ಅದ್ಧೂರಿ ಕನಕ ಜಯಂತಿ ಆಚರಣೆ

ಗೌರಿಬಿದನೂರು.ಡಿ. ೭:ತಾಲ್ಲೂಕಿನ ಚಂದನದೂರು ಗ್ರಾಮದಲ್ಲಿ ಭಾನುವಾರ ಕುರುಬ ಸಮುದಾಯದ ವತಿಯಿಂದ ಕನಕ ಜಯಂತಿಯನ್ನು ಅದ್ದೂರಿಯಾಗಿ ಆಚರಣೆ ಮಾಡಿದರು.
ಮಹಿಳೆಯರು ಪೂರ್ಣಕುಂಭ ಕಳಸಗಳೊಂದಿಗೆ ಗಣ್ಯರಿಗೆ ಸ್ವಾಗತ ಕೋರುವ ಜತೆಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಾಗಿದರು. ಬಳಿಕ ಕನಕದಾಸರ ಭಾವಚಿತ್ರಕ್ಕೆ ಶ್ರದ್ದಾ ಭಕ್ತಿಯಿಂದ ಪೂಜೆ ಸಲ್ಲಿಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಮುಖಂಡರಾದ ಡಾ.ಕೆ.ಕೆಂಪರಾಜು ಮಾತನಾಡಿ, ಕನಕದಾಸರು ಸಮಾಜದ ಒಳಿತಿಗಾಗಿ ೧೨ ನೇ ಶತಮಾನದಲ್ಲೇ ಕೀರ್ತನೆಗಳ ಮೂಲಕ ಸಂದೇಶವನ್ನು ಸಾರಿದ್ದಾರೆ. ಅವರ ತತ್ವ ಮತ್ತು ಸಿದ್ದಾಂತಗಳನ್ನು ಪರಿಪಾಲಿಸುವ ಜತೆಗೆ ಜಾತಿಬೇದವೆಂಬ ಮೌಢ್ಯತೆಯಿಂದ ಜನತೆ ಹೊರಬರಬೇಕಾಗಿದೆ. ಎಲ್ಲರಲ್ಲೂ ಸೋದರ ಭಾವನೆ ಮೂಡಿ ಸಾಮರಸ್ಯದಿಂದ ಬದುಕು ಸಾಗಿಸುವಂತಾಗಬೇಕು.
ಇಂದಿನ ಯುವ ಜನತೆ ಸನ್ಮಾರ್ಗದಲ್ಲಿ ನಡೆಯುವ ಮೂಲಕ ಶ್ರದ್ದಾ ಭಕ್ತಿಪೂರ್ವಕವಾಗಿ ಕನಕದಾಸರಂತಹ ಶ್ರೇಷ್ಠ ದಾಸರ ಆದರ್ಶ ಗುಣಗಳನ್ನು ಪಾಲಿಸುವ ಮೂಲಕ ಸಮಾಜದಲ್ಲಿ ಸತ್ಪ್ರಜೆಗಳಾಗಿ ಬಾಳಬೇಕಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮುಖಂಡರಾದ ವೇದಲವೇಣಿ ರಾಮು, ಡಿ.ಪಾಳ್ಯ ರಂಗನಾಥಗೌಡ, ತಾಲ್ಲೂಕು ಕುರುಬರ ಸಂಘದ ಕಾರ್ಯದರ್ಶಿ ರಾಮಚಂದ್ರಪ್ಪ , ಚಂದನನೂರು ರಾಮಕೃಷ್ಣಪ್ಪ, ನಂಜುಂಡಪ್ಪ, ಗೋಪಾಲಯ್ಯ, ದೊರಮಣ್ಣ, ಕಾದಲವೇಣಿ ಶಿವಾನಂದ, ಹರೀಶ್, ಸೊನಗಾನಹಳ್ಳಿ ಮೈಲಾರಿ ಸೇರಿದಂತೆ ಸ್ಥಳೀಯ ಗ್ರಾಮಸ್ಥರು ಮತ್ತು ಯುವಕರು ಭಾಗವಹಿಸಿದ್ದರು.