ಅಧಿಕಾರಿಗಳು ತಮ್ಮ ಜವಾಬ್ದಾರಿ ಅರಿತು ಕೆಲಸ ಮಾಡಬೇಕು:ಸಚಿವ ಈಶ್ವರ ಬಿ.ಖಂಡ್ರೆ

ಬೀದರ, ಜು.31:ಜನರ ಜೀವ ಅತ್ಯಮೂಲ್ಯವಾಗಿದ್ದು ಅಧಿಕಾರಿಗಳು ತಮ್ಮ ಜವಾಬ್ದಾರಿ ಅರಿತು ಕೆಲಸ ಮಾಡಿದರೆ ಯಾವುದೇ ಸಮಸ್ಯೆಗಳು ಉಂಟಾಗುವುದಿಲ್ಲ ಎಂದು ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವರು ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರ ಬಿ, ಖಂಡ್ರೆ ಹೇಳಿದರು.

ಅವರು ರವಿವಾರ ಬೀದರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯಲ್ಲಿ ವಾಡಿಕೆಗಿಂತ ಹೆಚ್ಚವರಿ ಮಳೆಯಿಂದಾಗಿ ಸಂಭವಿಸಿರುವ ಹಾನಿ ಮತ್ತು ಸರ್ಕಾರದ ಮಹತ್ವದ ಐದು ಯೋಜನೆಗಳ ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದರು.

ಬರಿದಾಬಾದ ಮತ್ತು ಬೆಳಕೇರಾ ಗ್ರಾಮದಲ್ಲಿ ಕಲುಷಿತ ನೀರಿನಿಂದ 30 ರಿಂದ 40 ಜನ ಅಸ್ವಸ್ಥಗೊಂಡಿದ್ದಾರೆ ಸರ್ಕಾರ ಇದನ್ನು ಗಂಭೀರವಾಗಿ ತೆಗೆದುಕೊಂಡಿದೆ ಜನರ ಜೀವ ಅತ್ಯಮೂಲ್ಯವಾಗಿದ್ದು ಇದಕ್ಕೆ ಯಾರೆ ಕಾರಣಿಭೂತರಾದರು ಕ್ಷಮೆ ಇಲ್ಲ. ಗ್ರಾಮ ಪಂಚಾಯತಿ, ಪುರಸಭೆ, ನಗರಸಭೆ, ಗ್ರಾಮಿಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಹಾಗೂ ಸಂಬಧಿಸಿದ ಅಧಿಕಾರಿಗಳು ಜನರಿಗೆ ಶುದ್ಧವಾದ ಕುಡಿಯುವ ನೀರು ಒದಗಿಸಬೇಕೆಂದರು.

ಜಿಲ್ಲೆಯ 185 ಗ್ರಾಮ ಪಂಚಾಯತಿಗಳಿದ್ದು ಇಲ್ಲಿ ಇಂತಹ ಪ್ರಕರಣಗಳು ಪುನರಾವರ್ತನೆಯಾಗದ ರೀತಿಯಲ್ಲಿ ಅಧಿಕಾರಿಗಳು ಕ್ರಮ ವಹಿಸಬೇಕು ಮತ್ತು ಗ್ರಾಮ ಪಂಚಾಯತ 15ನೇ ಫೈನಾನ್ಸ್ ಅಡಿಯಲ್ಲಿ ಹಣವಿದ್ದು ಕುಡಿಯು ನೀರಿಗೆ ಯಾವುದೇ ತೊಂದರೆಯಾಗಬಾರದು ಎಂದ ಅವರು ಶಿಥಿಲಾವಸ್ಥೆ ಮತ್ತು ಸೋರುತ್ತಿರುವ ಶಾಲೆಗಳ ಮಾಹಿತಿಯನ್ನು ಮೂರು ದಿನಗಳೊಳಗೆ ಒದಗಿಸುವಂತೆ ಶಿಕ್ಷಣ ಇಲಾಖೆಯ ಉಪನಿರ್ದೇಶಕರಿಗೆ ಸೂಚನೆ ನೀಡಿದರು.

ಜಿಲ್ಲೆಯಲ್ಲಿ ಸ್ಮಶಾನ ಭೂಮಿಯ ಸಮಸ್ಯೆಯಿದ್ದು ವಿಶೇಷವಾಗಿ ದಲಿತರು ಹೆಣವನ್ನು ತೆಗೆದುಕೊಂಡು ಅಲೆದಾಡುವ ಪರಿಸ್ಥಿತಿ ಇದೆ. ನನ್ನ ಕಾಲಾವಧಿಯಲ್ಲಿ ಈ ಸಮಸ್ಯೆಯಾಗಬಾರದು ಜಾಗವಿದ್ದರೆ ಒಂದು ವಾರದಲ್ಲಿ ಅವರಿಗೆ ಭೂಮಿ ಮಂಜೂರು ಮಾಡಿ ಇಲ್ಲದಿದ್ದರೆ ಖಾಸಗಿ ಜಮೀನನ್ನು ಖರಿದಿ ಮಾಡಿ ಅವರಿಗೆ ನೀಡಬೇಕೆಂದು ಸಂಬಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಅಗಸ್ಟ 15 ರಂದು ನಡೆಯಲಿರು ಈ ವರ್ಷದ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮವನ್ನು ಎಲ್ಲರೂ ಸೇರಿ ಅದ್ಧೂರಿಯಾಗಿ ಇಡೀ ಜಿಲ್ಲೆಯಾದ್ಯಂತ ಆಚರಣೆ ಮಾಡಬೇಕು. ಈ ಕಾರ್ಯಕ್ರಮದಲ್ಲಿ ಎಲ್ಲಾ ಅಧಿಕಾರಿಗಳು ಭಾಗವಹಿಸಬೇಕು ಎಲ್ಲಾ ಶಾಲಾ-ಕಾಲೇಜುಗಳಲ್ಲಿ ಕಾರ್ಯಕ್ರಮ ಅಚ್ಚುಕಟ್ಟಾಗಿ ನಡೆಯುವಂತೆ ಸೂಚನೆ ನೀಡಬೇಕೆಂದು ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರಿಗೆ ಸಚಿವರು ನಿರ್ದೇಶನ ನೀಡಿದರು.

ಈ ಸಂದರ್ಭದಲ್ಲಿ ಪೌರಾಡಳಿತ ಮತ್ತು ಹಜ್ ಖಾತೆ ಸಚಿವ ರಹೀಂ ಖಾನ್, ಹುಮನ್ನಾಬಾದ ಶಾಸಕ ಡಾ.ಸಿದ್ದಲಿಂಗಪ್ಪ ಎಸ್.ಪಾಟೀಲ್, ಜಿಲ್ಲಾಧಿಕಾರಿ ಗೋವಿಂದರೆಡ್ಡಿ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಕ ಅಧಿಕಾರಿ ಶಿಲ್ಪಾ.ಎಂ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್.ಎಲ್.,ಬೀದರ ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ ವಾನತಿ.ಎಂ.ಎಂ,ಬಸವಕಲ್ಯಾಣ ಹಾಗೂ ಬೀದರ ಸಹಾಯಕ ಆಯುಕ್ತರು, ಅಪರ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ ಸೇರಿದಂತೆ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.