ಅಧಿಕಮಾಸ ಪ್ರಯುಕ್ತ ಮನೆಮನೆಯಲ್ಲಿ ಪಾರಾಯಣ, ಭಜನೆ

ಕಲಬುರಗಿ,ಆ 7: ಅಧಿಕಮಾಸದಲ್ಲಿ ನಾವು ಮಾಡುವ ಪುಣ್ಯ ಕಾರ್ಯಕ್ಕೆ ಅಧಿಕ ಫಲ ಸಿಗುತ್ತದೆ ಎಂಬ ನಂಬಿಕೆ ಸನಾತನ ಕಾಲದಿಂದಲೂ ನಡೆದುಕೊಂಡು ಬಂದಿದೆ. ಹೀಗಾಗಿ ಈ ಮಾಸದಲ್ಲಿ ಧಾರ್ಮಿಕ ಕಾರ್ಯಗಳು ಹೆಚ್ಚಾಗಿ ನಡೆಯುತ್ತವೆ.
ನಗರದಲ್ಲೂ ಕೂಡ ಸುಮಾರು 28ಕ್ಕೂ ಹೆಚ್ಚು ಪಾರಾಯಣ ಸಂಘಗಳು, ಮತ್ತು 35ಕ್ಕೂ ಹೆಚ್ಚು ಮಹಿಳಾ ಭಜನಾ ಮಂಡಳಿಗಳು ತಮ್ಮ ತಮ್ಮ ಬಡಾವಣೆಯಲ್ಲಿ ಪ್ರತಿ ದಿನ ಒಬ್ಬೊಬ್ಬರ ಮನೆಯಲ್ಲಿ ,ಮತ್ತು ದೇವಸ್ಥಾನಗಳಲ್ಲಿ ಪಾರಾಯಣ ಹಾಗೂ ಭಜನೆ ಕಾರ್ಯಕ್ರಮ ಆಯೋಜಿಸುವ ಮೂಲಕ ಜ್ಞಾನ ಯಜ್ಞದಲ್ಲಿ ಭಾಗಿಯಾಗುತ್ತಿದ್ದಾರೆ. ಒಂದೊಂದು ಪಾರಾಯಣ ಸಂಘದಲ್ಲಿ ಸುಮಾರು 30ಕ್ಕೂ ಹೆಚ್ಚು ಜನ ಸದಸ್ಯರಿರುತ್ತಾರೆ. ಅಷ್ಟು ಜನ ಸೇರಿ ಪ್ರತಿ ದಿನ ವಿಷ್ಣು ಸಹಸ್ರನಾಮ, ನಾರಾಯಣ ವರ್ಮ,ಭಗವದ್ಗೀತೆ, ಶ್ರೀ ಲಕ್ಷ್ಮೀಸ್ತೋತ್ರ, ಜಯತೀರ್ಥರ ಹಾಗೂ ರಾಯರ ಅಷ್ಟೋತ್ತರ ಹೀಗೆ ವಿವಿಧ ಸ್ತೋತ್ತಗಳನ್ನು ಪಠಣ ಮಾಡಲಾಗುತ್ತದೆ.ಮಹಿಳಾ ಭಜನಾ ಮಂಡಳಿಯಲ್ಲೂ ಸುಮಾರು 30ಕ್ಕೂ ಹೆಚ್ಚು ಜನ ಸದಸ್ಯರಿರುತ್ತಾರೆ. ಅವರು ಪ್ರತಿ ದಿನ ಒಬ್ಬೊಬ್ಬರ ಮನೆಯಲ್ಲಿ ಲಕ್ಷ್ಮಿ ಶೋಭಾನ, 33 ದಾಸರ ಹಾಡುಗಳನ್ನು ಹಾಡುವ ಮೂಲಕ ಭಗವಂತನ ಸ್ಮರಣೆ ಮಾಡುತ್ತಿದ್ದಾರೆ. ಪಾರಾಯಣದಿಂದ ಮಕ್ಕಳಲ್ಲಿ ಧಾರ್ಮಿಕ ಪ್ರಜ್ಞೆ ಮೂಡುತ್ತಿದೆ.ಅಧಿಕಮಾಸದಲ್ಲಿ ಪ್ರತಿ ಮನೆಯಲ್ಲೂ ಧಾರ್ಮಿಕ ವಾತಾವರಣ ನಿರ್ಮಾಣ ವಾಗಲಿ ಎಂಬ ಕಾರಣಕ್ಕೆ ಪಾರಾಯಣ ಸಂಘಗಳು ಮತ್ತು ಭಜನಾ ಮಂಡಳಿಗಳಿಂದ ಪಾರಾಯಣ, ಭಜನೆ ಹಮ್ಮಿಕೊಳ್ಳಲಾಗುತ್ತಿದೆ ಎನ್ನುತ್ತಾರೆ ಪಾರಾಯಣ ಸಂಘಗಳ ಸಂಚಾಲಕರಾದ ರವಿ ಲಾತೂರಕರ ಅವರು.
ಶಂಕರ ಅಷ್ಟೋತ್ತರ ಪಾರಾಯಣ ಸಂಘವು ಕೂಡ ನಗರದ ವಿವಿಧ ಮನೆಮನೆಗಳಲ್ಲಿ ಶಂಕರ ತತ್ವ ಪ್ರಚಾರ ಕಾರ್ಯ ಮಾಡುತ್ತಿದೆ.ಹಂಸ ನಾಮಕ ಮತ್ತು ಲಕ್ಷ್ಮೀನಾರಾಯಣ್ ಪಾರಾಯಣ ಸಂಘ,ಶ್ರೀ ಸತ್ಯ ಪ್ರಮೋದ್ ಕೃಪಾ ಪೆÇೀಷಿತ ಪಾರಾಯಣ ಸಂಘ, ಶ್ರೀ ಸತ್ಯಾನಂದ ಪಾರಾಯಣ ಸಂಘ,ಶ್ರೀ ವಿಷ್ಣು ಸಹಸ್ರ ನಾಮ ಪಾರಾಯಣ ಸಂಘ,ಶ್ರೀ ವಿಜಯ ವಿಠ್ಠಲ ಪಾರಾಯಣ ಸಂಘ,ಶ್ರೀ ಪೂರ್ಣಪ್ರಜ್ಞ ಪಾರಾಯಣ ಸಂಘದ,ಶ್ರೀ ಪ್ರಶಾಂತ್ ಹನುಮಾನ ಪಾರಾಯಣ ಸಂಘ,ಶ್ರೀ ಧ್ಯಾನಾಂಜನೇಯ ಪಾರಾಯಣ ಸಂಘಗಳು ಪ್ರತಿನಿತ್ಯ ಪಾರಾಯಣ ಮಾಡುತ್ತಿವೆ.