ಅದ್ದೂರಿ ಅಷಾಢ ಲಕ್ಷ್ಮೀ ಮೆರವಣಿಗೆ

ಚಿಕ್ಕನಾಯಕನಹಳ್ಳಿ, ಜು. ೨೫- ಆಷಾಢ ಮಾಸದಲ್ಲಿ ಲೋಕ ಕಲ್ಯಾಣಕ್ಕಾಗಿ ಆಷಾಢ ಲಕ್ಷ್ಮೀಯನ್ನು ಶ್ರದ್ಧಾ ಭಕ್ತಿಯಿಂದ ಪೂಜಿಸಲಾಗುತ್ತಿದೆ ಎಂದು ಭಾವಸಾರ ಸಮಾಜದ ಮುಖಂಡ ಜೋಗಿಹಳ್ಳಿ ಕೃಷ್ಣೋಜಿರಾವ್ ಹೇಳಿದರು.
ಪಟ್ಟಣದ ಉಡೇವು ಬೀದಿಯಲ್ಲಿ ಭಾವಸಾರ ಸಮಾಜದ ವತಿಯಿಂದ ಪ್ರತಿಷ್ಠಾಪಿಸಿದ ಆಷಾಢ ಲಕ್ಷ್ಮೀಯ ವಿಸರ್ಜನಾ ಮೆರವಣಿಗೆಯಲ್ಲಿ ಅವರು ಮಾತನಾಡಿದರು.
ಕಳೆದ ೧೯ ವರ್ಷದಿಂದ ಭಾವಸಾರ ಸಮಾಜದ ವತಿಯಿಂದ ಮಣ್ಣಿನಲ್ಲಿ ಮಾಡಿದ ಆಷಾಢ ಲಕ್ಷ್ಮೀಯನ್ನು ಒಡವೆಗಳಿಂದ ಹಾಗೂ ಹೂವಿನಿಂದ ಅಲಂಕರಿಸಿ ಮೊದಲ ದಿನ ಪೂಜಾ ವಿಧಾನದಲ್ಲಿ ಪ್ರತಿಷ್ಠಾಪಿಸಲಾಗುವುದು. ಎರಡನೇ ದಿನ ಶ್ರದ್ಧಾ ಭಕ್ತಿಯಿಂದ ಪೂಜಿಸಿ ಆರತಿ ಮಹಾಮಗಳಾರತಿಯನ್ನು ಮಾಡಿ ಪ್ರಸಾದವನ್ನು ಭಕ್ತರಿಗೆ ನೀಡಲಾಗುವುದು. ಪ್ರತಿ ವರ್ಷವು ಈ ಧಾರ್ಮಿಕ ಕಾರ್ಯವನ್ನು ಅದ್ದೂರಿಯಾಗಿ ಮಾಡಲಾಗುತ್ತಿತ್ತು. ಈ ಬಾರಿ ಸರಳವಾಗಿ ದೇವತಾ ಕಾರ್ಯವನ್ನು ಮಾಡಲಾಗಿದೆ ಎಂದರು.
ಮಣ್ಣಿನಲ್ಲಿ ಮಾಡಿದ ಆಷಾಢ ಲಕ್ಷ್ಮೀಯ ವಿಗ್ರಹವನ್ನು ಮರೆವಣಿಗೆಯೊಂದಿಗೆ ಸಿಂಗದಳ್ಳಿ ಕೆರೆಯಲ್ಲಿ ವಿಸರ್ಜಿಸಲಾಯಿತು.
ಮೆರವಣಿಗೆಯಲ್ಲಿ ಸಮಾಜದ ಹಿರಿಯ ಮುಖಂಡರಾದ ಟೈಲರ್ ವಾಸು, ಸ್ಟುಡಿಯೋ ಪ್ರೇಮ್, ನಾಗೇಶ್‌ಬಾಬು, ದೀಪು, ದಯಾನಂದ್, ನವೀನ್, ಸಮಾಜದ ಮಹಿಳೆಯರು ಭಾಗವಹಿಸಿದ್ದರು.