ಅಧಿಕಾರಿಗಳ ಭರವಸೆಯಿಂದ ಬಹಿಷ್ಕಾರ ನಿಲ್ಲಿಸಿದ ಮತದಾರರು

Oplus_0


ಸಂಜೆವಾಣಿ ವಾರ್ತೆ,
ಮರಿಯಮ್ಮನಹಳ್ಳಿ, ಮೇ.07: ಮರಿಯಮ್ಮನಹಳ್ಳಿಗೆ ಸಮೀಪದ ಚಿಲಕನಹಟ್ಟಿಯ ಮಾರುತಿ ನಗರದ 400 ಮತದಾರರು ಇಂದು ಮತದಾನ ಬಹಿಷ್ಕರಿಸಿ ಪ್ರತಿಭಟಿಸಿದರು.
ಚಿಲಕನಹಟ್ಟಿಯ ಮಾರುತಿನಗರದ 400 ನಿವಾಸಿಗಳು ದೂರದ 3 ಕಿ.ಮೀ ದೂರದ  ಹಾರುವನಹಳ್ಳಿಗೆ ಹೋಗಿ ಬೂತ್ ನಂಬರ್ 78 ಮತ ಹಾಕುವ ವಿಚಾರವಾಗಿ ಕಳೆದ ಹಲವು ಚುನಾವಣೆಗಳಿಂದಲೂ  ಪ್ರತ್ಯೇಕ ಮತಗಟ್ಟೆ ಮಾಡುವಂತೆ ಬೇಡಿಕೆ ಇಡುತ್ತಾ ಬಂದಿದ್ದರೂ ಯಾವೊಬ್ಬ ಅಧಿಕಾರಿಗಳು ಈ ಕುರಿತು ನಿರ್ಧಾರ ಕೈಗೊಂಡಿಲ್ಲ. ಮಾರ್ಗದಲ್ಲಿ ರಾಷ್ಟ್ರೀಯ ಹೆದ್ದಾರಿ ಇದ್ದು ಮಾರ್ಗವನ್ನು ದಾಟಲು ಯಾವುದೇ ಸುರಕ್ಷಿತ ಕ್ರಮಗಳಿಲ್ಲ. ಆದಕಾರಣ ಈ ಬಾರಿಯೂ ಹಾರುವನಹಳ್ಳಿಗೆ ಹೋಗಿ ನಾವು ಮತದಾನ ಮಾಡಬೇಕಾಗಿದೆ. ಪದೇ ಪದೇ ನಾವುಗಳು ಇದೇ ಬೇಡಿಕೆ ಇಡಬೇಕಾಗಿದೆ. ಆದ್ದರಿಂದ ಈ ಬಾರಿ ಮತ್ತೊಮ್ಮೆ ನಾವುಗಳು ಯಾರೂ ಮತ ಚಲಾಯಿಸುವುದಿಲ್ಲ ಎಂದು ಹಠ ಹಿಡಿದು ಕೂತರು.
ಸರ್ಕಾರಿ ಅಧಿಕಾರಿಗಳು ಎಷ್ಟೇ ಮನ ಒಲಿಸಿದರೂ ತಮ್ಮ ಪಟ್ಟು ಬಿಡದೇ ಪ್ರತ್ಯೇಕ ಮತಗಟ್ಟೆ ಮಾಡುವಂತೆ ಒತ್ತಾಯಿಸಿದರು.
ನಂತರ ಪಟ್ಟಣದ ಪಿಎಸ್ಐ ಮೌನೇಶ್ ರಾಠೋಡ್ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಸ್ಥಿತಿ ತಹಬದಿಗೆ ತಂದರು.
ಹಗರಿಬೊಮ್ಮನಹಳ್ಳಿ ತಹಶೀಲ್ದಾರರಾದ ಶಂಬಣ್ಣ ಎಸ್ ಗಾಳಿ ದೂರವಾಣಿ ಮೂಲಕ ಪ್ರತಿಭಟಕರನ್ನುದ್ಧೇಶಿಸಿ ಮಾತನಾಡಿ, ಮುಂದಿನ ಚುನಾವಣೆ ಒಳಗಾಗಿ ಪ್ರತ್ಯೇಕ ಮತಗಟ್ಟೆ ಸ್ಥಾಪಿಸುವುದಾಗಿ ಭರವಸೆ ನೀಡಿದ ನಂತರ ಮತದಾರರು ಮತ ಚಲಾವಣೆಗೆ ಮುಂದಾದರು.