ಅಧಿಕಾರಿಗಳನ್ನ ಟ್ರಾನ್ಸ್ಫರ್ ಮಾಡೋದೇ ತಾಕತ್ತಾದರೆ, ಅಂತಹ ತಾಕತ್ತು ನನಗೆ ಬೇಡ

ಮೈಸೂರು, ಮೇ.28: ತಾಕತ್ತಿದ್ದರೇ ಜಿಲ್ಲಾಧಿಕಾರಿ ವರ್ಗಾವಣೆ ಮಾಡಿಸು ಎಂದು ಸವಾಲು ಹಾಕಿರುವ ಶಾಸಕ ಜಿ.ಟಿ ದೇವೇಗೌಡರಿಗೆ ಸಂಸದ ಪ್ರತಾಪ್ ಸಿಂಹ ತಿರುಗೇಟು ನೀಡಿದ್ದು ಅಧಿಕಾರಿಗಳನ್ನ ಟ್ರಾನ್ಸ್ಫರ್ ಮಾಡೋದೇ ತಾಕತ್ತಾದರೆ, ಅಂತಹ ತಾಕತ್ತು ನನಗೆ ಬೇಡ. ಒಬ್ಬ ಸಂಸದನಾಗಿ ನಾನು ನನ್ನ ಕೆಲಸದಲ್ಲಿ ತಾಕತ್ತು ತೋರಿಸಿದ್ದೇನೆ ಎಂದರು.
ಮೈಸೂರಿನಲ್ಲಿ ಇಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಂಸದರು ಮೈಸೂರಿಗೆ ನಾನು ಹೊರಗಿನವನು. ಆದರೂ ಮೊದಲ ಚುನಾವಣೆಯಲ್ಲಿ ಮೈಸೂರು- ಕೊಡಗಿನ ಜನ ಮೂವತ್ತು ಸಾವಿರ ಮತಗಳ ಅಂತರದಲ್ಲಿ ಗೆಲ್ಲಿಸಿದರು. ನನ್ನ ತಾಕತ್ತು ತೋರಿಸಿ ಒಳ್ಳೆಯ ಕೆಲಸ ಮಾಡಿದೆ. ಅದಕ್ಕಾಗಿ ಎರಡನೇ ಚುನಾವಣೆಯಲ್ಲಿ ಒಂದು ಲಕ್ಷದ ನಲವತ್ತು ಸಾವಿರ ಮತಗಳಿಂದ ಗೆಲ್ಲಿಸಿದರು. ಇದಕ್ಕಿಂತಲೂ ನಾನು ಯಾವ ತಾಕತ್ತು ತೋರಿಸಬೇಕು ಎಂದರು.
ಜಿಲ್ಲಾಧಿಕಾರಿಗಳನ್ನೋ ಅಥವಾ ಇನ್ಯಾವುದೋ ಅಧಿಕಾರಿಯನ್ನು ವರ್ಗಾವಣೆ ಮಾಡಿಸುವುದು ರಾಜಕಾರಣಿಗಳಿಗೆ ಕಾಮನ್. ನನ್ನ ದೃಷ್ಟಿಯಲ್ಲಿ ಅದು ಅತ್ಯಂತ ಸಣ್ಣ ಕೆಲಸ. ಅಂತಹ ಸಣ್ಣ ಕೆಲಸವನ್ನು ನಾನು ಮಾಡಲ್ಲ. ಸರ್ಕಾರ ಕೊಟ್ಟ ಅಧಿಕಾರಿಗಳ ಜೊತೆಗೆ ಕೆಲಸ ಮಾಡುತ್ತೇನೆ ಎಂದು ಹೇಳಿದರು.
ಸಾ.ರಾ ಮಹೇಶ್ ಅವರನ್ನು ಹೊಗಳಿದ್ದು ಜಿ.ಟಿ ದೇವೇಗೌಡರಿಗೆ ಇಷ್ಟವಾಗಿಲ್ಲ ಅನ್ಸುತ್ತೆ. ಹೀಗಾಗಿ ನನ್ನ ವಿರುದ್ಧ ಮಾತನಾಡಿದ್ದಾರೆ. ಜಿ.ಟಿ.ದೇವೇಗೌಡರು ನನಗೆ ತಂದೆ ಇದ್ದಂತೆ. ಅವರು ಹರೀಶ್ ಗೌಡರನ್ನು ಹೇಗೆ ನೋಡಿಕೊಂಡಿದ್ದಾರೋ ಹಾಗೇ ನನ್ನನ್ನ ನೋಡಿಕೊಂಡಿದ್ದಾರೆ. ರಾಜಕೀಯದಲ್ಲಿ ನನ್ನನ್ನು ಬೈಯುವ ಹಕ್ಕು ಜಿ.ಟಿ ದೇವೇಗೌಡರಿಗೆ ಇದೆ. ಅವರು ಬೈಯುವುದನ್ನ ನಾನು ಪ್ರೀತಿಯಿಂದಲೇ ಸ್ವೀಕರಿಸುತ್ತೇನೆ ಎಂದು ಹೇಳಿದರು. ನಾನು ಹಳ್ಳಿಗಳಿಗೆ ಭೇಟಿ ಕೊಟ್ಟಿದ್ದಾಗ ಶಾಸಕರ ಕಾರ್ಯವೈಖರಿ ನೋಡಿದ್ದೇನೆ. ಕೆ.ಆರ್ ನಗರಕ್ಕೆ ಭೇಟಿ ಕೊಟ್ಟ ಸಂದರ್ಭದಲ್ಲಿ ಸಾರಾ ಮಹೇಶ್ ಜಿಲ್ಲೆಗೆ ಮೇಲ್ಪಂಕ್ತಿಯಾಗುವಂತೆ ಕೆಲಸ ಮಾಡಿದ್ದಾರೆ.