ಅದ್ಧೂರಿಯಾಗಿ ನಡೆದ ಚೆಲುವನಾರಾಯಣಸ್ವಾಮಿ ಮಹಾರಥೋತ್ಸವ

ಮೇಲುಕೋಟೆ : ಏ.05:- ಶ್ರೀ ಚೆಲುವನಾರಾಯಣಸ್ವಾಮಿಯವರ ವೈರಮುಡಿ ಬ್ರಹ್ಮೋತ್ಸವದ ಏಳನೇ ತಿರುನಾಳ್ ಅಂಗವಾಗಿ ಮಂಗಳವಾರ ಮಹಾರಥೋತ್ಸವ ಅದ್ಧೂರಿಯಾಗಿ ನೆರವೇರಿತು. ಪ್ರತಿದಿನ ಸುಡುಬಿಸಿಲಿನ ವಾತಾವರಣವಿರುತ್ತಿದ್ದ ಮೇಲುಕೋಟೆಯಲ್ಲಿ ರಥೋತ್ಸವದ ಇಡೀ ದಿನ ತಂಪಾದ ಆಹ್ಲಾದಕರ ವಾತಾವರಣ ಇದ್ದ ಕಾರಣ ಭಕ್ತರು ಅತ್ಯುತ್ಸಾಹದಿಂದ ರಥೋತ್ಸವದಲ್ಲಿ ಪಾಲ್ಗೊಂಡು ಭಕ್ತಿಪರವಶರಾಗಿ ಗೋವಿಂದನಾಮ ಜಯಘೋಷ ಮೊಳಗಿಸುತ್ತಾ ತೇರೆಳೆದರು.
ಇದೇ ಪ್ರಥಮಭಾರಿಗೆ ಲಕ್ಷಾಂತರ ಭಕ್ತರು ರಥೋತ್ಸವದಲ್ಲಿ ಭಾಗಿಯಾಗಿ ಶ್ರೀದೇವಿ-ಭೂದೇವಿ ಕಲ್ಯಾಣನಾಯಕಿ ಅಮ್ಮನವರೊಂದಿಗೆ ರಥಾರೂಢನಾದ ಚೆಲುವನಾರಾಯಣನ ದರ್ಶನ ಪಡೆದು ಪುನೀತರಾದರು. ಬೆಳಿಗ್ಗೆ 7ಗಂಟೆಯವೇಳೆಗೆ ಯಾತ್ರಾದಾನವಾದ ನಂತರ ರಾಜಮುಡಿ ಕಿರೀಟಧಾರಣೆಯೊಂದಿಗೆ ಉತ್ಸವ ನೆರವೇರಿತು. ಒಳಪ್ರಕಾರ ಮತ್ತು ಹೊರಪ್ರಕಾರದಲ್ಲಿ ಉತ್ಸವ ನಡೆದ ನಂತರ ರಥಮಂಟಪಕ್ಕೆ ಮೂರು ಪ್ರದಕ್ಷಿಣೆ ಹಾಕಿ ಮಹೂರ್ತಪಠನೆಯ ನಂತರ ರಥಾರೋಹಣ ನೆರವೇರಿಸಲಾಯಿತು.
ಮಂಡ್ಯಜಿಲ್ಲಾಧಿಕಾರಿ ಡಾ.ಹೆಚ್.ಎನ್ ಗೋಪಾಲಕೃಷ್ಣ, ಅಪರಜಿಲ್ಲಾಧಿಕಾರಿ ಡಾ.ಹೆಚ್.ಎಲ್ ನಾಗರಾಜು ಭಕ್ತರ ಜೊತೆಗೆ ಸರಪಣಿಹಿಡಿದು ತೆರೆಳೆಯುವ ಮೂಲಕ ಬೆಳಿಗ್ಗೆ 10ಗಂಟೆಗೆ ಮಹಾರಥೋತ್ಸವಕ್ಕೆ ಚಾಲನೆ ನೀಡಿದರು. ಜಯವಿಜಯರೊಂದಿಗೆ ಹೂವು, ತಳಿರುತೋರಣಗಳಿಂದ ಅಲಂಕೃತವಾದ ಚೆಲುವನಾರಾಯಣಸ್ವಾಮಿ ಮಹಾರಥ ರಥದಬೀದಿ, ಮಾರಿಗುಡಿಬೀದಿ, ರಾಜಬೀದಿ, ವಾನಮಾಮಲೆಮಠದ ಬೀದಿಗಳಲ್ಲಿ ಸಡಗರ ಸಂಭ್ರಮದೊಂದಿಗೆ ಗಾಂಭೀರ್ಯದಿಂದ ಸಂಚರಿಸಿದ ಮಹಾರಥ ಮದ್ಯಾಹ್ನ 11-45 ಗಂಟೆಯ ವೇಳೆಗೆ ನೆಲೆ ಸೇರಿತು. ಪಾಂಡವಪುರ ತಹಶೀಲ್ದಾರ್ ಸೌಮ್ಯ, ಮಾಜಿ ಸಚಿವ ಎನ್ ಚೆಲುವರಾಯಸ್ವಾಮಿ ದಂಪತಿಗಳು, ಜಯದೇವ ಆಸ್ಪತ್ರೆಯ ಗಂಗಾಧರ್, ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು. ಮೇಲುಕೋಟೆ ಇನ್ಸ್‍ಪೆಕ್ಟರ್ ಸುಮಾರಾಣಿ ಹೆಚ್ಚಿನ ಸಿಬ್ಬಂದಿಯೊಂದಿಗೆ ಹಾಜರಿದ್ದು, ಪೊಲೀಸ್ ಭದ್ರತೆ ನೀಡಿದ್ದರು.
ಹರಿದು ಬಂದ ಭಕ್ತಸಾಗರ
ಇಂದು ಮಹಾವೀರ ಜಯಂತಿಯ ಪ್ರಯುಕ್ತ ರಜಾದಿನ ಇದ್ದ ಕಾರಣ ಮಹಾರಥೋತ್ಸವಕ್ಕೆ ನಾಡಿನ ವಿವಿಧ ಭಾಗಗಳಿಂದ ಭಕ್ತಸಾಗರವೇ ಹರಿದು ಬಂದಿತ್ತು. ಮಹಾರಥೋತ್ಸವ ಮುಕ್ತಾಯವಾದ ನಂತರವೂ ಭಕ್ತರಿಂದ ಇಡೀ ದೇವಾಲಯ ಆವರಣ ಕಲ್ಯಾಣಿ, ಮತ್ತು ರಾಜಬೀದಿ ತುಂಬಿತುಳುಕುತ್ತಿತ್ತು. ನಾಡಿನ ವಿವಿಧ ಗ್ರಾಮಗಳಿಂದ ಕುಟುಂಬಸಮೇತರಾಗಿ ಬಂದ ಭಕ್ತರು ಕಲ್ಯಾಣಿಯಲ್ಲಿ ಸ್ನಾನಮಾಡಿ, ಸ್ವಾಮಿಯ ದರ್ಶನಮಾಡಿ ತೆರೊಪ್ಪತ್ತನ್ನು ಪೂರೈಸಿದರು. ಅಲ್ಲಲ್ಲಿ ಅರವಟಿಗೆ ಸ್ಥಾಪಿಸಿದ್ದ ಚೆಲುವನಾರಾಯಣಸ್ವಾಮಿ ಒಕ್ಕಲಿನವರು ಭಕ್ತರಿಗೆ ಮಜ್ಜಿಗೆ, ಪಾನಕ ನೀಡುವಮೂಲಕ ಸೇವೆ ಮಾಡಿದರು.
ಭಕ್ತರಿಗೆ ನಿರಾಸೆ
ಪ್ರತಿವರ್ಷ 3ಗಂಟೆಯವರೆಗೆ ನಡೆಯುತ್ತಿದ್ದ ರಥೋತ್ಸವ ಈ ವರ್ಷವೂ ಅದೇ ಸಮಯದವರೆಗೆ ನಡೆಯುತ್ತದೆ ಎಂದು 11-30ಗಂಟೆಯ ನಂತರ ಬಂದ ಸಹಸ್ರಾರು ಭಕ್ತರಿಗೆ ನಿರಾಸೆಯಾಯಿತು. ಇದೇ ಪ್ರಥಮ ಭಾರಿಗೆ ಎರಡು ಲಕ್ಷ ಭಕ್ತರು ರಥೋತ್ಸವಕ್ಕೆ ಆಗಮಿಸಿದ್ದರು. ರಥೋತ್ಸವ ಸಮಯವನ್ನು ಎರಡುದಿನ ಮೊದಲೇ ಭಕ್ತರಿಗೆ ತಿಳಿಸದೆ ತುರಾತುರಿಯಲ್ಲಿ ನಿರ್ಧರಿಸಿ 11-45ಗಂಟೆಯವೇಳೆಗೆ ಮುಕ್ತಾಯಗೊಳಿಸಿದ ಕಾರಣ ಭಕ್ತರಿಗೆ ನಿರಾಸೆಯಾಯಿತು. ರಥೋತ್ಸವದ ದರ್ಶನವಿಲ್ಲದೆ ದೂರದೂರುಗಳಿಂದ ಬಂದ ಭಕ್ತರು ತಮ್ಮ ಅಳಲು, ನೋವು, ಆಕ್ರೋಶ ಹೊರಹಾಕುತ್ತಿದ್ದುದು ಕಂಡು ಬಂತಾದರೂ ಭಕ್ತರ ಅಳಲಿಗೆ ಬೆಲೆಇಲ್ಲದಂತಾಗಿತ್ತು. ಆದರೆ ಇಡೀದಿನ ಚೆಲುವನಾರಾಯಣಸ್ವಾಮಿ ಭಕ್ತರಿಗೆ ತಂಪಾದ ಮತ್ತು ಆಹ್ಲಾದಕರವಾತಾವರಣ ಕರುಣಿಸಿದ್ದು ಮಾತ್ರ ವಿಶೇಷವಾಗಿತ್ತು.