ಅಧಿಕಾರಿಗಳ ಕಣ್ತಪ್ಪಿ ನಡೆದ ಬಾಲ್ಯವಿವಾಹಗಳು. ಗರ್ಭತಪಾಸಣೆ ವೇಳೆ ಆಸ್ಪತ್ರೆಲಿ ಹೊರಬಿದ್ದ ಪ್ರಕರಣಗಳು.


ಬಿ ನಾಗರಾಜ ಕೂಡ್ಲಿಗಿ.
ಕೂಡ್ಲಿಗಿ. ಜೂ 26 :- ಬಾಲ್ಯವಿವಾಹ ಕಾನೂನು ಪ್ರಕಾರ ತಪ್ಪೆಂದು ಗೊತ್ತಿದ್ದರೂ ಗ್ರಾಮೀಣ ಭಾಗದ ಕೆಲವರು ಮೂಢನಂಬಿಕೆಗೆ ಕಟ್ಟುಬಿದ್ದು ಅಧಿಕಾರಿಗಳ ಕಣ್ತಪ್ಪಿಸಿ ಅಪ್ರಾಪ್ತ ಮಕ್ಕಳನ್ನು ಮದುವೆ ಮಾಡಿಸಿದ್ದು ಗರ್ಭವತಿಯಾಗಿರುವ ಅಪ್ರಾಪ್ತೆ ಆಸ್ಪತ್ರೆಗೆ ತಪಾಸಣೆಗೆಂದು ಬಂದಾಗ ಅವಳ ದಾಖಲಾತಿ ಆಧಾರದ ಮೇಲೆ ಬಾಲ್ಯವಿವಾಹ ಜರುಗಿರುವ ಪ್ರಕರಣಗಳು ಹೊರಬೀಳುತ್ತಿವೆ ಇದರಂತೆ ವಿಜಯನಗರ ಜಿಲ್ಲೆಯಲ್ಲಿ 50ಕ್ಕೂ ಹೆಚ್ಚು ಮತ್ತು ಕೂಡ್ಲಿಗಿ ತಾಲೂಕಿನಲ್ಲಿ ಹತ್ತಕ್ಕೂ ಹೆಚ್ಚು ಪ್ರಕರಣಗಳು ಇವೆ ಎಂದು ಹೇಳಲಾಗುತ್ತಿದ್ದು ಈಗಾಗಲೇ ಕೂಡ್ಲಿಗಿ ಪೊಲೀಸ್ ಠಾಣೆಯಲ್ಲಿ ಈ ಕುರಿತಾದ ಪ್ರಕರಣ ದಾಖಲಾಗಿವೆ  ಎಂದು ಹೇಳಲಾಗುತ್ತಿದೆ.
ಕಾನೂನು ರೀತಿಯಲ್ಲಿ ಹೆಣ್ಣಿಗೆ 18 ಹಾಗೂ ಗಂಡಿಗೆ 21ರ ವಯಸ್ಸಿನವರಿಗೆ ಮದುವೆ ಮಾಡಿ ಕೊಡಲು ಅವಕಾಶವಿದ್ದು ವಯಸ್ಸಿನ ಮಿತಿಯೊಳಗೆ ಮದುವೆ ಮಾಡಿದಲ್ಲಿ ಬಾಲ್ಯವಿವಾಹ ನಿಷೇಧಕಾಯ್ದೆ 2006ರ ಪ್ರಕಾರ ಅಪರಾಧವಾಗಿರುತ್ತದೆ. ಇಂತಹ ಬಾಲ್ಯವಿವಾಹ ತಡೆಗಟ್ಟಲು ನಿಷೇಧಾಧಿಕಾರಿಗಳಾಗಿ ಆಯಾ ಜಿಲ್ಲೆಯ ಜಿಲ್ಲಾಧಿಕಾರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರು, ಜಿಲ್ಲಾ ಕಾರ್ಮಿಕ ಅಧಿಕಾರಿಗಳು, ತಾಲೂಕು ತಹಶೀಲ್ದಾರರು, ಸಿಡಿಪಿಒ, ಕಂದಾಯ ನಿರೀಕ್ಷಕರು, ಗ್ರಾಮಲೆಕ್ಕಿಗರು ಸೇರಿದಂತೆ ಇತರರು ಬಾಲ್ಯವಿವಾಹ ತಡೆಗಟ್ಟುವ ಅಧಿಕಾರಿಗಳಾಗಿದ್ದಾರೆ ಆದರೆ ಇವರುಗಳ ಕಣ್ತಪ್ಪಿಸಿ  ಮೂಢನಂಬಿಕೆಗಳಿಗೆ ಕಟ್ಟುಬಿದ್ದ ಗ್ರಾಮೀಣ ಭಾಗದ ಜನತೆ ಮಕ್ಕಳ ಭವಿಷ್ಯ, ಆರೋಗ್ಯ, ಬಾಲ್ಯವಿವಾಹ ಮಾಡುವುದರಿಂದ ಆರೋಗ್ಯದ ಮೇಲಾಗುವ ದುಷ್ಪರಿಣಾಮಗಳ ತಿಳುವಳಿಕೆ, ಹುಟ್ಟುವ ಮಗು ಅಪೌಷ್ಟಿಕವಾಗಿ ಬೆಳೆಯುವ ಬಗ್ಗೆ ಅಂಗವಿಕಲತೆಯಾಗಿ ಹುಟ್ಟುವ ಬಗ್ಗೆ ಅರಿವಿಲ್ಲದೆ ಅಪ್ರಾಪ್ತರಾಗಿರುವಾಗಲೇ ಪಾಲಕ ಪೋಷಕರು ಮದುವೆ ಮಾಡುಕೊಡಲಾಗುತ್ತಿದೆ ಇದರ ಬಗ್ಗೆ ಗ್ರಾಮೀಣ ಭಾಗದಲ್ಲಿ ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಮೂಢಜನತೆಗೆ ತಿಳಿವಳಿಕೆ ನೀಡಿದರು ಬದಲಾಗದ ಮನಸ್ಥಿತಿಯ ಜನತೆ ಗ್ರಾಮೀಣ ಭಾಗದಲ್ಲಿ ಬಾಲ್ಯ ವಿವಾಹ ಮಾಡುತ್ತಿದ್ದು ಇಂತಹ ಪ್ರಕರಣಗಳು ಕೋವಿಡ್ ಸಂದರ್ಭದ ಲಾಕ್ ಡೌನ್ ಸಂದರ್ಭದಲ್ಲಿ ನಡೆದಿವೆ ಹಾಗೂ ಈಗ ಅಧಿಕಾರಿಗಳ ಕಣ್ತಪ್ಪಿಸಿ ಮಾಡಲಾಗಿದ್ದು ಗರ್ಭವತಿಯಾದ ಅಪ್ರಾಪ್ತೆ ಆಸ್ಪತ್ರೆಗೆ ತಪಾಸಣೆಗೆಂದು ಬಂದಾಗ ಅವಳ ಆಧಾರ ಕಾರ್ಡ್ ಸೇರಿದಂತೆ ಶಾಲಾ ದಾಖಲಾತಿ ಪರಿಶೀಲನೆ ಮಾಡಿದಾಗ 16 ಹಾಗೂ 17ರ ವಯಸ್ಸಿನ ಅಪ್ರಾಪ್ತ ಬಾಲಕಿಯರು ಗರ್ಭಧರಿಸಿದ್ದು ಕಂಡುಬಂದಿದ್ದರಿಂದ ಆಸ್ಪತ್ರೆಯ ವೈದ್ಯರು ತಕ್ಷಣ ಸಿಡಿಪಿಒ ಅಧಿಕಾರಿಗಳಿಗೆ ಹಾಗೂ ಪೊಲೀಸರ ಗಮನಕ್ಕೆ ತಂದಾಗ ಬಾಲ್ಯವಿವಾಹದ ಪ್ರಕರಣಗಳು ಪತ್ತೆಯಾಗುತ್ತಿವೆ.
ವಿಜಯನಗರ ಜಿಲ್ಲೆಯಲ್ಲಿ 50ಕ್ಕೂ ಹೆಚ್ಚು ಬಾಲ್ಯವಿವಾಹ ನಡೆದು ಈಗ ಗರ್ಭವತಿಯಾಗಿರುವ ಪ್ರಕರಣಗಳು ಇವೆ ಎಂದು ಹೇಳಲಾಗುತ್ತಿದೆ ಅದರಂತೆ ಕೂಡ್ಲಿಗಿ ಹಾಗೂ ಕೊಟ್ಟೂರು ತಾಲೂಕಿನಲ್ಲಿ ಕೂಡ್ಲಿಗಿ, ಶಿವಪುರ, ಬಡೇಲಡಕು ಕಕ್ಕುಪ್ಪಿ, ಹುಡೇಂ, ಹಾರಕಭಾವಿ, ಕೊಟ್ಟೂರು ದೂಪದಹಳ್ಳಿ ವ್ಯಾಪ್ತಿಯಲ್ಲಿ ದಾಖಲಾತಿ ಆಧರಿಸಿದಂತೆ 17ಕ್ಕೂ ಹೆಚ್ಚು ಪ್ರಕರಣಗಳು ಬಯಲಾಗುತ್ತಿವೆ ಎಂದು ಹೇಳಾಲಾಗುತ್ತಿದೆ  ಇದರಲ್ಲಿ ಕೂಡ್ಲಿಗಿ ಪೊಲೀಸ್ ಠಾಣೆಯಲ್ಲಿ ಈಗಾಗಲೇ ಎರಡು ಪೋಕ್ಸೋ ಪ್ರಕರಣಗಳು ದಾಖಲಾಗಿದ್ದು ದಾಖಲಾತಿಗಳ ಪರಿಶೀಲನೆ ಮಾಡಿದಂತೆ ಹಂತಹಂತವಾಗಿ ಬಾಲ್ಯವಿವಾಹದ ಪ್ರಕರಣ ದಾಖಲಾಗಲಿವೆ ಎಂದು ಸಂಬಂದಿಸಿದ ಇಲಾಖೆಗಳಿಂದ ತಿಳಿಯುತ್ತಿದೆ.

 ತಾಲೂಕಿನ ಗ್ರಾಮೀಣ ಪ್ರದೇಶದಲ್ಲಿ ಬಾಲ್ಯವಿವಾಹದಿಂದಾಗುವ ಅನಾಹುತಗಳ ಅರಿವಿಲ್ಲದ ಜನತೆ ಮೂಢನಂಬಿಕೆಗೆ ಕಟ್ಟುಬಿದ್ದು ಹಾಗೂ ಗುಳೇ ಹೋಗಿರುವ ಸಂದರ್ಭದಲ್ಲಿ ಅವರು ವಾಸಿಸುವ ಸ್ಥಳದಲ್ಲಿ ಅಧಿಕಾರಿಗಳ ಕಣ್ತಪ್ಪಿಸಿ ಬಾಲ್ಯವಿವಾಹ ಮಾಡಲಾಗಿದ್ದು ಗರ್ಭ ತಪಾಸಣೆ ವೇಳೆ ಅವರ ಮೂಲದಾಖಲಾತಿ ಪರಿಶೀಲನೆ ನಡೆಸಿದಾಗ ತಾಲೂಕಿನಲ್ಲಿ ಬಾಲ್ಯವಿವಾಹದ ಪ್ರಕರಣಗಳು ಹೊರಬಿದ್ದಿವೆ ಇವುಗಳ ಬಗ್ಗೆ ಸಿಡಿಪಿಒ ಹಾಗೂ ಪೊಲೀಸ್ ಇಲಾಖೆ ಮಾಹಿತಿ ನೀಡಲಾಗುತ್ತಿದೆ ಎನ್ನುತ್ತಾರೆ ಕೂಡ್ಲಿಗಿ ತಾಲೂಕು ವೈದ್ಯಾಧಿಕಾರಿ ಡಾ ಪ್ರದೀಪ.

 ಬಾಲ್ಯವಿವಾಹದ ಬಗ್ಗೆ ಜಾಗೃತಿ ಹಾಗೂ ಪ್ರತಿ ಗ್ರಾಮೀಣ ಭಾಗದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಆಶಾಕಾರ್ಯಕರ್ತೆಯರು ಶಾಲೆಯಲ್ಲಿ ಶಿಕ್ಷಕವರ್ಗದಿಂದಲೂ ಬಾಲ್ಯವಿವಾಹದ ಅರಿವು ಜನರಲ್ಲಿ ಮೂಡಿಸಲಾಗುತ್ತಿದ್ದರು ಅದು ಅಪರಾಧವೆಂದು ಗೊತ್ತಿದ್ದರೂ ದೇವಸ್ಥಾನ ಅಥಾವ ಗುಳೇ ಹೋಗಿರುವ ಜನತೆ ತಾವುಗಳು ವಾಸಿಸುವ ಟೆಂಟ್ ಗಳಲ್ಲಿ ಅಧಿಕಾರಿಗಳ ಕಣ್ತಪ್ಪಿಸಿ ಮದುವೆ ಮಾಡಲಾಗುತ್ತಿದೆ ಗರ್ಭವಸ್ಥೆಯಲ್ಲಿ ತಪಾಸಣೆಗೆ ಬಂದಾಗ ಅಪ್ರಾಪ್ತರ ಮದುವೆಯಾದ ಬಗ್ಗೆ ಆರೋಗ್ಯ ಇಲಾಖೆಯ ಮಾಹಿತಿಯಿಂದ ತಿಳಿದಿದ್ದು ತಾಲೂಕಿನಲ್ಲಿ ಇದರ ಬಗ್ಗೆ ಹೆಚ್ಚಿನ ಮಾಹಿತಿ ಕಲೆಹಾಕಲಾಗುತ್ತಿದೆ ಅಲ್ಲದೆ ಈಗಾಗಲೇ ಕೂಡ್ಲಿಗಿ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವ ಬಾಲ್ಯವಿವಾಹ ಕುರಿತಾಗಿರುವ ಎರಡು ಪ್ರಕರಣಗಳು ದಾಖಲಿಸಲಾಗಿದೆ ಇನ್ನು ತಾಲೂಕಿನಲ್ಲಿ ಪ್ರಕರಣಗಳಿವೆ ಎಂದು ಹೇಳಲಾಗುತ್ತಿದ್ದು ಶಾಲಾದಾಖಲಾತಿ ಪರಿಶೀಲನೆ ನಡೆಸಿ ಹಂತಹಂತವಾಗಿ ಆಯಾ ಠಾಣಾ ವ್ಯಾಪ್ತಿಯಲ್ಲಿ ಬಾಲ್ಯವಿವಾಹದಲ್ಲಿ ತೊಡಗಿರುವವರ ವಿರುದ್ಧ ಪ್ರಕರಣ ದಾಖಲಿಸಲಾಗುವುದಾಗಿ ಕೂಡ್ಲಿಗಿ ಶಿಶುಅಭಿವೃದ್ದಿ ಯೋಜನಾಧಿಕಾರಿ ನಾಗನಗೌಡ ತಿಳಿಸಿದ್ದಾರೆ.