ಅಧಿಕಾರಿಗಳು ಇಲಾಖಾ ಕಾರ್ಯಕ್ರಮ ಪ್ರಗತಿ ಸಾಧಿಸಿ

ರಾಯಚೂರು,ಆ.೧೭-
ನೀತಿ ಆಯೋಗದ ಮಾನದಂಡಗಳ ಪ್ರಕಾರ ಮಹತ್ವಾಕಾಂಕ್ಷೆ ಜಿಲ್ಲೆಗಳ ಪ್ರಗತಿಯಲ್ಲಿ ರಾಯಚೂರು ಜಿಲ್ಲೆಯು ಸಮಗ್ರ ಪ್ರಗತಿಯಲ್ಲಿ ಪ್ರಥಮ ರ್‍ಯಾಂಕ್ ಪಡೆದಿದ್ದು, ಶಿಕ್ಷಣ ಕ್ಷೇತ್ರದಲ್ಲಿಯೂ ಪ್ರಥಮ ರ್‍ಯಾಂಕ್ ಸಾಧಿಸಿದೆ ಉಳಿದ ವಲಯಗಳಲ್ಲಿ ಇನ್ನೂ ಹೆಚ್ಚಿನ ಪ್ರಗತಿ ಸಾಧಿಸುವತ್ತ ಆಯಾ ಇಲಾಕೆಯ ಅಧಿಕಾರಿಗಳು ಹೆಚ್ಚಿನ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕೆಂದು ಜಲಶಕ್ತಿ ಸಚಿವಾಲಯ, ನದಿ ಅಭಿವೃದ್ಧಿ ಮತ್ತು ಗಂಗಾ ಪುನರುಜ್ಜೀವನ ಇಲಾಖೆಯ ಜಂಟಿ ಕಾರ್ಯದರ್ಶಿಗಳಾದ ಸುಭೋದ್ ಯಾದವ್ ಅವರು ಅಧಿಕಾರಿಗಳು ಸೂಚಿಸಿದರು.
ನಗರದ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಆಡಳಿತ ಭವನದ ಸಭಾಂಗಣದಲ್ಲಿ ಮಹತ್ವಾಕಾಂಕ್ಷೆ ಜಿಲ್ಲೆ ಕಾರ್ಯಕ್ರಮದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ಕೆರೆಗಳ ನಿರ್ಮಾಣ ಮತ್ತು ಜಲಮೂಲಗಳ ಪುನರುಜ್ಜೀವನಗೊಳಿಸುವಿಕೆ ಕಾರ್ಯವನ್ನು ಅಧಿಖಾರಿಗಳು ಅತ್ಯಂತ ಕಾಳಜಿ ವಹಿಸಿ ಮಾಡಬೇಕು. ಮತ್ತು ಕೆರಗಳ ಅಭಿವೃದ್ಧಿಗೆ ಹೆಚ್ಚಿನ ಗಮನಹರಿಸಿ ಕಾರ್ಯನಿರ್ವಹಿಸಬೇಕು. ಜಿಲ್ಲೆಯಲ್ಲಿ ನರೇಗಾದಡಿ ನಿರ್ಮಾಣ ಮಾಡಲಾಗಿರುವ ಅಮೃತ ಸರೋವರಗಳನ್ನು ಅತ್ಯಂತ ಅಚ್ಚಕಟ್ಟಾಗಿ ಮತ್ತು ಜನರಿಗೆ ಅನುಕೂಲವಾಗುವ ರೀತಿಯಲ್ಲಿ ನಿರ್ಮಾಣ ಮಾಡಬೇಕು ಮತ್ತು ಕೆರೆಯ ದಡದಲ್ಲಿ ಧ್ವಜ ಸ್ಥಂಭವನ್ನು ಸ್ಥಾಪಿಸಿ ಧ್ವಜಾರೋಹಣಕ್ಕೆ ಅನುಕೂಲವಾಗುವ ರೀತಿಯಲ್ಲಿ ನಿರ್ಮಾಣ ಕಾರ್ಯ ಕೈಗೊಳ್ಳಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ಕೆರೆ ನಿರ್ಮಾಣ ಕಾಮಗಾರಿಗಳ ಪೂರ್ವ ಚಿತ್ರಣ, ಕಾಮಗಾರಿ ಮುಗಿದ ನಂತರದ ಚಿತ್ರಣ ಮತ್ತು ಕೆರೆಗೆ ನೀರು ತುಂಬಿದ ನಂತರ ಕಾಣುವ ಚಿತ್ರಣಗಳ ಭಾವಚಿತ್ರಗಳನ್ನು ಸಲ್ಲಿಸಬೇಕು. ಜೊತೆಗೆ ಕೆರೆಯ ಸುತ್ತಲೂ ಸ್ವಚ್ಚತೆಗೆ ಹೆಚ್ಚಿನ ಗಮನ ಹರಿಸಬೇಕು ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಆರೋಗ್ಯ ಮತ್ತು ಪೌಷ್ಟಿಕಾಂಶದ ವಿಷಯದಲ್ಲಿ ಜಿಲ್ಲೆಯೂ ನೀತಿ ಆಯೋಗ ಬಿಡುಗಡೆಗೊಳಿಸಿರುವ ಶ್ರೇಣಿಯಲ್ಲಿ ೫ನೇ ಸ್ಥಾನದಲ್ಲಿದ್ದು, ಪ್ರಗತಿಯಲ್ಲಿ ಆಗಿರುವ ನ್ಯೂನ್ಯತೆಗಳನ್ನು ಪರಿಶೀಲಿಸಿ ಆ ನ್ಯೂನ್ಯತೆಗಳನ್ನು ಸರಿಪಡಿಸಿ ಒಂದನೇ ರ್‍ಯಾಂಕ್ ಪಡೆಯುವತ್ತ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು.
ಆರ್ಥಿಕ ಅಭಿವೃದ್ಧಿ ಮತ್ತು ಕೌಶಲ್ಯಾಭಿವೃದ್ಧಿಯಲ್ಲಿ ಹೆಚ್ಚಿನ ಪ್ರಗತಿ ಸಾಧಿಸಬೇಕು, ಜನರಿಗೆ ಉತ್ತಮ ರೀತಿಯಲ್ಲಿ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಮತ್ತು ಕೃಷಿ ಇಲಾಖೆಯಿಂದ ಇನ್ನೂ ಹೆಚ್ಚಿನ ಪ್ರಗತಿಯನ್ನು ಸಾಧಿಸುವಂತೆ ತಿಳಿಸಿದರು.
ಶಿಕ್ಷಣ ಇಲಾಖೆಯಲ್ಲಿ ಜಿಲ್ಲೆಯು ಪ್ರಥಮ ರ್‍ಯಾಂಕ್ ಪಡೆದಿದ್ದು, ಇದೇ ರೀತಿಯಾಗಿ ಇಲಾಖೆಯ ಕಾರ್ಯಕ್ರಮಗಳನ್ನು ಹೆಚ್ಚಿನ ರೀತಿಯಲ್ಲಿ ಅನುಷ್ಟಾನಗೊಳಿಸಬೇಕು ಮತ್ತು ಸರ್ಕಾರದ ಯೋಜನೆಗಳನ್ನು ವಿದ್ಯಾರ್ಥಿಗಳಿಗೆ ಮುಟ್ಟಿಸುವಲ್ಲಿ ಶಾಲಾ ಶಿಕ್ಷಣ ಇಲಾಖೆಯ ಅಧಿಕಾರಿಗಳು ಹೆಚ್ಚಿನ ರೀತಿಯಲ್ಲಿ ಶ್ರಮಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ತುಕಾರಾಂ ಪಾಂಡ್ವೆ, ಪ್ರೊಭೇಷನರಿ ಐಎಎಸ್ ಅಧಿಕಾರಿ ಸಾಹಿತ್ಯ ಆಲದಕಟ್ಟಿ, ಅಪರ ಜಿಲ್ಲಾಧಿಕಾರಿ ಡಾ.ಕೆ.ಆರ್ ದುರುಗೇಶ, ವಿಜ್ಞಾನಿಗಳಾದ ಜ್ಯೋತಿ, ಜಯಪ್ರಕಾಶ, ಅನಿಶಾ, ಆಂಜನೇಯಲು, ಮಹತ್ವಾಕಾಂಕ್ಷೆ ಜಿಲ್ಲೆಯ ಜಿಲ್ಲಾ ಕಾರ್ಯಕ್ರಮಾಧಿಕಾರಿ ಮಹ್ಮದ್ ಯೂಸೂಫ್ ಅಲಿ ಸೇರಿದಂತೆ ವಿವಿಧ ಇಲಾಕೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.