ಅಧಿಕಾರಿಗಳೊಂದಿಗೆ ಶಾಸಕರ ಸ್ಥಳ ಪರಿಶೀಲನೆ

ಹುಬ್ಬಳ್ಳಿ,ಜೂ 8: ಹು-ಧಾ ಪೂರ್ವ ಕ್ಷೇತ್ರಕ್ಕೆ 3 ಹೊಸ ಅಂಗನವಾಡಿ ಕೇಂದ್ರಗಳು ಮಂಜೂರಾದ ಹಿನ್ನೆಲೆಯಲ್ಲಿ ಅವುಗಳ ಕಾರ್ಯಾರಂಭಕ್ಕಾಗಿ ಸೋಮವಾರ ಶಾಸಕ ಪ್ರಸಾದ ಅಬ್ಬಯ್ಯ ಅವರು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳೊಂದಿಗೆ ಕ್ಷೇತ್ರದ ವಿವಿಧೆಡೆ ಸ್ಥಳ ಪರಿಶೀಲನೆ ನಡೆಸಿದರು.
ವಾರ್ಡ ನಂ. 55ರ ಸಿದ್ದನಪೇಟೆ ಹಾಗೂ ವಾರ್ಡ ನಂ.63ರ ರಣದಮ್ಮ ಕಾಲನಿ ಹಾಗೂ ರಾಘವೇಂದ್ರ ಸರ್ಕಲ್‍ಗೆ ಭೇಟಿ ನೀಡಿ ಸ್ಥಳ ಪರಿಶೀಲಿಸಿದ ಅವರು, ತಾತ್ಕಲಿಕವಾಗಿ ಆಯಾ ವಾರ್ಡುಗಳ ಸಮುದಾಯ ಭವನಗಳಲ್ಲಿ ಅಂಗನವಾಡಿ ಕೇಂದ್ರಗಳು ಕಾರ್ಯಾರಂಭಿಸಲಿ, 3-4 ತಿಂಗಳೊಳಗೆ ಸ್ಥಂತ ಕಟ್ಟಡದಲ್ಲಿ ಅಂಗನವಾಡಿ ಕೇಂದ್ರಗಳು ಕಾರ್ಯನಿರ್ವಹಿಸುವಂತಾಗಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಚಿಕ್ಕ ಮಕ್ಕಳಲ್ಲಿ ಭೌತಿಕ, ಸಾಮಾಜಿಕ, ಭಾವನಾತ್ಮಕ ಮಟ್ಟ ವೃದ್ಧಿಸಿ, ಪೌಷ್ಠಿಕತೆ ಹೆಚ್ಚಿಸಲು ಹಾಗೂ ಸರ್ಕಾರಿ ಯೋಜನೆ, ಸೌಲಭ್ಯಗಳನ್ನು ಮನೆ ಬಾಗಿಲಿಗೆ ತಲುಪಿಸುವ ಮೂಲಕ ಗರ್ಭಿಣಿ- ಬಾಣಂತಿಯರಲ್ಲಿ ಆರೋಗ್ಯ ಕಾಳಜಿ ಮೂಡಿಸಿ, ಅವರಲ್ಲಿ ಪೌಷ್ಠಿಕಮಟ್ಟ ವೃದ್ಧಿಸಲು ಅಂಗನವಾಡಿ ಕೇಂದ್ರಗಳು ಸಹಕಾರಿಯಾಗಲಿದ್ದು, ತ್ವರಿತವಾಗಿ ಅಂಗನವಾಡಿ ಕೇಂದ್ರಗಳು ಕಾರ್ಯಾರಂಭ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಪಾಲಿಕೆ ಮಾಜಿ ಸದಸ್ಯ ವಿಜನಗೌಡ ಪಾಟೀಲ, ಮುಖಂಡರಾದ ಕುಮಾರ ಕುಂದನಹಳ್ಳಿ, ಪ್ರಸನ್ನ ಮಿರಜಕರ್, ಶರಣು ಪಾಟೀಲ, ರಾಜು ಗಾಣಿಗೇರ, ಸತೀಶ, ಸುರೇಶ, ಗಿರೀಶ, ರಾಜು ಕುಸುಗಲ್ಲ, ಬಾಗಣ್ಣ ಬಿರಾಜದಾರ, ಅನಸೂಯ ಪಾಟೀಲ, ನೀಲಮ್ಮ, ಚನ್ನಮ್ಮ, ಶ್ವೇತಾ ಗಾಣೀಗೇರ, ಸಾಹೀರಾಬಿ ಮುಲ್ಲಾ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಮಲಾ ಬೈಲೂರು, ಮೇಲ್ವಿಚಾರಕರಾದ ಸುಧಾ ಹೊಸಮನಿ, ಸುಮಂಗಳಾ ಬಸಾಪುರ, ಇತರರು ಇದ್ದರು.