‘ಅಧಿಕಾರದ ದುರುಪಯೋಗ ಪಡಿಸಿ ಬಿಜೆಪಿಗೆ ಗೆಲುವು’

ಸುರತ್ಕಲ್, ನ.೧೮- ಬಿಜೆಪಿ ಸರಕಾರದಿಂದ ರಾಜ್ಯದ ಜನತೆ ಬೇಸತ್ತಿದ್ದಾರೆ. ಕೊರೋನ ನಿರ್ವಹಣೆಯಲ್ಲಿ ಸರಕಾರ ವಿಫಲವಾಗಿದೆ. ಯಾವುದೇ ಅಭಿವೃದ್ಧಿ ಕಾರ್ಯಗಳಾಗದೆ ರಾಜ್ಯಕ್ಕೆ ಆರ್ಥಿಕವಾಗಿ ಹಿನ್ನಡೆಯಾಗಿದೆ. ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡು ಮನೆ ಮನೆಗೆ ಹಣವನ್ನು ಹಂಚಿ ಉಪಚುನಾವಣೆಯನ್ನು ಗೆದ್ದುಕೊಂಡಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಆರೋಪಿಸಿದ್ದಾರೆ.
ಸುರತ್ಕಲ್‌ನಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಇತ್ತೀಚೆಗೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಹಾಗೂ ನಾಯಕರು ಶ್ರಮವಹಿಸಿ ಕೆಲಸ ಮಾಡಿದ್ದಾರೆ. ಚುನಾವಣಾ ನಿಯಮವನ್ನು ಉಲ್ಲಂಘಿಸಿ ಮುಖ್ಯಮಂತ್ರಿ ಯಡಿಯೂರಪ್ಪ ಆಶ್ವಾಸನೆಯನ್ನು ನೀಡಿದ್ದರು. ಬಿಜೆಪಿಯಿಂದ ಪೊಲೀಸ್ ಇಲಾಖೆ ಸಹಿತ ಆಡಳಿತ ಯಂತ್ರದ ದುರುಪಯೋಗ ಮಾಡಲಾಗಿದೆ. ಹಾಗಾಗಿ ಉಪ ಚುನಾವಣೆ ಫಲಿತಾಂಶ ಮುಂದಿನ ವಿಧಾನಸಭಾ ಚುನಾವಣೆಯ ಮೇಲೆ ಪರಿಣಾಮ ಬೀರದು ಎಂದರು. ಗ್ರಾಪಂ ಚುನಾವಣೆಗೆ ಕಾಂಗ್ರೆಸ್ ತಯಾರಿ ನಡೆಸಿದ್ದು, ಬೆಂಬಲಿತ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ತಳಮಟ್ಟದಲ್ಲಿ ಕಾಂಗ್ರೆಸ್ ಮತ್ತೆ ತನ್ನ ಪಾರಮ್ಯವನ್ನು ಸಾಧಿಸಲಿದೆ. ಸ್ಥಳೀಯ ಸಮಸ್ಯೆಗಳು, ಸರಕಾರದ ವೈಫಲ್ಯತೆಗಳನ್ನು ಮತದಾರರಿಗೆ ತಿಳಿಸುವ ಮೂಲಕ ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರು ಗೆಲುವಿಗೆ ಶ್ರಮಿಸಲಿದ್ದಾರೆ ಎಂದು ಹೇಳಿದರು.
ಈ ಸಂದರ್ಭ ಮಾಜಿ ಸಚಿವರಾದ ವಿನಯ್ ಕುಮಾರ್ ಸೊರಕೆ, ಯು.ಟಿ.ಖಾದರ್, ಮಾಜಿ ಶಾಸಕರಾದ ಮೊಯ್ದಿನ್ ಬಾವ, ಐವನ್ ಡಿಸೋಜ, ಕೆಪಿಸಿಸಿ ಸದಸ್ಯ ಪಿ.ವಿ. ಮೋಹನ್, ಮಮ್ತಾಝ್ ಆಲಿ, ಸೌರಭ್ ಬಳ್ಳಾಲ್, ತೇಜಸ್ವಿ ಕುಮಾರ್, ತೌಫೀಕ್, ಮಲೀಕ್, ಫೈಝಲ್, ಕಲೀಲ್, ಸಲೀಂ, ಹಂಝಾ, ಮೆಹಸೂಫ್ ಮತ್ತಿತರರು ಉಪಸ್ಥಿತರಿದ್ದರು.