ಅಧಿಕಾರಿಗಳ ತಂಡ ಸಕ್ರಿಯವಾಗಿ ಕಾರ್ಯನಿರ್ವಹಿಸಿ ಉತ್ತಮ ಫಲಿತಾಂಶ ನೀಡಬೇಕು : ಡಿಸಿ

ದಾವಣಗೆರೆ,ಏ.25:  ಕೋವಿಡ್‌ಗೆ ಸಕಾಲದಲ್ಲಿ ಚಿಕಿತ್ಸೆ ಮತ್ತು ನಿಯಂತ್ರಣಕ್ಕಾಗಿ ತಜ್ಞರ ಸಮಿತಿಯಿಂದ ನಿಯಮಿತ ಸಭೆ, ಡೆತ್ ಆಡಿಟ್ ಸಮಿತಿ ಪುನಾರಚನೆ, ಔಷಧಗಳ ಉಸ್ತುವಾರಿಗಾಗಿ ಫ್ಲೈ ಯಿಂಗ್ ಸ್ಕ್ವಾಡ್ ರಚನೆ ಹಾಗೂ ವಿವಿಧ ವ್ಯವಸ್ಥೆಗಳನ್ನು ನಿರ್ವಹಿಸಲು ನೋಡಲ್ ಅಧಿಕಾರಿಗಳ ನೇಮಕ ಸೇರಿದಂತೆ ಎಲ್ಲ ರೀತಿಯ ಸಿದ್ದತೆ ಮಾಡಿಕೊಳ್ಳಲು ಇಂದು ತುರ್ತು ಸಭೆ ಕರೆಯಲಾಗಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದರು. ಜಿಲ್ಲಾಡಳಿತ ಕಚೇರಿಯಲ್ಲಿ  ಡಿಹೆಚ್‌ಓ, ಡಿಎಸ್, ಡಿಎಸ್‌ಓ ಮತ್ತು ಎರಡು ಮೆಡಿಕಲ್ ಕಾಲೇಜುಗಳ ಮುಖ್ಯಸ್ಥರು ಸೇರಿದಂತೆ ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಜಿಲ್ಲಾಧಿಕಾರಿಗಳು ತುರ್ತು ಸಭೆ ನಡೆಸಿ ಕೋವಿಡ್ ಪರಿಣಾಮಕಾರಿ ಚಿಕಿತ್ಸೆ ಮತ್ತು ನಿಯಂತ್ರಣಕ್ಕೆ ಅಗತ್ಯವಾದ ನಿರ್ಧಾರಗಳನ್ನು ಕೈಗೊಂಡು, ವಿವಿಧ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಿದರು. ಕೋವಿಡ್ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಡಿಸಿ ಆದಿಯಾಗಿ ಎಲ್ಲರೂ ಒಂದು ತಂಡದಲ್ಲಿ ಶ್ರದ್ದೆಯಿಂದ ಕಾರ್ಯ ನಿರ್ವಹಿಸಬೇಕು. ಮೊದಲನೆಯದಾಗಿ ಜಿಲ್ಲೆಯಲ್ಲಿ ಸಂಭವಿಸುವ ಕೋವಿಡ್ ಅಥವಾ ನಾನ್ ಕೋವಿಡ್ ಸಾವು ಕುರಿತು ವಿಶ್ಲೇಷಣೆ ನಡೆಸಲು ಈ ಹಿಂದೆ ರಚಿಸಲಾಗಿದ್ದ ಡೆತ್ ಆಡಿಟ್ ಸಮಿತಿಯನ್ನು ತಕ್ಷಣವೇ ಮರು ರಚಿಸಿ, ಇಂದಿನಿಂದಲೇ ಸಂಭವಿಸುವ ಯಾವುದೇ ಸಾವಿನ ವರದಿಯನ್ನು ನೀಡಬೇಕೆಂದು ಡಿಹೆಚ್‌ಓ ಮತ್ತು ಜಿಲ್ಲಾ ಶಸ್ತ್ರಚಿಕಿತ್ಸಕರಿಗೆ ಸೂಚಿಸಿದರು.ತಜ್ಞರ ಸಮಿತಿ ಸಭೆ: ವೈದ್ಯಕೀಯ ತಜ್ಞರ ಸಮಿತಿಯ ಸದಸ್ಯರು ಪ್ರತಿ ಎರಡು ದಿನಗಳಿಗೆ ಒಮ್ಮೆ ಸಭೆಯನ್ನು ನಡೆಸಿ, ಆಸ್ಪತ್ರೆಯ ಸಕ್ರಿಯ ಪ್ರಕರಣಗಳು, ಆಕ್ಸಿಜನ್ ಬೆಡ್‌ಗಳಲ್ಲಿ ಎಷ್ಟು ಜನ ರೋಗಿಗಳು ಯಾವ ಸ್ಥಿತಿಯಲ್ಲಿದ್ದಾರೆ, ಯಾರಿಗೆ ಏನು ಅವಶ್ಯಕತೆ ಇದೆ ಹಾಗೂ ಮುಂದಿನ ಹತ್ತು ದಿನಗಳ ಪರಿಸ್ಥಿತಿ ಬಗ್ಗೆ ಪರಿಶೀಲನೆ ನಡೆಸಿ ವರದಿ ಸಿದ್ದಪಡಿಸಿ ಕ್ರಮ ವಹಿಸಬೇಕೆಂದು ಸೂಚನೆ ನೀಡಿದರು.ಫ್ಲೈಯಿಂಗ್ ಸ್ಕ್ವಾಡ್ ರಚನೆ : ಜಿಲ್ಲಾಸ್ಪತ್ರೆ ಉಗ್ರಾಣ ಹಾಗೂ ಇತರೆ ಕೋವಿಡ್ ನಿರ್ವಹಿಸುತ್ತಿರುವ ಆಸ್ಪತ್ರೆಗಳ ಫಾರ್ಮಸಿಗಳಲ್ಲಿ ಔಷಧಗಳ ಲಭ್ಯತೆ ಹಾಗೂ ಔಷಧಗಳ ಬಳಕೆ, ಹೆಚ್ಚಿನ ಬಳಕೆ ಮತ್ತು ದುರ್ಬಳಕೆ ಕುರಿತು ಉಸ್ತುವಾರಿ ನೋಡಿಕೊಳ್ಳಲು ಫ್ಲೈಯಿಂಗ್ ಸ್ಕ್ವಾಡ್ರಚಿಸಲಾಗುವುದು. ಈ ಫ್ಲೈಯಿಂಗ್ ಸ್ಕ್ವಾಡ್ ಪೊಲೀಸರ ಸಹಾಯ ಪಡೆದುಕೊಂಡು ಉಗ್ರಾಣ, ಫಾರ್ಮಸಿಗಳಿಗೆ ಭೇಟಿ ನೀಡಿ ಕೋವಿಡ್‌ಗೆ ಸಂಬಂಧಿಸಿದ ಯಾವುದೇ ಔಷಧಿ, ಲಸಿಕೆ ಕುರಿತು ಪರಿಶೀಲಿಸಿ ಔಷಧ ಲಭ್ಯತೆ ಮತ್ತು ಬಳಕೆ ಬಗ್ಗೆ ವಿವರವಾದ ವರದಿ ನೀಡಬೇಕೆಂದರು.
 ಹಾಗೂ ಕೆಪಿಎಂಇ ಅಡಿಯಲ್ಲಿ ಕಳೆದ ಬಾರಿ ರಚಿಸಲಾಗಿದ್ದ ತಂಡಗಳನ್ನು ಪುನಾರಚಿಸಲಾಗುವುದು. ಈ ತಂಡಗಳು ಮೆಡಿಕಲ್ ಶಾಪ್‌ಗಳ ವರದಿ ಮತ್ತು ವಿವಿಧ ಆಸ್ಪತ್ರೆಗಳಿಗೆ ಭೇಟಿ ನೀಡಿ ಅನಧಿಕೃತವಾಗಿ ರೆಮಿಡಿಸಿವಿರ್ ಸೇರಿದಂತೆ ಇತರೆ ಲಸಿಕೆ ಮಾರಾಟ ಮಾಡುತ್ತಿದ್ದರೆ ಅಂತಹ ಆಸ್ಪತ್ರೆಗಳನ್ನು ಮುಚ್ಚಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.ಆಕ್ಸಿಜನ್ ನಿರ್ವಹಣೆಗೆ ಪ್ರತ್ಯೇಕ ನೋಡಲ್ ಅಧಿಕಾರಿ : ಕೋವಿಡ್ ರೋಗಿಗಳಿಗೆ ಅಗತ್ಯವಿರುವ ಆಕ್ಸಿಜನ್ ಸರಬರಾಜು ಮಾಡಲು ಪ್ರತಿ ವಾರ್ಡುಗಳಿಗೆ ತೆರಳಿ ಯಾರಿಗೆ ಯಾವ ರೀತಿಯ ಆಕ್ಸಿಜನ್ ಅಗತ್ಯವಿದೆ ಎಂದು ವಿಶ್ಲೇಷಿಸಿ ನಿರ್ಧರಿಸಿ ಕ್ರಮ ಕೈಗೊಳ್ಳಲು ಪ್ರತ್ಯೇಕವಾಗಿ ಒಬ್ಬ ತಜ್ಞರನ್ನು ಆಕ್ಸಿಜನ್ ನಿರ್ವಹಣಾ ನೋಡಲ್ ಅಧಿಕಾರಿಯನ್ನಾಗಿ ನೇಮಿಸಲು ನಿರ್ಧರಿಸಲಾಗಿದೆ ಎಂದರು.
ಆರ್‌ಟಿಪಿಸಿಆರ್ ಲ್ಯಾಬ್ ನಿರ್ವಹಣೆಗೆ ಬೆಂಗಳೂರಿನ ರೋಗಿಗಳ ದಾಖಲು : ಬೆಂಗಳೂರಿನಲ್ಲಿ ಪ್ರಕರಣಗಳು ಹೆಚ್ಚಾಗಿ ಬೆಡ್ ಸಿಗದೇ ಇರುವ ಕಾರಣಕ್ಕೆ ದಾವಣಗೆರೆಗೆ ಕೆಲವರು ಬಂದು ಖಾಸಗಿ ಮತ್ತು ಜಿಲ್ಲಾಸ್ಪತ್ರೆಯಲ್ಲಿ ದಾಖಲಾಗಿರುವ ವಿಷಯ ಗಮನಕ್ಕೆ ಬಂದಿದ್ದು, ಇನ್ನು ಮುಂದೆ ವೈದ್ಯಾಧಿಕಾರಿಗಳು ನನ್ನ ಗಮನಕ್ಕೆ ತಂದು ದಾಖಲು ಮಾಡಿಕೊಳ್ಳಬೇಕು. ಮೊದಲು ಜಿಲ್ಲೆಯ ಅವಶ್ಯಕತೆಗಳನ್ನು ಪರಿಗಣಿಸಿ ನಂತರ ದಾಖಲಾತಿ ಮಾಡಲು ಕ್ರಮ ವಹಿಸಲಾಗುವುದು ಎಂದರು. ಸಭೆಯಲ್ಲಿ ಎಡಿಸಿ ಪೂಜಾರ ವೀರಮಲ್ಲಪ್ಪ, ಎಸಿ ಮಮತಾ ಹೊಸಗೌಡರ್ ಪಾಲಿಕೆ ಆಯುಕ್ತ ಸ್ಮಾರ್ಟ್ ಸಿಟಿ ಎಂಡಿ ರವೀಂದ್ರ ಮಲ್ಲಾಪುರ, ವಿಶ್ವನಾಥ ಮುದಜ್ಜಿ, ಜಿ.ಪಂ ಉಪ ಕಾರ್ಯದರ್ಶಿ ಆನಂದ್, ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕಿ ನಜ್ಮಾ, ಎಸ್‌ಎಲ್‌ಓ ರೇಷ್ಮಾ ಹಾನಗಲ್, ಡಿಹೆಚ್‌ಓ ಡಾ.ನಾಗರಾಜ್, ಡಿಎಸ್‌ಓ ಡಾ.ರಾಘವನ್, ಡಿಎಸ್ ಡಾ.ಜಯಪ್ರಕಾಶ್ ಹಾಜರಿದ್ದರು.