ಅಧಿಕಾರಿಗಳು ಕಾರ್ಯಾಂಗದ ಒಂದು ಭಾಗ:ಉಪ ಲೋಕಾಯುಕ್ತ ನ್ಯಾ.ಕೆ.ಎನ್.ಫಣೀಂದ್ರ

ಬೀದರ, ಸೆ.3: ಅಧಿಕಾರಿಗಳು ಕಾರ್ಯಾಂಗದ ಒಂದು ಭಾಗವಾಗಿದ್ದು, ಶಾಸಕಾಂಗದಲ್ಲಿ ಮಾಡಿದ ಕಾನೂನುಗಳನ್ನು ಜಾರಿಗೆ ತಂದು ಜನರಿಗೆ ತಲುಪಿಸುವ ಕೆಲಸ ತಮ್ಮ ಮೇಲಿದೆ ಎಂದು ಗೌರವಾನ್ವಿತ ನ್ಯಾಯಮೂರ್ತಿ ಉಪಲೋಕಾಯುಕ್ತ ಕೆ.ಎನ್.ಫಣೀಂದ್ರ ಹೇಳಿದರು.

ಅವರು ಶನಿವಾರ ಜಿಲ್ಲಾ ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ಸಾರ್ವಜನಿಕರ ಅಹವಾಲು, ಕುಂದು ಕೊರತೆ ದೂರು ವಿಚಾರಣೆ ಹಾಗೂ ಪ್ರಕರಣಗಳ ವಿಲೇವಾರಿ ಮಾಡಿ ಮಾತನಾಡಿದರು.

ಸಾರ್ವಜನಿಕರು ಕೊಟ್ಟ ಅರ್ಜಿಗಳನ್ನು ಇಲ್ಲೇ ಪರಿಶೀಲಿಸಿ ಸಮಸ್ಯೆಗಳಿಗೆ ಪರಿಹಾರ ಮಾಡಲಾಗುವುದು, ಕೆಲವು ಅರ್ಜಿಗಳಿಗೆ ಕಾಲಾವಕಾಶ ನೀಡಿ ಅವುಗಳಿಗೆ ಪರಿಹಾರ ನೀಡಲಾಗುವುದು. ಆರ್ಥಿಕವಾಗಿ, ಸಾಮಾಜಿಕವಾಗಿ ಹಿಂದುಳಿದವರು ಮತ್ತು ಮಹಿಳೆಯರಿಗೆ ಹಾಗೂ 3 ಲಕ್ಷಕ್ಕಿಂತ ಕಡಿಮೆ ವಾರ್ಷಿಕ ಆದಾಯ ಇರುವವರಿಗೆ ಜಿಲ್ಲಾ ಸೇವಾ ಕಾನೂನು ಪ್ರಾಧಿಕಾರದ ವತಿಯಿಂದ ಉಚಿತ ಕಾನೂನು ನೆರವು ನೀಡಲಾಗುವುದು. ಲೋಕಾಯುಕ್ತದ ಬಗ್ಗೆ ಜನರಿಗೆ ಅರಿವು ಮೂಡಿಸಲು ಜಿಲ್ಲೆಯ ಎಲ್ಲಾ ನ್ಯಾಯಾಧೀಶರಿಗೆ ಮತ್ತು ಅಧಿಕಾರಿಗಳಿಗೆ ಮಾಹಿತಿ ನೀಡಲಾಗುವುದು ಎಂದರು.

ಇದು 9ನೇ ಜಿಲ್ಲೆಯಲ್ಲಿ ಇಂತಹ ಕಾರ್ಯಕ್ರಮ ಮಾಡುತ್ತಿದ್ದು, ಈ ಹಿಂದೆ 8 ಜಿಲ್ಲೆಗಳಲ್ಲಿ ಕಾರ್ಯಕ್ರಮ ಮಾಡಿ ಸಾರ್ವಜನಿಕರ ಕುಂದು ಕೊರತೆಗಳನ್ನು ಬಗೆಹರಿಸುವ ಕೆಲಸಗಳನ್ನು ಲೋಕಾಯುಕ್ತ ಸಂಸ್ಥೆ ಮಾಡಿದೆ. ಸಾರ್ವಜನಿಕರು ಲೋಕಾಯುಕ್ತ ಸಂಸ್ಥೆಗೆ ಹೇಗೆ ದೂರು ಸಲ್ಲಿಸಬೇಕು ಮತ್ತು ಪರಿಹಾರ ಹೇಗೆ ಪಡೆದುಕೊಳ್ಳಬೇಕೆಂಬುವುದು ಬಹಳಷ್ಟು ಜನರಿಗೆ ಗೊತ್ತಿರುವುದಿಲ್ಲ. ಆದ್ದರಿಂದ ಇಂತಹ ಕಾರ್ಯಕ್ರಮಗಳನ್ನು ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ ಆಯೋಜಿಸುವ ಮೂಲಕ ಜನರಿಗೆ ಅರಿವು ಮೂಡಿಸುವುದು ಲೋಕಾಯುಕ್ತದ ಅಭಿಲಾಷೆಯಾಗಿದೆ ಎಂದು ಹೇಳಿದರು.

ಅಂಬೇಡ್ಕರ್ ಅವರು ನೀಡಿದ ಸಂವಿಧಾನದ ಆಶೆಯದಂತೆ ಎಲ್ಲರಿಗೂ ಸಮಪಾಲು-ಸಮಬಾಳು ಎಂಬಂತೆ ಸಾಮಾನ್ಯ ವ್ಯಕ್ತಿಗೂ ಗೌರವಯುತವಾಗಿ ಜೀವನ ನಡೆಸುವಂತೆ ಮಾಡುವುದು ಪ್ರತಿಯೊಂದು ಸರ್ಕಾರದ ಕೆಲಸವಾಗಿದೆ. ಕೆರೆ, ಕಟ್ಟೆ, ನೀರಾವರಿ, ಆಸ್ಪತ್ರೆ ಸಾಮಾನ್ಯ ಜನರಿಗೆ ಅನುಕೂಲವಾಗಲು ಸಂವಿಧಾನ ಆಧಾರದ ಮೇಲೆ ಎಲ್ಲಾ ಸರ್ಕಾರಗಳು ಇವುಗಳನ್ನು ಮಾಡುತ್ತವೆ ಇದರ ಅನುಷ್ಠಾನಗೊಳಿಸಲು ಕಾರ್ಯಾಂಗದ ಒಂದು ಭಾಗವಾದ ಅಧಿಕಾರಿಗಳು ಜನರಿಗೆ ತಲುಪಿಸುವ ಕೆಲಸ ಮಾಡಬೇಕೆಂದರು. ವೈಯಕ್ತಿಕ ವ್ಯಾಜ್ಯಗಳನ್ನು, ಹಕ್ಕುಗಳನ್ನು ಚಲಾವಣೆ ಮಾಡುವ ಗೋಸ್ಕರ ನ್ಯಾಯಯುತ ಸೌಲಭ್ಯಗಳನ್ನು ಜನರಿಗೆ ತಲುಪಿಸುವ ಗೋಸ್ಕರ ನ್ಯಾಯಾಂಗ ರಚಿಸಲಾಯಿತು. ಕಾರ್ಯಾಂಗ, ಶಾಸಕಾಂಗ ಸರಿಯಾಗಿ ಕೆಲಸ ಮಾಡುತ್ತಿವೆಯೇ ಎನ್ನುವ ಕಾರಣಕ್ಕಾಗಿ ಕೆಲವೊಂದು ಸಂಸ್ಥೆಗಳನ್ನು ಹುಟ್ಟುಹಾಕಲಾಯಿತು. 1984 ರಲ್ಲಿ ಲೋಕಾಯುಕ್ತ ಸಂಸ್ಥೆಯನ್ನು ಹುಟ್ಟು ಹಾಕಲಾಯಿತು ಮತ್ತು ಇದು ಏಕೆ ಬೇಕು, ಇದರ ಕಾರ್ಯವ್ಯಾಪ್ತಿ ಏನು, ಯಾರು ನಡೆಸಿಕೊಂಡು ಹೋಗಬೇಕು ಎಂದು ಆಯಾ ರಾಜ್ಯಗಳಿಗೆ ಲೋಕಪಾಲ ಸಂಸ್ಥೆಗಳನ್ನು ಮಾಡಿದರು, ಇದು ಕಾರ್ಯಾಂಗ ಅನುಷ್ಠಾನಗೊಳಿಸುವ ಸಂದರ್ಭದಲ್ಲಿ ಸರಿಯಾಗಿ ಅದು ಜನರಿಗೆ ತಲುಪುತ್ತಿದೆಯಾ ಅಥವಾ ಲೋಪವಾದರೆ ಅದನ್ನು ಸರಿಪಡಿಸುವ ಕೆಲಸ ಲೋಕಾಯುಕ್ತ ಮಾಡುತ್ತಿದೆ. ಸಾರ್ವಜನಿಕ ಅಧಿಕಾರಿಯು ಕರ್ತವ್ಯಲೋಪ ಉಂಟಾಗಿ ಉದ್ದೇಶ ಪೂರ್ವಕವಾಗಿ ತಪ್ಪು ಮಾಡಿದ್ದಾನೆ ಎಂದರೆ ಅವನ ನಡುವಳಿಕೆ ತಿದ್ದುವ ಕೆಲಸವನ್ನು ಲೋಕಾಯುಕ್ತ ಸಂಸ್ಥೆ ಮಾಡುತ್ತಿದೆ ಎಂದರು.

ಕೆರೆ, ಕಟ್ಟೆ ಒತ್ತುವರಿ, ಸರ್ಕಾರಿ ರಸ್ತೆ ಸರಿಯಾಗಿ ಮಾಡದೆ ಇರುವುದು ಶಾಸಕಾಂಗ ಮಾಡಿದ ಕಾನೂನು ಸರಿಯಾಗಿ ಅರ್ಥೈಸಿಕೊಳ್ಳಲು ಕಾರ್ಯಾಂಗ ಹಿಂದೆ ಬಿದ್ದರೆ ಇದನ್ನು ಸರಿಪಡಿಸುವ ಕೆಲಸ ಲೋಕಾಯುಕ್ತ ಸಂಸ್ಥೆ ಮಾಡುತ್ತದೆ. ಬರುವಾಗ ಬೀದರ ನೋಡಿಕೊಂಡು ಬಂದೆ ರಸ್ತೆಯಲ್ಲಿ ಕಸ ಬಿದ್ದಿದೆ, ಸಾರ್ವಜನಿಕರು ನಮ್ಮ ಮನೆಯಂತೆ ನಗರದ ಸುಚಿತ್ವವನ್ನು ಕಾಪಾಡಬೇಕು ಮತ್ತು ನಗರಸಭೆಗಳು ನಗರವನ್ನು ಸ್ವಚ್ಚವಾಗಿ ಇಟ್ಟುಕೊಳ್ಳುವ ಕೆಲಸ ಮಾಡಬೇಕು. ಪತ್ರಿಕಾ ರಂಗದವರು ಯಾವುದೇ ಸಾರ್ವಜನಿಕ ಸಮಸ್ಯೆಗಳನ್ನು ಪತ್ರಿಕೆಯಲ್ಲಿ ಪ್ರಕಟಿಸಿದರೆ ಅದನ್ನು ಸ್ವಯಂ ದೂರು ದಾಖಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.

ಸರ್ಕಾರಿ ಸಾರ್ವಜನಿಕ ಅಧಿಕಾರಿಗಳು ಸಾಕ್ಷಿ ಹುಟ್ಟು ಹಾಕುವುದು, ನಾಶ ಪಡಿಸುವುದು ಕಂಡುಬಂದರೆ ಅಂತಹ ಸಂದರ್ಭದಲ್ಲಿ ಪ್ರಬೋಷನರಿ ತನಿಖೆ ನಡೆಸುತ್ತೇವೆ. ಲೋಕಾಯುಕ್ತ ಪೊಲೀಸ್ ಇದರಲ್ಲಿ ಇಂಜಿನಿಯರಿಂಗ ವಿಭಾಗ ಮತ್ತು 35 ರಿಂದ 40 ಜನ ನ್ಯಾಯಾಂಗದ ಅಧಿಕಾರಿಗಳು ಕೆಲಸ ಮಾಡುತ್ತಾರೆ, ಸಾರ್ವಜನಿಕರು ಲೋಕಾಯುಕ್ತಕ್ಕೆ ಅರ್ಜಿ ಸಲ್ಲಿಸಿದರೆ ಎಂದರೆ ಅಧಿಕಾರಿಗಳು ಸಮಸ್ಯೆ ಪರಿಹಾರ ಮಾಡುತ್ತಾರೆ. ಲೋಕಾಯುಕ್ತದಿಂದ ನೋಟಿಸ್ ಕೊಟ್ಟ ನಂತರ ಸಮಸ್ಯೆ ಪರಿಹಾರ ಮಾಡುತ್ತಾರೆ. ಕೆಲವು ಅಧಿಕಾರಿಗಳು ಏನು ನೋಟಿಸ್ ಕೊಟ್ಟರು ಸಮಸ್ಯೆ ಪರಿಹಾರ ಮಾಡುವುದಿಲ್ಲ ಅಂತಹವರ ವಿರುದ್ಧ ಕ್ರಮ ತೆಗೆದುಕೊಳ್ಳಲು ಸರ್ಕಾರಕ್ಕೆ ಶಿಫಾರಸ್ಸು ಮಾಡುತ್ತೆವೆ ಎಂದು ಹೇಳಿದರು.

ಮಲ್ಲಿಕಾರ್ಜುನ ಚಿಟ್ಟಗುಪ್ಪ ಅವರು ಮುನ್ಸಿಪಾರ್ಟಿ ಎದರುಗಡೆ ಚರಂಡಿ ಮಾಡುತ್ತಿಲ್ಲ ಎಂದು ಉಪ ಲೋಕಾಯುಕ್ತರಿಗೆ ದೂರು ಸಲ್ಲಿಸಿದರು, ಉಪ ಲೋಕಾಯುಕ್ತರು ಸಂಬಂಧಪಟ್ಟವರಿಗೆ ನಿರ್ದೇಶನ ನೀಡಿ 15 ದಿನದೊಳಗಾಗಿ ಇದಕ್ಕೆ ಕ್ರಮವಹಿಸಲು ಸೂಚಿಸಿದರು. ಕರ್ನಾಟಕ ಪ್ರಜಾಶಕ್ತಿ ಬೀದರನ ಸಾಯಿಸಿಂಧೆ ಅವರು ಎಸ್.ಸಿ.,ಎಸ್.ಟಿ. ಸಮುದಾಯ ಭವನ ಕಳಪೆ ಮಟ್ಟದಿಂದ ಮಾಡಿದ್ದಾರೆ ಎಂದು ದೂರು ಸಲ್ಲಿಸಿದರು. ಉಪಲೋಕಾಯುಕ್ತರು ಇದರ ತನಿಖೆ ಮಾಡಿ ಸಂಬಂಧಿಸಿದವರ ಮೇಲೆ ಕ್ರಮವಹಿಸಲಾಗುವುದೆಂದರು. ಕರಬಸಯ್ಯ ಚನ್ನಬಸಯ್ಯ ತೊಗಲೂರ ಇವರು 11ಇ ನಕಾಶೆ ತಯ್ಯಾರಿ ಮಾಡಿಕೊಡುತ್ತಿಲ್ಲ ಎಂದು ದೂರು ಸಲ್ಲಿಸಿದಾಗ ಉಪಲೋಕಾಯುಕ್ತರು ಹುಲಸೂರ ತಹಸೀಲ್ದಾರರನ್ನು ಕರೆದು 15 ದಿನದೊಳಗಾಗಿ ಇದನ್ನು ಮಾಡಿಕೊಡಬೇಕೆಂದು ಹೇಳಿದರು.

ಸಂಜೀವರೆಡ್ಡಿ ತಂದೆ ಗುಂಡಾರೆಡ್ಡಿ ಇವರು ತಮ್ಮ ಹೊಲದ 2 ಎಕರೆ ಪಹಣಿ ತಪ್ಪಾಗಿ ನಮೂದಾಗಿದ್ದು ಇದನ್ನು ತಿದ್ದುಪಡಿ ಮಾಡಿಕೊಡಲು ಔರಾದ ತಹಸೀಲ್ ಕಚೇರಿಯಲ್ಲಿ ಅರ್ಜಿ ಸಲ್ಲಿಸಿದ್ದು ಆದರೆ ಇನ್ನು ಮಾಡಿಕೊಡುತ್ತಿಲ್ಲ ಎಂದು ಹೇಳಿದಾಗ ಉಪಲೋಕಾಯುಕ್ತರು ಔರಾದ ತಹಸೀಲ್ದಾರರನ್ನು ಕರೆಯಿಸಿ ತಿದ್ದುಪಡೆ ಮಾಡಿ ಅದರ ವರದಿಯನ್ನು ನನಗೆ ಕಳುಹಿಸುವಂತೆ ಸೂಚಿಸಿದರು.

ಭಾಲ್ಕಿ ನಗರ ಪೊಲೀಸ್ ಠಾಣೆಯಲ್ಲಿ ಜಗದೇವಿ ಗಂಡ ಸೂರ್ಯಕಾಂತ ಇವರು ನನ್ನ ಗಂಡನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ ನನಗೂ ಕಪಾಳಕ್ಕೆ ಹೊಡೆದಿರುವ ಕುರಿತು ದೂರು ಸಲ್ಲಿಸಿದ್ದು ಅದಕ್ಕೆ ಪೊಲೀಸರು ಯಾವುದೇ ಸ್ಪಂದನೆ ನೀಡುತ್ತಿಲ್ಲ ಮತ್ತು ನಮಗೆ ಹೊಡೆದವರಿಂದ ಜೀವ ಬೇದರಿಕೆ ಇದೆ, ಪೊಲೀಸರು ನಮಗೆ ರಕ್ಷಣೆಕೊಡದೇ ಅವರಿಂದ ಹಣ ಪಡೆದು ನಮ್ಮ ದೂರಿಗೆ ಸ್ಪಂದನೇ ನೀಡದೆ ನಿರ್ಲಕ್ಷ ಮಾಡುತ್ತಿದ್ದಾರೆ ಹಾಗೂ ಪೊಲೀಸ್ ಮೇಲಧಿಕಾರಿಗಳನ್ನು ಭೇಟಿ ಮಾಡಲು ನಮಗೆ ಬಿಡುತ್ತಿಲ್ಲ ನಾವು ಬಡವರಾಗಿದ್ದು ನಮಗೆ ನ್ಯಾಯ ಕೊಡಿಸಿ ಎಂದು ಉಪಲೋಕಾಯುಕ್ತರಿಗೆ ದೂರು ಸಲ್ಲಿಸಿದಾಗ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಉಪಲೋಕಾಯುಕ್ತರು ಹೇಳಿದರು.

ಉಪಲೋಕಾಯುಕ್ತರು ಬೀದರ ಜಿಲ್ಲೆಯ ಸಾರ್ವಜನಿಕರ ಹಲವಾರು ಅಹವಾಲು ಕುಂದು ಕೊರತೆ ದೂರು ವಿಚಾರಣೆ ಹಾಗೂ ಪ್ರಕರಣಗಳ ವಿಲೇವಾರಿಗೊಳಿಸಿ ಸ್ಥಳದಲ್ಲಿಯೆ ಪರಿಹಾರ ನೀಡುವ ದೂರುಗಳಿಗೆ ಪರಿಹಾರ ನೀಡಿ ಕೆಲವೊಂದು ದೂರುಗಳ ಪರಿಹಾರಕ್ಕಾಗಿ ಕಾಲಾವಕಾಶವನ್ನು ನೀಡಿ ಅವುಗಳನ್ನು ಪರಿಹರಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಈ ಕಾರ್ಯಕ್ರಮದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಸದಸ್ಯ ಕಾರ್ಯದರ್ಶಿಗಳು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಿದ್ರಾಮಪ್ಪಾ ಕೆ. ಕನಕಟ್ಟೆ, ಜಿಲ್ಲಾಧಿಕಾರಿ ಗೋವಿಂದರೆಡ್ಡಿ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಿಲ್ಪಾ.ಎಂ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್.ಎಲ್., ಎ.ಆರ್. ಕರ್ನೂಲ್ ಪೊಲೀಸ್ ಅಧೀಕ್ಷಕರು ಲೋಕಾಯುಕ್ತ ಕಲಬುರಗಿ, ಕರ್ನಾಟಕ ಲೋಕಾಯುಕ್ತ ಬೆಂಗಳೂರಿನ ಉಪ ನಿಬಂಧಕರಾದ ಚನ್ನಕೇಶವರೆಡ್ಡಿ ಎಂ.ವಿ., ಕರ್ನಾಟಕ ಲೋಕಾಯುಕ್ತ ಬೆಂಗಳೂರಿನ ಸಹಾಯಕ ನಿಬಂಧಕರಾದ ಸಂದೀಪ ಎಸ್.ರೆಡ್ಡಿ., ಅಪರ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ., ಜಿಲ್ಲಾ ಮಟ್ಟದ ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ವಿವಿಧ ಅಹವಾಲುಗಳನ್ನು ತೆಗೆದುಕೊಂಡು ಬಂದ ಜಿಲ್ಲೆಯ ಸಾರ್ವಜನಿಕರು ಸೇರಿದಂತೆ ಇತರರು ಉಪಸ್ಥಿತರಿದ್ದರು.