ಅಧಿಕಾರಿಗಳ ದೋರಣೆ ಖಂಡಿಸಿ ಚುನಾವಣಾ ಬಹಿಷ್ಕರ

ಸಂಜೆವಾಣಿ ವಾರ್ತೆ
ಹುಣಸೂರು, ಏ.16:- ತಾಲೂಕಿನ ಉದ್ದೂರು ಕಾವಲ್ ಗ್ರಾಮಪಂಚಾಯ್ತಿಗೆ ಸ್ವಂತ ಕಟ್ಟಡ ನಿರ್ಮಿಸಲು ಸರಕಾರಿ ಭೂಮಿ ಮಂಜೂರು ಮಾಡುವಲ್ಲಿ ಕಂದಾಯಾಧಿಕಾರಿಗಳು ಎರಡು ವರ್ಷಗಳಿಂದ ಸತಾಯಿಸುತ್ತಿದ್ದಾರೆಂದು ಆರೋಪಿಸಿರುವ ಗ್ರಾ.ಪಂ ಅಧ್ಯಕ್ಷೆ ಮುಬಾರಕ್‍ಬಾನು, ಉಪಾಧ್ಯಕ್ಷೆ ಪದ್ಮಮ್ಮ ಹಾಗೂ ಸದಸ್ಯರು ಅಧಿಕಾರಿಗಳ ದೋರಣೆಯನ್ನು ಖಂಡಿಸಿ ಲೋಕಸಭಾ ಚುನಾವಣೆಯನ್ನು ಬಹಿಷ್ಕರಿಸುವುದಾಗಿ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಗ್ರಾಮ ಪಂಚಾಯ್ತಿಗೆ ಕಳೆದ 25 ವರ್ಷಗಳಿಂದ ಸ್ವಂತ ಕಟ್ಟಡವಿಲ್ಲದೆ ಬ್ಯಾಡರಹಳ್ಳಿ ಕಾಲೋನಿಯ ಅಂಬೇಡ್ಕರ್ ಭವನ ಕಟ್ಟಡದಲ್ಲಿ ನಡೆಯುತ್ತಿತ್ತು. ಈಗ ಆ ಕಟ್ಟಡವು ಶಿಥಿಲಗೊಂಡ ಕಾರಣದಿಂದಾಗಿ ತಾತ್ಕಾಲಿವಾಗಿ ಜಾತ್ರಾಮಾಳದಲ್ಲಿರುವ ಸಾರ್ವಜನಿಕ ಸಮುದಾಯ ಭವನಕ್ಕೆ ಸ್ಥಳಾಂತರಿಸಲಾಗಿತ್ತು. ಅಂದಿನಿಂದಲೂ ಸ್ವಂತ ಕಟ್ಟಡ ನಿರ್ಮಾಣಕ್ಕೆ ಪ್ರಯತ್ನ ನಡೆದಿದ್ದು, ಗುದ್ದಲಿ ಪೂಜೆಯೂ ಸಹ ಆಗಿದೆ, ಆದರೆ ಅಧಿಕಾರಿಗಳ ಅಸಹಕಾರದಿಂದಾಗಿ ಅಗತ್ಯ ಸೌಲಭ್ಯವಿಲ್ಲದ, ಮಳೆ ಬಂದರೆ ಸೋರುವ ಅಭದ್ರ ಕಟ್ಟಡದಲ್ಲೇ ಕಾರ್ಯನಿರ್ವಹಿಸುವಂತಾಗಿದೆ ಎಂದು ಆರೋಪಿಸಿದರು.
ಈ ಬಗ್ಗೆ ಮಾಹಿತಿ ನೀಡಿದ ಸದಸ್ಯ ಮನುಕುಮಾರ್ ಉದ್ದೂರು ಕಾವಲ್ ಸರ್ವೆ ನಂಬರ್ 995 ರಲ್ಲಿ ಕಟ್ಟಡ ನಿರ್ಮಾಣಕ್ಕಾಗಿ 15 ಗುಂಟೆ ಭೂಮಿ ಮಂಜೂರಾಗಿ 2022 ರ ಸೆಪ್ಟಂಬರ್ 28 ರಂದು ಸಂಸದ ಪ್ರತಾಪಸಿಂಹ ಹಾಗೂ ಅಂದು ಶಾಸಕರಾಗಿದ್ದ ಎಚ್.ಪಿ.ಮಂಜುನಾಥ್ ಕಾಮಗಾರಿಗೆ ಗುದ್ದಲಿಪೂಜೆ ಸಹ ನೆರವೇರಿಸಿದ್ದರು. ಇದಕ್ಕಾಗಿ 35 ಲಕ್ಷ ರೂ ಕಾದಿರಿಸಲಾಗಿದೆ.
ಭೂಮಿಯ ದಾಖಲಾತಿ ಬಗ್ಗೆ ಇಲ್ಲ ಸಲ್ಲದ ತಕರಾರು ತೆಗೆಯುತ್ತ ಅಧಿಕಾರಿಗಳು ಸತಾಯಿಸುತ್ತಿದ್ದಾರೆ ಎಂದರು.
ಸುದ್ದಿಗೋಷ್ಟಿಯಲ್ಲಿ ಸದಸ್ಯರಾದ ವೀರಭದ್ರಯ್ಯ, ರಾಮಬೋವಿ, ಮುಖಂಡರಾದ ಮಹಮ್ಮದ್‍ರಫಿಕ್, ನಾರಾಯಣಗೌಡ ಇದ್ದರು.