ಅದ್ದೂರಿ ಅಂಬಿಗರ ಚೌಡಯ್ಯನವರ ಜಯಂತ್ಯುತ್ಸವದ ಭವ್ಯ ಮೆರವಣಿಗೆ

ಕಲಬುರಗಿ:ಜ.20: ನಗರದಲ್ಲಿ ಇದೇ ಜನವರಿ 21ರಂದು ಭಾನುವಾರ ಜಿಲ್ಲಾಡಳಿತದ ಸಹಯೋಗದೊಂದಿಗೆ ನಿಜಶರಣ ಅಂಬಿಗರ ಚೌಡಯ್ಯನವರ 904ನೇ ಜಯಂತ್ಯುತ್ಸವವನ್ನು ಅದ್ದೂರಿಯಿಂದ ಆಚರಿಸಲು ನಿರ್ಧರಿಸಲಾಗಿದ್ದು, ಅದರಂತೆ ಅಂದು ನಗರದ ಸರ್ದಾರ್ ವಲ್ಲಭಬಾಯಿ ಪಟೇಲ್ ವೃತ್ತದಿಂದ ಭವ್ಯ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ ಅಂಬಿಗರ ಯುವ ಸೈನ್ಯ ಹಾಗೂ ಶ್ರೀ ನಿಜಶರಣ ಅಂಬಿಗರ ಚೌಡಯ್ಯನವರ 904ನೇ ಜಯಂತ್ಯುತ್ಸವ ಸಮಿತಿ ಅಧ್ಯಕ್ಷ ಗುಂಡು ಐನಾಪೂರ್ ಅವರು ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿ ವರ್ಷದಂತೆ ಸಂಘಟನೆಯಿಂದ ಆಚರಿಸಲಾಗುವ ಸಮಾಜದ ಶರಣ 12ನೇ ಶತಮಾನದ ಮಹಾನ್ ಸಂತ ಬಸವಾದಿ ಶರಣರ ಸಮಕಾಲೀನರಾದ ತಮ್ಮ ಗಟ್ಟಿ ವಚನಗಳ ಮೂಲಕ ಸಮಾಜದಲ್ಲಿನ ಡೊಂಕನ್ನು ತಿದ್ದಿ ನಿಜಶರಣನೆಂಬ ಕೀರ್ತಿಗೆ ಪಾತ್ರರಾದ ಶರಣ ಅಬಿಗರ ಚೌಡಯ್ಯನವರ ಜಯಂತಿಯನ್ನು ಜಿಲ್ಲೆಯ ಹಾಗೂ ಎಲ್ಲ ತಾಲ್ಲೂಕಿನ ಸಮಾಜ ಬಾಂಧವರು ಅದ್ದೂರಿಯಿಂದ ಆಚರಿಸುವರು ಎಂದರು.
ಜನವರಿ 21ರಂದು ಮಧ್ಯಾಹ್ನ 3 ಗಂಟೆಯಿಂದ ರಾತ್ರಿ ಹತ್ತು ಗಂಟೆಯವರೆಗೆ ನಿಶರಣ ಶ್ರೀ ಅಂಬಿಗರರ ಚೌಡಯ್ಯನವರ ಭವ್ಯ ಮೂರ್ತಿ ಮೆರವಣಿಗೆ ಧ್ವನಿವರ್ಧಕದೊಂದಿಗೆ ನಗರದ ಸರ್ದಾರ್ ವಲ್ಲಭಬಾಯಿ ಪಟೇಲ್ ವೃತ್ತದಿಂದ ಜಗತ್ ವೃತ್ತದವರೆಗೆ ಅಲಂಕಾರದ ಜೊತೆಗೆ ನಿಜ ಶರಣರ ವಚನ ಸಾಹಿತ್ಯದ ಮೂಲಕ ಮಾಡಲಾಗುವುದು ಎಂದು ಅವರು ತಿಳಿಸಿದರು.
ಕಾರ್ಯಕ್ರಮಕ್ಕೆ ನಗರ ಹಾಗೂ ಜಿಲ್ಲೆಯ ಎಲ್ಲ ತಾಲ್ಲೂಕುಗಳಿಂದ ಸಮಾಜ ಬಾಂಧವರು, ನಿಜಶರಣ ಅಂಬಿಗರ ಚೌಡಯ್ಯನವರ ಭಕ್ತರು ಹಾಗೂ ದಿ. ವಿಠಲ್ ಹೇರೂರ್ ಅವರ ಅಭಿಮಾನಿಗಳು ತಮ್ಮ, ತಮ್ಮ ಗ್ರಾಮ ಹಾಗೂ ತಾಲ್ಲೂಕುಗಳಲ್ಲಿ ಅಂದು ಬೆಳಿಗ್ಗೆ ಹತ್ತು ಗಂಟೆಯ ಒಳಗಾಗಿ ಕಾರ್ಯಕ್ರಮವನ್ನು ಮುಗಿಸಿ ನಗರದಲ್ಲಿ ಜರುಗುವ ಹನ್ನೊಂದು ಗಂಟೆಯ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಅವರು ಮನವಿ ಮಾಡಿದರು. ಸುದ್ದಿಗೋಷ್ಠಿಯಲ್ಲಿ ದಿಗಂಬರ್ ಮಾಗಣಗೇರಿ, ಆನಂದ್ ಕದ್ದರಗಿ, ಮಹಾಂತೇಶ್ ಹರವಾಳ್, ರವಿ ಡೊಂಗರಗಾಂವ್, ಪ್ರೇಮ್ ಕೋಲಿ, ಭೋಗೇಶ್ ಕಿರಸಾವಳಗಿ, ರಾಜು ಡಿ. ಸೊನ್ನ, ಬೆಳ್ಳಪ್ಪ ಕಿರಣಗಿ, ಸಂತೋಷ್ ಜಮಾದಾರ್, ಪ್ರವೀಣ್ ಜಮಾದಾರ್, ಶರಣು ಸಾಗನೂರ್, ಪರಮೇಶ್ವರ್ ಜಮಾದಾರ್, ರಾಮು ಹಸರಗುಂಡಗಿ, ಶರಣು ಕಿರಸವಳಗಿ ಮುಂತಾದವರು ಉಪಸ್ಥಿತರಿದ್ದರು.