸ್ವೀಕೃತಿ ಪತ್ರ ನೀಡಬೇಕು. ವಿಲೇ ಮಾಡಲಾಗದ ಅರ್ಜಿಗಳ ಬಗ್ಗೆ ಸೂಕ್ತ ಕಾರಣ ನೀಡಿ ಹಿಂಬರಹ ನೀಡಬೇಕು. ತಾಲೂಕಿನಲ್ಲಿ ಕೆಲವು ಕಡೆ ಅರ್ಜಿ ಸ್ವೀಕರಿಸಿ ವರ್ಷ ಕಳೆದರೂ ಪಿಡಿಓ ಗಳು ಅರ್ಜಿದಾರರ ಅರ್ಜಿ ವಿಲೇ ಮಾಡುವುದಿರಲಿ ಅರ್ಜಿ ಸ್ವೀಕಾರದ ಸ್ವೀಕೃತಿ ಪತ್ರಗಳನ್ನು ನೀಡದಿರುವ ಬಗ್ಗೆ ಲೋಕಾಯುಕ್ತಕ್ಕೆ ಸಾಕಷ್ಠು ದೂರುಗಳು ಬಂದಿವೆ. ಕಛೇರಿಗಳಿಗೆ ಸಾರ್ವಜನಿಕರ ಅನವಶ್ಯಕ ಅಲೆದಾಟವನ್ನು ನಿಲ್ಲಿಸಬೇಕು. ನಿಮಗೆ ಅರ್ಜಿಗಳಿಗೆ ಸಕಾಲದಲ್ಲಿ ಮುಕ್ತಿ ನೀಡಬೇಕು. ರೈತರು ಮತ್ತು ಸಾರ್ವಜನಿಕರ ಸಮಸ್ಯೆಗಳ ಪರಿಹಾರಕ್ಕೆ ಅಧಿಕಾರಿಗಳು ಮೊದಲ ಆದ್ಯತೆ ನೀಡುವಂತೆ ಸುನಿಲ್ ಕುಮಾರ್ ತಾಕೀತು ಮಾಡಿದರು.
ಮಾಹಿತಿ ಕೊರತೆ:
ಬಹುತೇಕ ಸಾರ್ವಜನಿಕರಿಗೆ ಲೋಕಾಯುಕ್ತ ಇಲಾಖೆಯ ಕಾರ್ಯವೈಕರಿಯ ಬಗ್ಗೆ ಮಾಹಿತಿಯ ಕೊರತೆಯಿದೆ. ಎಷ್ಟೋ ಜನರಿಗೆ ಲೋಕಾಯುಕ್ತ ಕಛೇರಿ ಎಲ್ಲಿದೆ ಎನ್ನುವುದೇ ಗೊತ್ತಿಲ್ಲ. ಅದಕ್ಕಾಗಿಯೇ ಜಿಲ್ಲಾ ಲೋಕಾಯುಕ್ತ ಪ್ರತಿ ತಿಂಗಳು ತಾಲೂಕು ಕೇಂದ್ರಕ್ಕೆ ಭೇಟಿ ನೀಡಿ ಅಧಿಕಾರಿಗಳ ಮತ್ತು ಸಾರ್ವಜನಿಕರ ಕುಂದುಕೊರತೆಗಳ ಸಭೆ ನಡೆಸಿ ಲೋಕಾಯುಕ್ತದ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡುತ್ತಿದೆ. ಸರ್ಕಾರಿ ಕಛೇರಿಗಳಲ್ಲಿನ ಬ್ರಷ್ಟಾಚಾರ, ಅನಗತ್ಯ ಕಿರುಕುಳದ ವಿರುದ್ದ ಸಾರ್ವಜನಿಕರು ದಾಖಲೆಗಳ ಸಮೇತ ದೂರು ನೀಡಿದರೆ ಅಂತಹ ಅಧಿಕಾರಿಗಳ ವಿರುದ್ದ ಲೋಕಾಯುಕ್ತ ಎಫ್.ಐ.ಆರ್ ದಾಖಲಿಸಿ ತನಿಖೆ ನಡೆಸಲಿದೆ. ಸಾರ್ವಜನಿಕರು ನಿರ್ಭಯದಿಂದ ಲೋಕಾಯುಕ್ತ ಸೇವೆಯನ್ನು ಸದ್ಬಳಕೆ ಮಾಡಿಕೊಳ್ಳಬೇಕೆಂದ ಹೆಚ್.ಟಿ.ಸುನಿಲ್ ಕುಮಾರ್ ಅಧಿಕಾರಿಗಳು ಸಾರ್ವಜನಿಕರಿಗೆ ಅಗತ್ಯ ದಾಖಲೆಗಳನ್ನು ನೀಡಲು ಸತಾಯಿಸಿದರೆ ಆರ್.ಟಿ.ಐ ಮೂಲಕ ಅರ್ಜಿ ಸಲ್ಲಿಸಿ ದಾಖಲೆಗಳನ್ನು ಪಡೆದುಕೊಳ್ಳಬಹುದು. ಆರ್.ಟಿ.ಐ ಮೂಲಕ ಕೇವಲ ದೂರು ಕೊಟ್ಟರೆ ಸಾಲದು. ದಾಖಲೆಗಳ ಸಮೇತ ದೂರು ನೀಡಿದರೆ ಲೋಕಾಯುಕ್ತ ಕಡ್ಡಾಯವಾಗಿ ಬ್ರಷ್ಟ ಅಧಿಕಾರಿಗಳ ವಿರುದ್ದ ದೂರು ದಾಖಲಿಸುತ್ತದೆ. ನಮಗೆ ಸಲ್ಲಿಕೆಯಾದ ದೂರುಗಳ ಬಗ್ಗೆ ನಮ್ಮ ಇಲಾಖೆ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ನಾವು ದೂರುದಾರರಿಗೆ ಮಾಹಿತಿ ತಿಳಿಸುತ್ತೇವೆಂದರು.
ಒತ್ತಡ ಹಾಕುವವರ ವಿರುದ್ದವೂ ದೂರು ನೀಡಿ: ಕಾನೂನು ಬಾಹಿರ ಕೆಲಸ ಮಾಡಲು ಕೆಲವರು ಸರ್ಕಾರಿ ನೌಕರರ ಮೇಲೆ ಅನಗತ್ಯ ಒತ್ತಡ, ಹಣದ ಆಮಿಷಗಳನ್ನು ಒಡ್ಡುತ್ತಾರೆ. ಈ ರೀತಿ ಆಮಿಷ ಮತ್ತು ಒತ್ತಡ ಹಾಕುವವರ ವಿರುದ್ದ ನೌಕರರು 7 ದಿನಗಳ ಒಳಗಾಗಿ ಲೋಕಾಯುಕ್ತಕ್ಕೆ ದೂರು ನೀಡಬಹುದು. ಆದರೆ ನೀವೇ ತಪ್ಪು ಮಾಡಿ ದೂರು ನೀಡುವ ಮೂಲಕ ಸಂಕಷ್ಟಕ್ಕೆ ಸಿಲುಕಬೇಡಿ ಎಂದು ಸಲಹೆ ನೀಡಿದ ಸುನಿಲ್ ಕುಮಾರ್, ಸರ್ಕಾರಿ ಆಸ್ಪತ್ರೆಗಳಲ್ಲಿ ಲಭ್ಯವಿರುವ ಔಷಧಿಗಳನ್ನು ಸಾರ್ವಜನಿಕರಿಗೆ ನೀಡದೆ ಹೊರಗಿನ ಔಷಧಿ ಅಂಗಡಿಗಳಿಗೆ ಚೀಟಿ ಬರೆಯುವ ಸಂಪ್ರದಾಯ ಮುಂದುವರಿದಿದೆ. ಇದು ತಕ್ಷಣ ನಿಲ್ಲಬೇಕು. ಸರ್ಕಾರಿ ಆಸ್ಪತ್ರೆಗಳಲ್ಲಿ ದೊರಯುವ ಎಲ್ಲಾ ಸೌಲಭ್ಯಗಳು ನಾಗರೀಕರಿಗೆ ಲಭ್ಯವಾಗಬೇಕು. ಈ ಬಗ್ಗೆ ಲೋಕಾಯುಕ್ತ ಅಧಿಕಾರಿಗಳು ಸರ್ಕಾರಿ ಆಸ್ಪತ್ರೆಗಳಿಗೆ ದಿಢಿರ್ ಭೇಟಿ ನೀಡಿ ಪರಿಶೀಲಿಸುತ್ತೇವೆಂದು ತಾಲೂಕು ಆರೋಗ್ಯಾಧಿಕಾರಿಗಳಿಗೆ ಎಚ್ಚರಿಸಿದರು.
ಜಿಲ್ಲಾ ಲೋಕಾಯುಕ್ತ ಪೆÇಲೀಸ್ ನಿರೀಕ್ಷಕರಾದ ಎಂ.ಆರ್.ಮೋಹನ್ ರೆಡ್ಡಿ, ಬಿ.ಪಿ.ಬ್ಯಾಟರಾಯಗೌಡ, ತಹಸೀಲ್ದಾರ್ ನಿಸರ್ಗಪ್ರಿಯ ಸೇರಿದಂತೆ ತಾಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿದ್ದರು.