ಅಧಿಕಾರಿಗಳ ಮೇಲೆ ಹಿಡಿತವಿಲ್ಲದ ನಗರಸಭೆ ಅಧ್ಯಕ್ಷ

ವಾರ್ಡ್ ೨೨ ಬೋರ್ ಕೆಟ್ಟಿದೆ, ಲೈಟ್ ಇಲ್ಲ – ಸ್ವಚ್ಛತೆ ಸ್ಥಗಿತ

  • ರಾಯಚೂರು.ಏ.೨೦- ನಗರದ ವಾರ್ಡ್ ೨೨ ರಲ್ಲಿ ನಾಲ್ಕು ಬೋರ್‌ವೆಲ್ ಕೆಟ್ಟಿವೆ. ಬೀದಿ ದೀಪಗಳಿಗೆ ಬಲ್ಬ್‌ಗಳಿಲ್ಲ. ಕುಡಿವ ನೀರಿನ ಒಂದು ಫೀಟ್ ಪೈಪ್ ದೊರೆಯದ ದುಸ್ಥಿತಿಯ ನಗರಸಭೆ ಆಡಳಿತ ವ್ಯವಸ್ಥೆಯಿಂದಾಗಿ ತಮ್ಮ ವಾರ್ಡ್‌ಗಳ ಜನರಿಗೆ ಮೂಲಭೂತ ಸೌಕರ್ಯ ಒದಗಿಸಲು ಸಾಧ್ಯವಾಗದ ಅಸಹಾಯಕತೆಯಲ್ಲಿ ಸದಸ್ಯರು ಕಾರ್ಯ ನಿರ್ವಹಿಸಬೇಕಾಗಿದೆಂದು ನಗರಸಭೆ ಸದಸ್ಯರಾದ ಜಿಂದಪ್ಪ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
    ಬೇಸಿಗೆಯಲ್ಲಿ ಕುಡಿವ ನೀರಿನ ಸಮಸ್ಯೆ ಸಾಮಾನ್ಯವಾಗಿ ಉದ್ಭವಿಸುತ್ತದೆ. ಇದಕ್ಕಾಗಿ ಪರ್ಯಾಯವಾಗಿ ಕೊಳವೆಬಾವಿಗಳನ್ನು ಬಳಸಿಕೊಳ್ಳಲಾಗುತ್ತದೆ. ಆದರೆ, ನನ್ನ ವಾರ್ಡಿನ ನಾಲ್ಕು ಕೊಳವೆಬಾವಿಗಳು ಕೆಟ್ಟು ನಿಂತಿವೆ. ಇವುಗಳನ್ನು ದುರಸ್ತಿ ಮಾಡಿಸಲು ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ವಾರ್ಡಿನ ಜನರ ಕುಡಿವ ನೀರಿನ ಸಮಸ್ಯೆ ಗಂಭೀರಗೊಳ್ಳುವಂತಾಗಿದೆ. ಈ ಬಗ್ಗೆ ನಗರಸಭೆ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಉಪಯೋಗವಾಗಿಲ್ಲ. ನನ್ನ ವಾರ್ಡಿನಲ್ಲಿರುವ ಐದು ಮರ್ಕ್ಯೂರಿ ಲೈಟ್ ಸೆಟ್‌ಗಳನ್ನು ನಗರಸಭೆ ಜೀಪ್‌ನಲ್ಲಿ ಬಂದು ಬಿಚ್ಚಿಕೊಂಡು ಹೋಗಿದ್ದಾರೆ.
    ದುರಂತವೆಂದರೇ, ಇನ್ನೂವರೆಗೂ ಇವುಗಳನ್ನು ಮರಳಿ ತಂದಿಲ್ಲ. ಯಾರು ಇವುಗಳನ್ನು ಕೊಂಡೊಯ್ದಿದ್ದು ಎಂದು ತಿಳಿಯುತ್ತಿಲ್ಲ. ಬೀದಿ ದೀಪಗಳ ಅಳವಡಿಸಬೇಕಾದ ನಗರಸಭೆ ಅವುಗಳನ್ನೇ ತೆಗೆದುಕೊಂಡು ಹೋದರೇ, ಜನರಿಗೆ ನಗರಸಭೆ ಯಾವ ರೀತಿಯಲ್ಲಿ ನೆರವು ನೀಡಿದಂತಾಗುತ್ತದೆ. ಕುಡಿವ ನೀರಿನ ಪೈಪ್ ಲೈನ್‌ನಲ್ಲಿ ಸಮಸ್ಯೆಯಾದರೇ, ತಕ್ಷಣವೇ ರಿಪೇರಿ ಕಾಮಗಾರಿ ಕೈಗೊಳ್ಳಲು ಸಾಧ್ಯವಾಗದ ದುಸ್ಥಿತಿ ಇದೆ. ಒಂದು ಫೀಟ್ ಪೈಪ್ ದೊರೆಯದ ಅವ್ಯವಸ್ಥೆ ನಗರಸಭೆಯಲ್ಲಿದೆ. ನಗರಸಭೆ ಅಧ್ಯಕ್ಷರು ಅಧಿಕಾರಿಗಳ ಮೇಲೆ ಹಿಡಿತ ಕಳೆದುಕೊಂಡಿದ್ದಾರೆ.
    ಆರಂಭದಲ್ಲಿ ಐದು ಶೋ ಸಿನಿಮಾ ರೀತಿಯಲ್ಲಿ ಕಾರ್ಯ ನಿರ್ವಹಿಸಿದ ಇವರು ಕೇವಲ ಒಂದು ವಾರದಲ್ಲಿ ಎಲ್ಲವೂ ಬದಲಾಗಿ ಈಗ ಒಂದು ಶೋಗೆ ಬಂದು ನಿಂತಿದೆ ಎನ್ನುವ ರೀತಿಯಲ್ಲಿ ಆಡಳಿತ ವ್ಯವಸ್ಥೆ ಕುಸಿದಿದೆ. ಅಧಿಕಾರಿಗಳ ಮೇಲೆ ಹಿಡಿತವೇ ಇಲ್ಲದ ಕಾರಣ ನಗರಸಭೆ ಅಸ್ತವ್ಯಸ್ತಗೊಂಡಿದೆ. ಸ್ವಚ್ಛತಾ ಕಾರ್ಯ ಸಂಪೂರ್ಣ ಸ್ಥಗಿತಗೊಂಡಿದೆ. ನಗರದ ಜನರಿಗೆ ಕನಿಷ್ಟ ಮೂಲಭೂತ ಸೌಕರ್ಯ ಒದಗಿಸಲಾಗದಿದ್ದರೇ, ನಗರಸಭೆ ಇರುವುದಾದರೂ ಏಕೆ ? ಎಂದು ಅವರು ಪ್ರಶ್ನಿಸಿದರು.