
ಸಂಜೆವಾಣಿ ವಾರ್ತೆ
ಗಂಗಾವತಿ : ನಗರದ ಪ್ರವಾಸಿ ಮಂದಿರದಲ್ಲಿ ಭಾರತ ಚುನಾವಣಾ ಆಯೋಗದಿಂದ ನಿಯೋಜಿಸಲ್ಪಟ್ಟ ತಮಿಳುನಾಡಿನ ಹಿರಿಯ ಐಆರ್ ಎಸ್ (ಚುನಾವಣಾ ವೆಚ್ಚ ಪರಿವೀಕ್ಷಕರಾದ) ವೆಂಕಟೇಶ ಬಾಬು ಅವರ ಅಧ್ಯಕ್ಷತೆಯಲ್ಲಿ ಚುನಾವಣಾ ವೆಚ್ಚ ವೀಕ್ಷಕರ ಸಭೆ ನಡೆಯಿತು.
ಐಆರ್ ಎಸ್ ವೆಂಕಟೇಶ ಬಾಬು ಅವರು ಮಾತನಾಡಿ, ರಾಜಕೀಯ ಸಭೆ, ಸಮಾರಂಭಗಳ ಮೇಲೆ ಹದ್ದಿನ ಕಣ್ಣಿಡಬೇಕು. ಮಾದರಿ ನೀತಿ ಸಂಹಿತೆ ಕ್ರಮಗಳನ್ನು ಇನ್ನಷ್ಟು ಬಿಗಿಗೊಳಿಸಬೇಕು. ಅಧಿಕಾರಿಗಳು ಮುಕ್ತ, ಪಾರದರ್ಶಕ, ನಿಷ್ಪಕ್ಷಪಾತವಾಗಿ ಕೆಲಸ ಮಾಡಬೇಕು. ಚುನಾವಣಾ ಕೆಲಸಗಳನ್ನು ನಿರ್ಭಿತರಾಗಿ ಮಾಡಬೇಕು. ನೀತಿ ಸಂಹಿತೆ ಉಲ್ಲಂಘಿಸುವವರ ವಿರುದ್ಧ ಕ್ರಮಕೈಗೊಳ್ಳಬೇಕು ಸೂಚಿಸಿದರು. ವಿಡಿಯೋ ವಿಚಕ್ಷಣ ತಂಡ ಹಾಗೂ ಚುನಾವಣಾ ಲೆಕ್ಕಪತ್ರ ತಂಡದ ಕಾರ್ಯವೈಖರಿ ಕುರಿತು ಮಾಹಿತಿ ಪಡೆದರು.
ಗಂಗಾವತಿ 62 ವಿಧಾನಸಭಾ ಕ್ಷೇತ್ರ ಚುನಾವಣಾ ಅಧಿಕಾರಿಗಳಾದ ಬಸವಣೆಪ್ಪ ಕಲಶೆಟ್ಟಿ ಅವರು ಚುನಾವಣೆಗೆ ಸಿದ್ಧತೆ ಕೈಗೊಂಡ ಕ್ರಮಗಳ ಕುರಿತು ಮಾಹಿತಿ ನೀಡಿದರು.
ಐ ಆರ್ ಎಸ್ ಸಹಾಯಕರಾದ ರಾಘವೇಂದ್ರ ಜೋಶಿ, ಚುನಾವಣಾ ಸಹಾಯಕ ಅಧಿಕಾರಿಗಳು ಹಾಗೂ ತಹಸೀಲ್ದಾರರಾದ ಮಂಜುನಾಥ, ಎಂ.ಸಿ.ಸಿ. ನೋಡಲ್ ಅಧಿಕಾರಿಗಳು ಹಾಗೂ ತಾಪಂ ಇಓ ಮಹಾಂತಗೌಡ ಪಾಟೀಲ್, ಹಾಗೂ ವಿಎಸ್ ಪಿ, ವಿವಿಟಿ ತಂಡದ ಅಧಿಕಾರಿಗಳು ಇದ್ದರು.