ಅದ್ವೈತದರ್ಶನದ ಅನುಪಮ ಕಾವ್ಯ ಅನುಭವಾಮೃತ :ಸಂತೋಷ ಬಂಡೆ

ವಿಜಯಪುರ, ಸೆ.6-ಹದಿನೇಳನೆಯ ಶತಮಾನದ ಕೊನೆಯ ಭಾಗದಲ್ಲಿದ್ದ ಮಹಾಲಿಂಗರಂಗ ಕವಿಯ “ಅನುಭವಾಮೃತ”ವು ಕನ್ನಡದಲ್ಲಿ ಬಂದ ಅದ್ವೈತದರ್ಶನದ ಅನುಪಮ ಕಾವ್ಯವಾಗಿದೆ. ಅದ್ವೈತ ವೇದಾಂತ ದರ್ಶನವನ್ನು ಕಾವ್ಯದ ಮೂಲಕ ಸಾಕಾರಗೊಳಿಸುವ “ಅನುಭವಾಮೃತ”ವು ಸಾಧಕರಿಗೂ ಮುಮುಕ್ಷುಗಳಿಗೂ ಮಾರ್ಗದರ್ಶಿಯಾಗಿದೆ ಎಂದು ಶಿಕ್ಷಕ ಸಾಹಿತಿ ಸಂತೋಷ ಬಂಡೆ ಹೇಳಿದರು.

      ಅವರು ರವಿವಾರ ಸಂಜೆ ನಗರದ ಜ್ಞಾನ ಯೋಗಾಶ್ರಮದಲ್ಲಿ ಜರುಗಿದ ಮಹಾಲಿಂಗರಂಗರ ಅನುಭವಾಮೃತ ಕೃತಿ ಅವಲೋಕನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
    ಅನುಭವಾಮೃತವು ವಿದ್ವಜ್ಜನರ ಮನ್ನಣೆಯ ಜೊತೆಗೆ ಸಾಮಾನ್ಯರಿಗೂ ಅದ್ವೈತ ದರ್ಶನವನ್ನು ನೀಡುವ ಕಾವ್ಯಕೃತಿಯಾಗಿದೆ. ಅದ್ವೈತ ದರ್ಶನವು ಕನ್ನಡ ಸಾಹಿತ್ಯ, ಸಂಸ್ಕøತಿ, ಧಾರ್ಮಿಕ ಅನುಷ್ಠಾನ ಆಚರಣೆಯ ಮಹೋನ್ನತಿಯಾಗಿ ಕಂಗೊಳಿಸುತ್ತಿದೆ ಎಂದು ಹೇಳಿದರು.
    ಸಾನಿಧ್ಯ ವಹಿಸಿದ ಆಶ್ರಮದ ಅಧ್ಯಕ್ಷರಾದ ಬಸವಲಿಂಗ ಸ್ವಾಮೀಜಿ ಮಾತನಾಡಿ, ಭಾರತೀಯ ಸಂಪ್ರದಾಯದಂತೆ ಸಂವಾದರೂಪದಲ್ಲಿ "ಅನುಭವಾಮೃತ" ಕಾವ್ಯ ಅದ್ವೈತದರ್ಶನದ ನಿರೂಪಣೆಗೆ ತೊಡಗಿ, ಜನಸಾಮಾನ್ಯರಿಗೆ ಸರಳವಾಗಿದೆ ಎಂದು ಹೇಳಿದರು.
      ನಿವೃತ್ತ ಶಿಕ್ಷಕರಾದ ಎನ್ ಎಂ ಅಂಗಡಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಮಹಾಲಿಂಗರಂಗ "ಅನುಭವಾಮೃತ"ದುದ್ದಕ್ಕೂ ದೃಷ್ಟಾಂತಪ್ರಾಚರ್ಯದ ಮೂಲಕ ತಿಳಿಯಾದ ಕನ್ನಡದಲ್ಲಿ ವೇದಾಂತದ ಪರಮಸತ್ಯವನ್ನೂ ಮಹೋನ್ನತ ವಿಚಾರಗಳನ್ನೂ ವಿದಿತಪಡಿಸಲಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಅನೇಕರು ಉಪಸ್ಥಿತರಿದ್ದರು.