ಅಧಿಕಾರಿಗಳು ಪರಿಹಾರ ನೀಡುವಲ್ಲಿ ವಿಳಂಬ ಮಾಡಿದರೆ ನಿರ್ದಾಕ್ಷಿಣ್ಯ ಕ್ರಮ

ಬ್ಯಾಡಗಿ, ಮಾ21: ತಾಲೂಕಿನಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿ ಪರಿಹಾರ ನೀಡುವಲ್ಲಿ ವಿಳಂಬ ಧೋರಣೆ ಹಾಗೂ ತಾರತಮ್ಯ ನೀತಿ ತೋರುತ್ತಿರುವ ಬಗ್ಗೆ ದೂರುಗಳು ಬರುತ್ತಿದ್ದು, ಇಂತಹ ಅಧಿಕಾರಿಗಳ ಮೇಲೆ ತಾವು ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನು ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ನೀಡಿದ್ದಾರೆ.

ತಾಲೂಕಿನ ಘಾಳಪೂಜಿ ಗ್ರಾಮದಲ್ಲಿ ತಾಲೂಕಾ ಆಡಳಿತದಿಂದ ಶನಿವಾರ ಏರ್ಪಡಿಸಿದ್ದ “ಕಂದಾಯ ಇಲಾಖೆಯ ನಡೆ, ಹಳ್ಳಿಯ ಕಡೆ” ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸರ್ಕಾರವು ಸಾರ್ವಜನಿಕರು ದಿನನಿತ್ಯ ತಮ್ಮ ಕೆಲಸಗಳನ್ನು ಬಿಟ್ಟು, ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸುವ ಸದುದ್ದೇಶದಿಂದ ಈ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಿದ್ದು, ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಯಾವುದೇ ತೆರನಾದ ವಿಳಂಬ ನೀತಿ ಮತ್ತು ನಿರ್ಲಕ್ಷ್ಯತನವನ್ನು ತೋರದೆ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಿ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳಲು ಮುಂದಾಗುವಂತೆ ಸೂಚಿಸಿದರು.

ಒಂದೇ ದಿನದಲ್ಲಿ 188 ಅರ್ಜಿಗಳ ಇತ್ಯರ್ಥ..!!
ಕಾರ್ಯಕ್ರಮದಲ್ಲಿ ಒಟ್ಟಾರೆ 204ಕ್ಕೂ ಹೆಚ್ಚು ಅರ್ಜಿ ಸಲ್ಲಿಕೆಯಾಗಿದ್ದವು. ಇದರಲ್ಲಿ ಶನಿವಾರ ಒಂದೇ ದಿನ 188 ಅರ್ಜಿ ಇತ್ಯರ್ಥಗೊಳಿಸಲಾಗಿದ್ದು, ಇನ್ನುಳಿದ 16ಅರ್ಜಿಗಳು ಸರ್ವೇ ಕಾರ್ಯಕ್ಕೆ ಸಂಬಂಧಿಸಿದ್ದು, ಅವುಗಳ ತುರ್ತು ವಿಲೇವಾರಿ ಮಾಡಲು ಸೂಚಿಸಲಾಯಿತು. ಸಾಮಾಜಿಕ ಭದ್ರತಾ ಯೋಜನೆಯಡಿ 98ಕ್ಕೂ ಹೆಚ್ಚು ಅರ್ಜಿಗಳನ್ನು ತಹಶೀಲ್ದಾರ ರವಿಕುಮಾರ ಕೊರವರ, ಉಪ ತಹಶೀಲ್ದಾರ ರವಿ ಭೋಗಾರ ಖುದ್ದಾಗಿ ಪರಿಶೀಲಿಸಿ ಪರಿಹಾರ ಕಲ್ಪಿಸಿದ್ದಾರೆ.

ಇದೇ ಸಂದರ್ಭದಲ್ಲಿ ವಿವಿಧ ಪಲಾನುಭವಿಗಳಿಗೆ ಸಾಮಾಜಿಕ ಭದ್ರತಾ ಯೋಜನೆಯಡಿ ಮಂಜೂರಾತಿ ಪತ್ರಗಳನ್ನು ನೀಡಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಪಂ. ಅಧ್ಯಕ್ಷೆ ಕವಿತಾ ತಳವಾರ ವಹಿಸಿದ್ದರು. ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಶಾಂತಣ್ಣ ದೊಡ್ಡಮನಿ, ಎಪಿಎಂಸಿ ಅಧ್ಯಕ್ಷ ವೀರಭದ್ರಪ್ಪ ಗೊಡಚಿ, ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷ ಮಹಾಲಿಂಗಪ್ಪ ಗೂಳೇರ, ಗ್ರಾಪಂ ಉಪಾಧ್ಯಕ್ಷೆ ನೀಲಮ್ಮ ಹರಿಜನ, ಕೆಡಿಪಿ ಸದಸ್ಯ ನಂದೀಶ ನೆಲ್ಲಿಕೊಪ್ಪದ, ಮುಖಂಡರಾದ ಶಂಕ್ರಣ್ಣ ಮಾತನವರ, ಸುರೇಶ ಯತ್ನಳ್ಳಿ, ಸುರೇಶ ಕಳ್ಳಿಮನಿ, ಹುಚ್ಚಯ್ಯ ಹಮ್ಮಗಿಮಠ, ಗ್ರಾಪಂ. ಸದಸ್ಯರು, ತಾಲೂಕಾ ಮಟ್ಟದ ಅಧಿಕಾರಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು