ಅದ್ಧೂರಿ ಹಸಿ ಕರಗ ಉತ್ಸವ

ಬೆಂಗಳೂರು, ಏ.೪-ಇತಿಹಾಸ ಪ್ರಸಿದ್ಧ ಬೆಂಗಳೂರು ಕರಗ ಮಹೋತ್ಸವದ ಆಚರಣೆಯಲ್ಲಿ ಮುಖ್ಯವಾದ ‘ಹಸಿ ಕರಗ’ ಉತ್ಸವವು ಇಂದು ತಡರಾತ್ರಿಯಿಂದ ನಾಳೆ ಬೆಳಗ್ಗೆವರೆಗೆ ವಿಜೃಂಭಣೆಯಿಂದ ನೆರವೇರಲಿದೆ.ಈ ವೇಳೆ ಸಾವಿರಾರು ಭಕ್ತರು ಬೆಳಗ್ಗೆ ತಾಯಿ ದ್ರೌಪದಮ್ಮನ ದರ್ಶನ ಪಡೆಯಲಿದ್ದಾರೆ ಇಂದು ರಾತ್ರಿ ಧರ್ಮರಾಯ ಸ್ವಾಮಿ ದೇವಸ್ಥಾನ ಆವರಣದಲ್ಲಿ ಪೂಜಾರಿ ಮನೆತನದವರು ದೊಡ್ಡ ತೇರಿನ ಕಳಸಕ್ಕೆ ವಿಶೇಷ ಪೂಜೆ ಮಾಡಲಿದ್ದು, ನಂತರ ದೇಗುಲದ ದೇವರ ಮೂರ್ತಿಗಳಿಗೆ ಅಲಂಕಾರ, ಸಾಂಪ್ರದಾಯಿಕ ಪದ್ಧತಿಯಂತೆ ಪೂಜೆ (ಗಾವನ್) ನೆರವೇರಿಸಿ ಕಬ್ಬನ್ ಉದ್ಯಾನದಲ್ಲಿನ ಸಂಪಂಗಿ ಅಂಗಳ ಶಕ್ತಿ ಪೀಠಕ್ಕೆ ತೆರಳಲಿದ್ದಾರೆ.
ಸಂಪಂಗಿ ಅಂಗಳ ಶಕ್ತಿ ಪೀಠದಿಂದ ತಡರಾತ್ರಿ ೩ಗಂಟೆಗೆ ದ್ರೌಪದಮ್ಮನ ಮೂರ್ತಿ ಕಂಕುಳಲ್ಲಿ ಇಟ್ಟುಕೊಂಡ ಮೆರವಣಿಗೆಯು ನೇರವಾಗಿ ಸಾಗಿ ಬಿಬಿಎಂಪಿ ಕೇಂದ್ರ ಕಚೇರಿ ಆವರಣದಲ್ಲಿರುವ ಆದಿಶಕ್ತಿ ದೇವಸ್ಥಾನ ತಲುಪಲಿದೆ. ಅಲ್ಲಿಂದ ಪ್ರಮುಖ ರಸ್ತೆಗಳ ಮೂಲಕ ಸಂಚರಿಸಿ ಬೆಳಗ್ಗೆ ೬ಗಂಟೆ ವೇಳೆಗೆ ಧರ್ಮರಾಸ್ವಾಮಿ ದೇವಸ್ಥಾನ ಮೂರ್ತಿ ತರಲಾಗುವುದು.ಆಗ ದ್ರೌಪದಮ್ಮ ದೇವಸ್ಥಾನದ ಒಳಾಂಗಣ (ಗರ್ಭಗುಡಿ) ಮತ್ತು ಹೊರಾಂಗಣವನ್ನು ಒಂದು ಗಂಟೆಗೂ ಅಧಿಕ ಕಾಲ ಅಂದರೆ ಸುಮಾರು ೧೦-೧೨ ಸುತ್ತು ಸುತ್ತುವರಿಯಲಿದೆ. ಈ ವೇಳೆ ಸಾವಿರಾರು ಭಕ್ತರು ತಾಯಿ ದರ್ಶನ ಪಡೆದರು, ಪ್ರಾರ್ಥನೆ ಸಲ್ಲಿಸಿದ್ದಾರೆ. ಅಲ್ಲಿಗೆ ’ಹಸೀ ಕರಗ’ ಆಚರಣೆ ಸಂಪನ್ನಗೊಳ್ಳಲಿದೆ.ಈ ಬಾರಿ ಅದ್ದೂರಿಯಾಗಿ ಕರಗ ಉತ್ಸವ ನಡೆಸಲು ಉತ್ಸವ ಸಮಿತಿ ತೀರ್ಮಾನಿಸಿದ್ದು, ಅದರಂತೆ, ಏ.೬ರ ಚೈತ್ರ ಮಾಸದ ಪೂರ್ಣಿಮೆ ಅಂದು ದ್ರೌಪದಿ ದೇವಿಯ ಹೂವಿನ ಕರಗ ನಗರದ ಹಲವಾರು ಪ್ರದೇಶಗಳಲ್ಲಿ ಸಂಚರಿಸಲಿದೆ.
ಕರಗ ಉತ್ಸವ ಪ್ರತಿಬಾರಿಯಂತೆ ಈ ಬಾರಿಯು ಪಕ್ಷಾತೀತವಾಗಿ ನಡೆಯಲಿದ್ದು, ಮಸ್ತಾನ್ ಸಾಬ್ ದರ್ಗಾಕ್ಕೂ ಕರಗ ಹೋಗಲಿದೆ. ಮೊದಲಿನಿಂದಲು ಇರುವ ಸಂಪ್ರದಾಯದಂತೆ ಕರಗ ನಡೆಯಲಿದೆ ಯಾವುದೇ ಸಂಪ್ರದಾಯಗಳನ್ನು ಕಡಿತಗೊಳಿಸಲಾಗುವುದಿಲ್ಲ ಶಾಂತಿ ಸೌಹಾರ್ದದಿಂದ ಕರಗ ಉತ್ಸವ ನಡೆಯಲಿದೆ.
ಸುಮಾರು ೮೦೦ ವರ್ಷಗಳ ಇತಿಹಾಸ ಇರೋ ಕರಗ ಉತ್ಸವ ನಾಡಪ್ರಭು ಕೆಂಪೇಗೌರ ಕಾಲದಿಂದಲು ಅಚರಣೆ ಮಾಡಿಕೊಂಡು ಬರಲಾಗುತ್ತಿದೆ. ಕಳೆದ ಎರಡು ವರ್ಷಗಳಿಂದ ಕೊರೊನಾ ಸೋಂಕಿನಿಂದಾಗಿ ಕರಗ ಉತ್ಸವವನ್ನು ಸಾಧಾರಣವಾಗಿ ಆಚರಿಸಲಾಗಿತ್ತು. ಹೀಗಾಗಿ ಈ ಬಾರಿ ಅದ್ದೂರಿ ಕರಗ ಮಹೋತ್ಸವ ಆಚರಿಸಲಾಗುತ್ತಿದೆ.

ಇತಿಹಾಸ ಪ್ರಸಿದ್ಧ ಬೆಂಗಳೂರು ಕರಗ ಹಿನ್ನೆಲೆ ನಗರದ ಶ್ರೀ ಧರ್ಮರಾಯಸ್ವಾಮಿ ದೇವಸ್ಥಾನದ ಮುಂಭಾಗ ಹೂವಿನಿಂದ ಕೂಡಿದ್ದ ಕರಗ ಆರತಿಯನ್ನು ಮಹಿಳೆಯರು ಹೊತ್ತು ತಂದು ಪೂಜೆ ನೆರವೇರಿಸಿದರು.

ಕರಗ ವೇಳಾ ಪಟ್ಟಿ..!
ಏ.೪ರಂದು ಹಸೀ ಕರಗ (ಸಂಪಂಗಿ ಕೆರೆ ಅಂಗಳದಲ್ಲಿ)
ಏ.೫ರಂದು ಪೊಂಗಲು ಸೇವೆ
ಏ.೬ರಂದು ಕರಗ ಶಕ್ತ್ಯುತ್ಸವ ಧರ್ಮರಾಯಸ್ವಾಮಿ ಮಹಾರಥೋತ್ಸವ
ಏ.೭ರಂದು ದೇವಸ್ಥಾನದಲ್ಲಿ ಗಾವು ಶಾಂತಿ
ಏ.೮ರಂದು ವಸಂತೋತ್ಸವ, ಧ್ವಜಾರೋಹಣ