ಅಧಿಕಾರಿಗಳಿಗೆ ತಮ್ಮ ತಮ್ಮ ಇಲಾಖೆಯ ಜವಾಬ್ದಾರಿತಿಳಿಯಬೇಕಾಗಿದೆ:ಜಿಲ್ಲಾಧಿಕಾರಿ ಗೋವಿಂದರೆಡ್ಡಿ

ಬೀದರ ಆ.5: ಕಾರ್ಖಾನೆಗಳಲ್ಲಿ ರಾಸಾಯನಿಕ ದುರಂತ ಸಂಭವಿಸಿದಾಗ ಸಂಬಂಧಿಸಿದ ಇಲಾಖೆಗಳು ತಮ್ಮ ಜವಾಬ್ದಾರಿ ಕುರಿತು ತಿಳಿಯಲಿ ಎಂಬ ಕಾರಣಕ್ಕಾಗಿ ಈ ಅಣಕು ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಹೇಳಿದರು.

ಅವರು ಗುರುವಾರ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಹಾಗೂ ಕಾರ್ಖಾನೆಗಳು-ಬಾಯಲರ್, ಕೈಗಾರಿಕಾ ಸುರಕ್ಷತೆ ಮತ್ತು ಸ್ವಾಸ್ಥ್ಯ ಇಲಾಖೆ ವತಿಯಿಂದ ಸಾಯಿ ಲೈಫ್ ಸೈನ್ಸ್ ಲಿಮಿಟೆಡ್ ಬೀದರನ ಫ್ಯಾಕ್ಟರಿಯಲ್ಲಿ ಹಮ್ಮಿಕೊಂಡಿದ್ದ ಅಣಕು ಪ್ರದರ್ಶನದಲ್ಲಿ ಭಾಗವಹಿಸಿ ಮಾತನಾಡಿದರು.

ಹುಮನಾಬಾದ ಘಟನೆ ಆದಾಗಿನಿಂದ ಈ ಅಣಕು ಪ್ರದರ್ಶನವನ್ನು ಮಾಡಲು ಹೇಳಿದ್ದು ಹಾಗಾಗಿ ಇದನ್ನು ಹಮ್ಮಿಕೊಳ್ಳಲಾಗಿದೆ ಇದರಿಂದ ಅಧಿಕಾರಿಗಳು ಒಂದು ಇಲಾಖೆಯಿಂದ ಇನ್ನೊಂದು ಇಲಾಖೆಗೆ ಸಂಪರ್ಕ ಮತ್ತು ಅವರ ಜವಾಬ್ದಾರಿ ತಿಳಿಯುತ್ತದೆ. ವಾಕಿ ಟಾಕಿಗಳ ಮುಖಾಂತರ ಹದಿನೆಂಟು ಇಲಾಖೆಗಳಿಗೂ ತುರ್ತಾಗಿ ಸಂಪರ್ಕ ಮಾಡಬೇಕು ಎಂದು ತಿಳಿಸುತ್ತದೆ, ಯಾವುದೇ ಕಾರ್ಖಾನೆಯಲ್ಲಿ ಗ್ಯಾಸ್ ಲೀಕೇಜ್ ಆದರೆ ಎಷ್ಟು ಆಗಿದೆ ಮತ್ತು ಎಷ್ಟು ಏರಿಯಾದವರೆಗೆ ಹರಡುತ್ತದೆ, ಎಷ್ಟು ಪ್ರಮಾಣದಲ್ಲಿ ಹರಡಲಿದೆ ಎಂಬ ಮಾಹಿತಿಯನ್ನು ಮೊದಲು ನಾವು ತಿಳಿದುಕೊಳ್ಳಬೇಕು, ಈ ಸಂದರ್ಭದಲ್ಲಿ ನಾವು ನಮ್ಮ ಸುರಕ್ಷಾ ಪರಿಕರಗಳನ್ನು ಉಪಯೋಗಿಸಿಕೊಂಡು ಹೋಗಬೇಕು ಎಂಬುವುದು ತಿಳಿಯುತ್ತದೆ ಮತ್ತು ಮುಂದೆ ಏನಾದರೂ ಆದಾಗ ಇಂತಹ ತರಬೇತಿಯಿಂದ ನಿರಂತರ ಕಲಿಕೆ ಇರುವುದರಿಂದ ನಾವು ಮುಂಜಾಗ್ರತೆಯಿಂದ ಇರುತ್ತೇವೆ. ಈ ಅಣಕು ಪ್ರದರ್ಶನದಲ್ಲಿ ಭಾಗವಹಿಸಿ ಎಲ್ಲರೂ ಉತ್ತಮ ಕಾರ್ಯನಿರ್ವಹಿಸಿದ್ದಕ್ಕೆ ತಮ್ಮಗೆಲ್ಲರಿಗೂ ಧನ್ಯವಾದಗಳು ಎಂದು ಹೇಳಿದರು.

ಸಾಯಿ ಲೈಫ್ ಸೈನ್ಸ್ ಲಿಮಿಟೆಡ್‍ನ ಸೈಟ್ ಹೆಡ್ ವಿನಾಯಕ ಅವರು ಮಾತನಾಡಿ ಈ ತರಹದ ಅಣಕು ಪ್ರದರ್ಶನದಿಂದ ನಮಗೆ ಆತ್ಮವಿಶ್ವಾಸ ತುಂಬಿದೆ ಮತ್ತು ಜಿಲ್ಲಾಡಳಿತ ಇಂತಹ ಒಂದು ಉತ್ತಮ ಕಾರ್ಯಕ್ರಮ ನಮ್ಮ ಕಾರ್ಖಾನೆಯಲ್ಲಿ ಹಮ್ಮಿಕೊಂಡಿರುವುದರಿಂದ ನಾವು ಇನ್ನು ಹೆಚ್ಚಿನ ರೀತಿಯಲ್ಲಿ ಕಲಿತಂತಾಗಿದೆ. ಕಳೆದ 20 ವರ್ಷಗಳಿಂದ ಈ ತರಹದ ಅಣಕು ಪ್ರದರ್ಶನ ಆಗಿರಲಿಲ್ಲ, ಇದು ಮೊದಲನೆಯದ್ದು ಮತ್ತು ನಮಗೆ ಇದರಿಂದ ಹೊಸದನ್ನು ಕಲಿತಂತಾಗಿದೆ ಎಂದು ಹೇಳಿದರು.

ಈ ಅಣಕು ಪ್ರದರ್ಶನದ ಇನ್ಸಿಡೆಂಟ್ ಕಮಾಂಡರ ಆಗಿ ಸಹಾಯಕ ಆಯುಕ್ತರಾದ ಮೊಹಮ್ಮದ ನಯೀಮ್ ಮೋಮಿನ್ ಅವರನ್ನು ನೇಮಿಸಲಾಗಿತ್ತು, ಅಣಕು ಪ್ರದರ್ಶನದ ಉಸ್ತುವಾರಿಯನ್ನು ಕಾರ್ಖಾನೆಗಳ ಕಲಬುರಗಿ ವಿಭಾಗದ ಹಿರಿಯ ಸಹಾಯಕ ನಿರ್ದೇಶಕರಾದ ಸುಕೇಶ ಅವರು ವಹಿಸಿದ್ದರು. ಎನ್.ಡಿ.ಆರ್.ಎಫ್. 20 ಜನರ ತಂಡದ ಅಸಿಸ್ಟೆಂಟ್ ಕಮಾಂಡರ ದಾಮೋದರಸಿಂಗ್ ವಹಿಸಿದ್ದರು.

ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡೆಕ್ಕಾ ಕಿಶೋರಬಾಬು, ಜಿಲ್ಲಾ ಕೈಗಾರಿಕಾ ಇಲಾಖೆಯ ಜಂಟಿ ನಿರ್ದೇಶಕರಾದ ಸುರೇಖಾ ಮುನ್ನೊಳ್ಳಿ, ಅಪರ ಜಿಲ್ಲಾಧಿಕಾರಿ ಶಿವುಕುಮಾರ ಶೀಲವಂತ, ಸಾಯಿ ಲೈಫ್ ಸೈನ್ಸ್ ಲಿಮಿಟೆಡನ್ ನಿರ್ದೇಶಕರಾದ ಎ.ಎಸ್.ರಾಜು ಮತ್ತು ಮುಖ್ಯ ಮಾಹಿತಿ ಅಧಿಕಾರಿ ಶ್ರೀಕೃಷ್ಣ ಸೇರಿದಂತೆ ಅಗ್ನಿಶಾಮಕ ದಳ, ಹೋಮಗಾರ್ಡ ಮತ್ತು ಸಂಬಂಧಿಸಿದ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.