ಅಧಿಕಾರಿಗಳು ಬದಲಾವಣೆಯಾದರೂ ಸಮಸ್ಯೆ ನಿವಾರಣೆಯಾಗಿಲ್ಲ

ದುರುಗಪ್ಪ ಹೊಸಮನಿ
ಲಿಂಗಸುಗೂರು,ಜ.೧೨- ಪುರಸಭೆ ವ್ಯಾಪ್ತಿಗೆ ಬರುವ ವಾರ್ಡ್ ನಂ -೧೫ ರಲ್ಲಿನ ಮೂಲಭೂತ ಸೌಕರ್ಯಗಳ ಸಮಸ್ಯೆಗಳು ಸಾವಿರ ಇಲ್ಲಿನ ನಿವಾಸಿಗಳ ಸಮಸ್ಯೆಗಳಿಗೆ ಕೊಡುವವರಾರು ಪರಿಹಾರ?
ಕುಡಿಯುವ ನೀರಿನ ಸಮಸ್ಯೆಯ ಕುರಿತು ಇತ್ತೀಚೆಗೆ ಪಟ್ಟಣದ ವಾರ್ಡ್ ನಂ-೧೫ ರ ನಿವಾಸಿಗಳು ಪುರಸಭೆಗೆ ಬೀಗ ಹಾಕಿ ಮುತ್ತಿಗೆ ಹಾಕಿದ ಘಟನೆ ಜಿಲ್ಲೆಯಾದ್ಯಂತ ಸುದ್ದಿಯಾಗಿತ್ತು. ನಂತರ ಕಾಟಾಚಾರಕ್ಕೆ ವಾರ್ಡಿಗೆ ಭೇಟಿ ನೀಡಿದ ಅಧಿಕಾರಿಗಳು ಮತ್ತು ರಾಜಕಾರಣಿಗಳು ಅಲ್ಲಿನ ನಿವಾಸಿಗಳಿಗೆ ಅದೇ ಹಳೆ ವರಸೆ ಸುಳ್ಳು ಆಶ್ವಾಸನೆ ನೀಡಿ ಮರಳಿದ್ದಾರೆ.
ಇಲ್ಲಿನ ಪುರಸಭೆಗೆ ಸುಮಾರು ೬ ಜನ ಮುಖ್ಯಾಧಿಕಾರಿಗಳು ಬದಲಾದರು, ೬ ಜನ ಅಧ್ಯಕ್ಷರು ಮತ್ತು ೬ಜನ ಉಪಾಧ್ಯಕ್ಷರು ಸಹ ಬದಲಾದರು, ಆದರೆ ನಮ್ಮ ಹಣೆ ಬರಹಕ್ಕೆ ಇಲ್ಲಿನ ಸಮಸ್ಯೆ ಮಾತ್ರ ಶಾಶ್ವತವಾಗಿ ಜೀವಂತ ಉಳಿದಿದೆ ಎನ್ನುತ್ತಾರೆ ನಿವಾಸಿಗಳು.
ಇನ್ನು ವಾರ್ಡ ಸದಸ್ಯರು ಚುನಾವಣೆ ಪೂರ್ವ ನಾನು ನಿಮ್ಮ ಮನೆಯ ಮಗ ನಿಮ್ಮ ಸೇವಕ ಅರ್ಧ ರಾತ್ರಿ ಕರೆ ಮಾಡಿದರು. ನಿಮ್ಮ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಸದಾ ಕಾಲ ನಿಮ್ಮ ಜೊತೆ ಇರುವೆ ಎಂಬ ಭರವಸೆಯ ನುಡಿಗಳು ಟೊಳ್ಳಾಗಿವೆ ಎನ್ನುತ್ತಾರೆ ಮತದಾರರು.
ಸದಸ್ಯರು ಅತೀವ ನಿರ್ಲಕ್ಷ ತೋರುತ್ತಿದ್ದು, ಆಟಕ್ಕುಂಟು ಲೆಕ್ಕಕ್ಕಿಲ್ಲದಂತಾಗಿದೆ ಇವರ ಕಾರ್ಯ.
ಕಳೆದ ವರ್ಷ ಧಾರಾಕಾರ ಮಳೆ ಸುರಿದಿದ್ದರಿಂದ ವಾರ್ಡಿನ ರಸ್ತೆಗಳೆಲ್ಲ ಜಲಾವೃತಗೊಂಡು ಕೆರೆಯಂತಾದ ಸಂದರ್ಭದಲ್ಲಿ ಶಾಸಕರು ಭೇಟಿ ನೀಡಿ ಈ ವಾರ್ಡಿನ ಸಮಸ್ಯೆಗಳನ್ನು ಶೀಘ್ರದಲ್ಲಿ ಪರಿಹರಿಸುವುದಾಗಿ ನೀಡಿದ ಭರವಸೆ ಕೂಡ ಹುಸಿಯಾಗಿಯೆ ಉಳಿದವು.
ಪ್ರಮುಖವಾಗಿ ವಾರ್ಡಿಗೆ ಸರಬರಾಜಾಗುವ ಕುಡಿಯುವ ನೀರಿನ ಪೈಪ್ ಲೈನ್ ಹಳ್ಳದಲ್ಲಿ ಹಾಕಲಾಗಿದ್ದು, ಇದೆ ಹಳ್ಳದಲ್ಲಿ ಸಾರ್ವಜನಿಕ ಶೌಚಾಲಯದ ಹಾಗೂ ಕೆಲವು ಮನೆಗಳಿಗೆ ನಿರ್ಮಿಸಿದ ಶೌಚಾಲಯದ ಮಲ ಮೂತ್ರ ಸಹ ಹರಿಬಿಡಲಾಗುತ್ತಿದೆ. ಒಡೆದು ಹೋಗಿರುವ ಕುಡಿಯುವ ನೀರಿನ ಪೈಪ್ ಮೂಲಕವೆ ಹೊಲಸು ಮಿಶ್ರಿತ ನೀರು ಸರಬರಾಜು ಆಗುತ್ತಿದ್ದು, ಇದನ್ನು ಕುಡಿಯಲು ಮತ್ತು ಉಪಯೋಗಕ್ಕಾಗಿ ಬಳಸುತ್ತಿರುವ ನಿವಾಸಿಗಳು ಹಲವಾರು ಗಂಭೀರ ರೋಗಗಳಿಗೆ ತುತ್ತಾಗುತ್ತಿದ್ದಾರೆ.
ಇಂತಹ ಗಂಭೀರ ಸಮಸ್ಯೆಯನ್ನು ಕಂಡು ಕಾಣದಂತೆ ಸುಳ್ಳು ಆಶ್ವಾಸನೆಗಳನ್ನು ಕೊಟ್ಟು ಜನರನ್ನು ಹತ್ತಾರು ರೋಗಗಳಿಗೆ ಬಲಿಯಾಗಿಸುವ ಕೆಲಸ ಇಲ್ಲಿನ ಅಧಿಕಾರಿಗಳು ಮತ್ತು ರಾಜಕಾರಣಿಗಳು ತಕ್ಷಣವೆ ನಿಲ್ಲಿಸಬೇಕಾಗಿದೆ ಹಾಗೂ ತ್ವರಿತವಾಗಿ ಕುಡಿಯುವ ನೀರಿನ ಪೈಪ್ ಲೈನ್ ಬೇರೆಕಡೆ ವ್ಯವಸ್ಥೆ ಮಾಡುವ ಮೂಲಕ ಸಾರ್ವಜನಿಕರ ಹಿತ ಕಾಪಾಡುವ ಮೂಲಕ ತಮ್ಮ ಕರ್ತವ್ಯನಿಷ್ಠೆ ತೋರದೆ ಇದ್ದಲ್ಲಿ ಜಿಲ್ಲಾಧಿಕಾರಿಗಳ ಕಾರ್ಯಲಯದ ಮುಂದೆ ಬೃಹತ್ ಪ್ರತಿಭಟನೆಗೆ ಮುಂದಾಗುತ್ತೇವೆಂದು ನಿವಾಸಿಗಳಾದ ಅಶ್ಮದ್ ಹಾಗೂ ಮಹಾಂತೇಶರವರು ಆಗ್ರಹಿಸಿದ್ದಾರೆ.