ಬೆಂಗಳೂರು, ಜೂ.೧- ಸಂವಿಧಾನಬದ್ಧವಾಗಿ ಕಾರ್ಯನಿರ್ವಹಿಸದ ಅಧಿಕಾರಿಗಳ ವಿರುದ್ಧ ಚಾಟಿ ಬೀಸುವ ಎಚ್ಚರಿಕೆಯನ್ನು ಸಮಾಜ ಕಲ್ಯಾಣ ಸಚಿವ ಡಾ. ಹೆಚ್.ಸಿ. ಮಹದೇವಪ್ಪ ನೀಡಿದ್ದಾರೆ.ವಿಕಾಸಸೌಧದಲ್ಲಿಂದು ಸಮಾಜ ಕಲ್ಯಾಣ ಅಧಿಕಾರಿಗಳ ಸಭೆಯ ಸಂದರ್ಭದಲ್ಲಿ ಮಾತನಾಡಿದ ಅವರು, ನಾವೆಲ್ಲಾ ಸಂವಿಧಾನಬದ್ಧವಾಗಿ ಕೆಲಸ ಮಾಡುವ ಪ್ರತಿಜ್ಞೆ ಮಾಡಿದ್ದೇವೆ. ಅದರಂತೆ ಸಂವಿಧಾನಬದ್ಧವಾಗಿ ಎಲ್ಲರೂ ಕೆಲಸ ಮಾಡಬೇಕು. ಸಂವಿಧಾನಬದ್ಧವಾಗಿ ಕೆಲಸ ಮಾಡದವರ ವಿರುದ್ಧ ಚಾಟಿ ಬಿಸುತ್ತೇನೆ ಎಂದು ಖಡಕ್ಕಾಗಿ ಹೇಳಿದರು.ವಿದ್ಯಾರ್ಥಿ ವೇತನ:ಸಮಸ್ಯೆ ಪರಿಹಾರ ಪರಿಶಿಷ್ಟ ಜಾತಿ ವರ್ಗದ ವಿದ್ಯಾರ್ಥಿಗಳಿಗೆ ಶುಲ್ಕ ಪಾವತಿಸಿಲ್ಲ ಎಂಬ ಕಾರಣಕ್ಕೆ ಶೈಕ್ಷಣಿಕವಾಗಿ ಯಾವುದೇ ತೊಂದರೆಗಳಾಗಬಾರದು. ಈ ಬಗ್ಗೆ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದರು.
ವಿದ್ಯಾರ್ಥಿ ವೇತನಗಳನ್ನು ಸಕಾಲಕ್ಕೆ ಪಾವತಿಸುವಂತೆ ಸೂಚನೆ ನೀಡಿದ್ದೇನೆ. ವಿದ್ಯಾರ್ಥಿ ವೇತನ ಸಕಾಲಕ್ಕೆ ತಲುಪಬೇಕು. ಶುಲ್ಕ ಪಾವತಿಯಾಗಿಲ್ಲ ಎಂದು ಯಾವುದೇ ವಿದ್ಯಾರ್ಥಿಗಳೂ ತೊಂದರೆಯಾಗಬಾರದು. ಆ ಬಗ್ಗೆ ಎಚ್ಚರ ವಹಿಸುವಂತೆಯೂ ಸೂಚನೆ ನೀಡಿರುವುದಾಗಿ ಅವರು ಹೇಳಿದರು.