ಅಧಿಕಾರಿಗಳ ನಿರ್ಲಕ್ಷ್ಯ: ಆರೋಪ


(ಸಂಜೆವಾಣಿ ವಾರ್ತೆ)
ಬ್ಯಾಡಗಿ,ಜು.27: ತಾಲೂಕಿನ ಸೂಡಂಬಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ತಿಮ್ಮಾಪುರ ಗ್ರಾಮದಲ್ಲಿ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆಯ ತಾಲೂಕ ಘಟಕದ ಅಧ್ಯಕ್ಷ ಮಂಜುನಾಥ ದಾನಪ್ಪನವರ ಆರೋಪಿಸಿದ್ದಾರೆ
ಪಿಡಿಓ ಅವರಿಗೆ ಈ ಬಗ್ಗೆ ಗ್ರಾಮ ಘಟಕದ ವತಿಯಿಂದ ಮನವಿಯನ್ನು ಸಲ್ಲಿಸಿ ಮಾತನಾಡಿದ ಅವರು, ತಿಮ್ಮಾಪುರ ಗ್ರಾಮದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಅನುದಾನದಡಿ ಅಗತ್ಯ ಮೂಲಭೂತ ಸೌಕರ್ಯಗಳಾದ ರಸ್ತೆ, ಕಾಲುವೆಗಳ ನಿರ್ಮಾಣ ಹಾಗೂ ಸ್ವಚ್ಛತೆ, ವಿದ್ಯುತ್ ಸೌಕರ್ಯ ನಿರ್ಮಾಣ ಸೇರಿದಂತೆ ವಿವಿಧ ಅಭಿವೃಧ್ದಿ ಕಾರ್ಯಗಳನ್ನು ಮತ್ತು ಸ್ವಚ್ಛ ಭಾರತ್ ಯೋಜನೆಯ ಸಮರ್ಪಕ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.
ಗ್ರಾಮ ಘಟಕದ ಮಹಿಳಾ ಅಧ್ಯಕ್ಷೆ ಹೊನ್ನಮ್ಮ ಕರಡಿ ಮಾತನಾಡಿ, ಆರೋಗ್ಯ ಮತ್ತು ನೈರ್ಮಲ್ಯ, ಶಾಲಾ ಅಭಿವೃದ್ಧಿ, ಮಹಿಳಾ ಸಬಲೀಕರಣ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸದೇ ಇರುವುದು ಮೇಲ್ನೋಟಕ್ಕೆ ಕಂಡುಬರುತ್ತದೆ. ಸ್ವಚ್ಛ ಭಾರತ ಯೋಜನೆ ಅಡಿಯಲ್ಲಿ ಚರಂಡಿ ಸ್ವಚ್ಛ ಮಾಡದೇ ಇರುವದು ಸಾಂಕ್ರಾಮಿಕ ರೋಗಗಳಾದ ಡೆಂಗ್ಯೂ ಮತ್ತು ಚಿಕನ್ ಗುನ್ಯಾ ಸೇರಿದಂತೆ ಹಲವು ರೋಗಗಳನ್ನು ಸಾಕಿ ಸಲಹುದಂತಾಗಿದೆ. ಇಷ್ಟಕ್ಕೆಲ್ಲ ಸಂಬಂಧಪಟ್ಟ ಪಂಚಾಯಿತಿಯ ನಿರ್ಲಕ್ಷ್ಯತನವೇ ಕಾರಣ ಎಂದು ಆರೋಪಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಪಿಡಿಓ ಕೋಟೆಪ್ಪ ಪುಟ್ಟಪ್ಪನವರ, ತಿಮ್ಮಾಪುರ ಗ್ರಾಮದಲ್ಲಿ ಮೂಲಭೂತ ಸೌಕರ್ಯಗನ್ನು ಕಲ್ಪಿಸಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಈ ಸಂದರ್ಭದಲ್ಲಿ ತಾಲೂಕಾ ಮಹಿಳಾ ಅಧ್ಯಕ್ಷೆ ಚೆನ್ನಮ್ಮ ಕೂರ್ಗೆರ, ವೀರೇಶ ಹಡಪದ, ಶಿವಾನಂದ ಚಿಕ್ಕಳ್ಳಿ, ಸುಮಿತ್ರ ಕರಡಿ, ನಿಂಗನಗೌಡ ಪಾಟೀಲ, ರೇಣುಕಾ ಕೊಪ್ಪದ, ಜ್ಯೋತಿ ಹರಿಜನ, ಲಲಿತವ್ವ ಮುತ್ತೂರ, ಭಾಗ್ಯ ಚಿಕ್ಕಳ್ಳಿ, ರೇಣುಕಾ ಹರಿಜನ, ಗಂಗಮ್ಮ ಕೊಪ್ಪದ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.