ಅದ್ದೂರಿ ಕಲ್ಲುಗಾಲಿ ರಥೋತ್ಸವ ಸಮಾರಂಭ

ವಿಜಯಪುರ.ಮಾ೨೯: ಸಾಮಾಜಿಕ ಹಾಗೂ ಆಧ್ಯಾತ್ಮಿಕತೆಯ ಮೂಲಕ ಉನ್ನತಿ ಸಾಧಿಸಿ, ದೇವರ ಕೃಪೆಗೆ ಪಾತ್ರರಾಗಲು ಜಾತ್ರೆ ರಥೋತ್ಸವಗಳನ್ನು ನಡೆಸಲಾಗುತ್ತಿದೆ ಎಂದು ಶಿರಾ ತಾಲ್ಲೂಕಿನ ಪಟ್ಟನಾಯಕನಹಳ್ಳಿಯ ಶ್ರೀ ಗುರುಗುಂಡಬ್ರಹ್ಮೇಶ್ವರಸ್ವಾಮಿ ಸಂಸ್ಥಾನ ಮಠಾಧ್ಯಕ್ಷ ಶ್ರೀ ನಂಜಾವಧೂತ ಸ್ವಾಮೀಜಿರವರು ತಿಳಿಸಿದರು.
ಅವರು ಇಲ್ಲಿನ ಗುರಪ್ಪನಮಠದಲ್ಲಿರುವ ಇತಿಹಾಸ ಪ್ರಸಿದ್ಧ ಶ್ರೀ ಓಂಕಾರೇಶ್ವರಸ್ವಾಮಿ ದೇವಾಲಯದಲ್ಲಿ, ಶ್ರೀ ಓಂಕಾರೇಶ್ವರಸ್ವಾಮಿ ವಕ್ಕಲಿಗರ ಟ್ರಸ್ಟ್ ಆಶ್ರಯದಲ್ಲಿ ಏರ್ಪಡಿಸಿದ್ದ ೫೭ ನೇ ವರ್ಷದ ಶಿವಸಪ್ತಾಹ ಮತ್ತು ಪ್ರಸನ್ನ ಶ್ರೀ ಓಂಕಾರೇಶ್ವರಸ್ವಾಮಿ ಕಲ್ಲುಗಾಲಿ ಬ್ರಹ್ಮರಥೋತ್ಸವದ ಪ್ರಯುಕ್ತ ನಾನಾ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ರಥೋತ್ಸವಕ್ಕೆ ಚಾಲನೆ ನೀಡಿ, ಆಶೀರ್ವಚನ ನೀಡಿದರು.
ಸುಮಾರು ೨೫೦ ವರ್ಷಗಳ ಹಿಂದೆ ಸ್ಥಾಪನೆಗೊಂಡ ಗುರಪ್ಪನ ಮಠ ಹಾಗೂ ಶಿರಾ ಪಟ್ಟನಾಯಕನಹಳ್ಳಿಯ ಗುರುಗುಂಡ ಬ್ರಹ್ಮೇಶ್ವರ ಸ್ವಾಮಿಗಳ ಮಠ, ಎರಡೂ ಕೂಡ ಅವಧೂತ ಪರಂಪರೆಯಲ್ಲಿ ಬಂದಿದ್ದು, ಎರಡೂ ಮಠಗಳು ಜನರಲ್ಲಿ ಸಾಮಾಜಿಕವಾಗಿ ಹಾಗೂ ಆಧ್ಯಾತ್ಮಿಕವಾಗಿ ಜ್ಞಾನವಂತರನ್ನು ಮಾಡುವತ್ತ ಶ್ರಮಿಸುತ್ತಿದೆ ಎಂದು ತಿಳಿಸಿದರು.
ವರ್ಷಪೂರ್ತಿ ಶ್ರಮಪಟ್ಟು ದುಡಿಯುವ ಜನತೆಗೆ ನೆಮ್ಮದಿ, ಸಂತಸಕ್ಕಾಗಿ ಜಾತ್ರೆ ಹಾಗೂ ರಥೋತ್ಸವ ಕಾರ್ಯಕ್ರಮಗಳನ್ನು ದೇವರುಗಳ ಹೆಸರಿನಲ್ಲಿ ನಡೆಸಿಕೊಂಡು ಬರುತ್ತಿದ್ದು, ಅದರಿಂದ ಜನತೆ ಸಂತಸ ನೆಮ್ಮದಿ ಪಡೆಯಲು ಪ್ರಯತ್ನಿಸುತ್ತಿರುವರೆಂದು ತಿಳಿಸಿದರು.
ರಥೋತ್ಸವದ ಪ್ರಯುಕ್ತ ಸತ್ಯನಾರಾಯಣಪೂಜೆ, ಅಂಕುರಾರ್ಪಣೆ, ಧ್ವಜಾರೋಹಣ ಕಾರ್ಯಕ್ರಮ ಹಾಗೂ ಒಂದು ಸಪ್ತಾಹ ಹಗಲಿರುಳೂ ನಿರಂತರವಾಗಿ ಶಿವನಾಮ ಪಂಚಾಕ್ಷರೀ ಮಂತ್ರದ ಅಖಂಡಭಜನೆ ಏರ್ಪಡಿಸಲಾಗಿದ್ದು, ನಂಜಾವಧೂತ ಸ್ವಾಮೀಜಿರವರು ಇಂದು ಕೊನೆಗೊಂಡ ಭಜನಾ ಕಾರ್ಯಕ್ರಮಕ್ಕೆ ಪೂರ್ಣಾಹುತಿ ನೀಡಿದರು.
ಭಜನಾ ಕಾರ್ಯಕ್ರಮದಲ್ಲಿ ವೆಂಕಟಾಪುರ, ಬಳುವನಹಳ್ಳಿ, ಮಳ್ಳೂರು, ಹೊನ್ನಹಳ್ಳಿ, ರೆಡ್ಡಹಳ್ಳಿ, ಮಿತ್ತನಹಳ್ಳಿ, ಭಕ್ತರಹಳ್ಳಿ, ಪುರ, ಇಟ್ಟಪ್ಪನಹಳ್ಳಿ, ಯಲುವಹಳ್ಳಿ, ಮಾರಪ್ಪನಹಳ್ಳಿ, ಮುದ್ದೇನಹಳ್ಳಿ, ಐಬಸಾಪುರ, ಹೊಸಪೇಟೆ, ಕೊಮ್ಮಸಂದ್ರ, ವೆಂಕಟೇನಹಳ್ಳಿ ಮತ್ತು ವಿಜಯಪುರ ಪಟ್ಟಣದ ವಿವಿಧ ಭಜನಾಮಂಡಳಿಗಳು ಪಾಲ್ಗೊಂಡಿದ್ದರು.
ಶ್ರೀ ಓಂಕಾರೇಶ್ವರ ವಕ್ಕಲಿಗರ ಟ್ರಸ್ಟ್ ವತಿಯಿಂದ ಗಿರಿಜಾಕಲ್ಯಾಣೋತ್ಸವ ನಡೆದಿದ್ದು, ಶಿವಸಪ್ತಾಹ ಅಖಂಡಭಜನೆಯ ಸಮಾರೋಪ, ಪೂರ್ಣಾಹುತಿ, ತೀರ್ಥಪ್ರಸಾದ ವಿನಿಯೋಗ, ಕಲ್ಲುಗಾಲಿ ರಥೋತ್ಸವವು ಅದ್ದೂರಿಯಾಗಿ ನೆರವೇರಿತು.
ಪುರಸಭಾ ಮಾಜಿ ಅಧ್ಯಕ್ಷರಾದ ರಾಜೇಶ್ವರಿ ಭಾಸ್ಕರ್, ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ನಾರಾಯಣಸ್ವಾಮಿ, ಸದಸ್ಯರಾದ ನಂದಕುಮಾರ್, ಮಾಜಿ ವಿ.ಎಂ.ನಾಗರಾಜ್, ಮಾಜಿ ಸದಸ್ಯರಾದ ವೀರಣ್ಣ, ಮುನಿಕೃಷ್ಣ, ಆರ್.ಎಂ.ಸಿಟಿ ಮಂಜುನಾಥ್, ವಕ್ಕಲಿಗರ ಸಂಘದ ಅಧ್ಯಕ್ಷ ಹಾಗೂ ಪದಾಧಿಕಾರಿಗಳು, ಉಪಸ್ಥಿತರಿದ್ದರು.
೨೯ ರಂದು ಬಲಜಿಗ ಗಡ್ಡದ ವಂಶಸ್ಥರಿಂದ ರುದ್ರಾಕ್ಷಿಮಂಟಪೋತ್ಸವ, ೩೦ ರಂದು ಪೂರ್ಣಾಹುತಿ, ಧ್ವಜಾರೋಹಣ ಕಾರ್ಯಕ್ರಮಗಳು ನಡೆಯಲಿವೆ.