ಅಧಿಕಾರಕ್ಕೇರಿದ ಕೆಲವೇ ಗಂಟೆಯಲ್ಲಿ ಪ್ರಧಾನಿ ಹುದ್ದೆಗೆ ರಾಜೀನಾಮೆ!

ಸ್ಟಾಕ್‌ಹೋಂ, ನ.೨೫- ಕೇವಲ ಒಂದು ಮತದ ಅಂತರದಲ್ಲಿ ಸ್ವೀಡನ್‌ನ ಪ್ರಪ್ರಥಮ ಮಹಿಳಾ ಪ್ರಧಾನಿಯಾಗಿ ನೇಮಕಗೊಂಡ ೧೧ ಗಂಟೆಗಳ ಅಂತರದಲ್ಲೇ ನಡೆದ ಅಚ್ಚರಿಯ ಬೆಳವಣಿಗೆಯಲ್ಲಿ ಸೋಷಿಯಲ್ ಡೆಮಾಕ್ರೆಟ್ ಪಕ್ಷದ ನಾಯಕಿ ಮ್ಯಾಗ್ದಲಿನಾ ಆ?ಯಂಡರ್ಸನ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ತಮ್ಮ ಸಮಿಶ್ರ ಸರ್ಕಾರದ ಅಂಗಪಕ್ಷ ಗ್ರೀನ್ಸ್ ಪಾರ್ಟಿ ಸರ್ಕಾರಕ್ಕೆ ನೀಡಿದ ಬೆಂಬಲವನ್ನು ಹಿಂಪಡೆದ ಹಿನ್ನೆಲೆಯಲ್ಲಿ ಮ್ಯಾಗ್ದಲಿನಾ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.
ಪ್ರಧಾನಿಯಾಗಿ ನೇಮಕಗೊಂಡ ಬಳಿಕ ಮ್ಯಾಗ್ದಲಿನಾ ಅವರು ಬಜೆಟ್ ಪ್ರಸ್ತಾವನೆ ಮಂಡಿಸಿದ್ದರು. ಆದರೆ ಈ ಪ್ರಸ್ತಾವನೆಯನ್ನು ವಿರೋಧ ಪಕ್ಷ ಸ್ವೀಡನ್ ಡೆಮಾಕ್ರಾಟ್ಸ್ ನಿರಾಕರಿಸಿತ್ತು. ವಿರೋಧ ಪಕ್ಷದ ಬಜೆಟ್ ಪ್ರಸ್ತಾವನೆ ಪರ ೧೫೪-೧೪೩ ಅಂತರದ ಮತ ಚಲಾವಣೆಯಾಗಿತ್ತು. ಆದರೆ ರಾಜೀನಾಮೆಯ ಹೊರತಾಗಿಯೂ ಮುಂದೆ ಅಧಿಕಾರಕ್ಕೇರುವ ಬಗ್ಗೆ ಮ್ಯಾಗ್ದಲಿನಾ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇನ್ನು ಬುಧವಾರ ಮ್ಯಾಗ್ದಲಿನಾ ಅವರು ದೇಶದ ಪ್ರಥಮ ಮಹಿಳಾ ಪ್ರಧಾನಿಯಾಗಿ ನೇಮಕಗೊಂಡಿದ್ದರು. ಮ್ಯಾಗ್ದಲಿನಾ ಪರ ಸಂಸತ್ತಿನ ೧೧೭ ಸದಸ್ಯರು ಮತ ಹಾಕಿದರೆ, ೧೭೪ ಸದಸ್ಯರು ಅವರ ವಿರುದ್ಧ ಮತ ಚಲಾಯಿಸಿದರು. ೫೭ ಸದಸ್ಯರು ಮತದಾನದಿಂದ ದೂರವುಳಿದಿದ್ದು ಓರ್ವ ಸದಸ್ಯ ಗೈರಾಗಿದ್ದರು. ಸ್ವೀಡನ್‌ನ ಕಾನೂನಿನ ಪ್ರಕಾರ, ಪ್ರಧಾನಿ ಹುದ್ದೆಯ ಅಭ್ಯರ್ಥಿಗೆ ಸಂಸತ್ತಿನಲ್ಲಿ ಬಹುಮತದ ಬೆಂಬಲದ ಅಗತ್ಯವಿಲ್ಲ. ಆದರೆ ಅವರ ವಿರುದ್ಧ ೧೭೫ ಮತ (ಒಟ್ಟು ಸಂಸತ್ ಸದಸ್ಯರ ಸಂಖ್ಯೆ ೩೫೦, ಅದರಲ್ಲಿ ೫೦%) ಚಲಾವಣೆಯಾಗಬಾರದು. ಹೀಗೆ ೧ ಮತದ ಅಂತರದಿಂದ ಮ್ಯಾಗ್ದಲಿನಾ ಗೆಲುವು ಸಾಧಿಸಿದರು.